ಕೇರಳ ರಾಜ್ಯ ಹಾಗೂ ಕೊಡಗು ಜಿಲ್ಲೆಗಳ ಸಂಕಷ್ಟ ನಿವಾರಣೆಗೆ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ ಜಪ ಸಹಿತ “ಶ್ರೀ ವರುಣ ಮಹಾಯಾಗ” – ಕಹಳೆ ನ್ಯೂಸ್
ಸುಳ್ಯ: ದಿನಾಂಕ 20-08-2018ನೇ ಸೋಮವಾರದಂದು ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ ಸುಳ್ಯ ಶ್ರೀ ಚೆನ್ನಕೇಶವ ದೇವಳದಲ್ಲಿ ಲೋಕಕಲ್ಯಾಣ ಹಾಗೂ ವಿಶೇಷವಾಗಿ ಈ ವರ್ಷ ಕೇರಳ ರಾಜ್ಯ ಹಾಗೂ ಕೊಡಗು ಜಿಲ್ಲೆಗಳಲ್ಲಿ ಒದಗಿ ಬಂದ ಜಲ ಗಂಡಾಂತರದಿಂದ ಸರ್ವ ಜನತೆಯನ್ನು ಪಾರು ಮಾಡಿ ಸುಭಿಕ್ಷೆ, ಸುಕ್ಷೇಮದಿಂದ ಜನರು ಬದುಕು ನಡೆಸುವಂತಾಗಲಿ, ಮುಂದೆಯೂ ಇಂಥಹ ಕಷ್ಟ ಬಾರದಿರಲಿ ಎಂಬ ಮಹಾ ಸಂಕಲ್ಪದೊಂದಿಗೆ ಶ್ರೀ ಮಹಾಗಣಪತಿ, ಆದಿತ್ಯಾದಿ ನವಗ್ರಹ ಸಹಿತ ವರುಣ ಜಪ ಪುರಸ್ಸರ ಮಹಾಯಾಗವನ್ನು ಬ್ರಹ್ಮಶ್ರೀ ವೇ| ಮೂ| ಪುರೋಹಿತ ನಾಗರಾಜ ಭಟ್ ನೇತೃತ್ವದಲ್ಲಿ ನೆರವೇರಿಸಲಾಯಿತು.
ಬೆಳಗ್ಗೆ 9ಕ್ಕೆ ವರುಣ ಜಪ ಸಹಿತ ಮಹಾಯಜ್ಞವು ಶ್ರೀ ದೇವಳದ ಜೀರ್ಣೋದ್ಧಾರ ಸಮಿತಿ ಸದಸ್ಯರಾದ ಪಡ್ಡಂಬೈಲು ವೆಂಕಟ್ರಮಣ ಗೌಡ, ರಮೇಶ ಬೈಪಡಿತ್ತಾಯ, ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಭಟ್ ವಗೆನಾಡು, ಎನ್.ಕೆ. ರಾಮಚಂದ್ರ ಭಟ್ ಕುಂಬ್ರ ಹಾಗೂ ಪೂಜಾ ಕರ್ತೃತ್ವವನ್ನು ವಹಿಸಿದ ಸಂತ್ರಸ್ತ ಊರಿನವರಾದ ಚಿದಾನಂದ ಹಾಗೂ ಶ್ರೀಮತಿ ಆರತಿ ದಂಪತಿಗಳು ದೀಪ ಬೆಳಗುವುದರೊಂದಿಗೆ ಪ್ರಾರಂಭಗೊಂಡಿದ್ದು, ಮಧ್ಯಾಹ್ನ 12.30ಕ್ಕೆ ವಸೋರ್ಧಾರಾ ಪೂರ್ಣಾಹುತಿ ನಡೆದು ಯಜ್ಞದೇವರ ಮುಂದೆ ವೈದಿಕ ವಿದ್ವಾಂಸ ಬ್ರಹ್ಮಶ್ರೀ ವೇ| ಮೂ| ಕೇಶವ ಜೋಯಿಸ ವಳಲಂಬೆ ಇವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಲಾಯಿತು.
ಶ್ರೀ ಭಾರದ್ವಾಜಾಶ್ರಮ ಅರಂಬೂರಿನ ವೇದ ವಿದ್ಯಾರ್ಥಿಗಳು, ಹಾಗೂ ವೇದ ವಿದ್ವಾಂಸರಾದ ವೇ| ಮೂ| ಹರೀಶ್ ಭಟ್ ಆಲಂಗಾರು, ವೇ| ಮೂ| ಪ್ರದೀಪ ನಾರಾಯಣ ಅಡಿಕೆಹಿತ್ಲು, ವೇ| ಮೂ| ಅಭಿರಾಮ ಭಟ್ ಸರಳಿಕುಂಜ, ವೇ| ಮೂ| ನಟರಾಜ ಶರ್ಮಾ ಸುಳ್ಯ, ವೇ| ಮೂ| ಸೂರ್ಯ ಪುರೋಹಿತ್ ಕಾರ್ಕಳ, ವೇ| ಮೂ| ಹರೀಶ್ ಪುರೋಹಿತ್ ಕಾರ್ಕಳ ಯಜ್ಞಕಾರ್ಯದಲ್ಲಿ ಸಹವೈದಿಕರಾಗಿ ಸಹಕರಿಸಿದ್ದು, ಶ್ರೀ ಚೆನ್ನಕೇಶವ ದೇವಸ್ಥಾನ ಸಂಪೂರ್ಣ ಸಹಕಾರವನ್ನು ನೀಡಿದೆ.
ಈ ಹಿಂದೆಯೂ ನಾಡಿಗೆ ಚಿಕೂನ್‍ಗುನ್ಯಾ ಎಂಬ ಮಹಾಮಾರಿ ರೋಗ ಬಂದಾಗ “ಶ್ರೀ ಧನ್ವಂತರೀ ಮಹಾಯಾಗ” ಅಲ್ಲದೇ 2012ರಲ್ಲಿ ಮಳೆಯೇ ಬಾರದಿದ್ದಾಗಲೂ ಪರ್ಜನ್ಯ ಜಪ ಸಹಿತ ಮಹಾಯಜ್ಞವನ್ನು ನೆರವೇರಿಸಿ ಯಾಗ ಪೂರ್ಣಾಹುತಿಯ ಸಂದಭದಲ್ಲಿ ಭಾರಿ ಮಳೆ ಬಂದಿದ್ದು ಸಫಲತೆಯನ್ನು ಕಂಡ ಶ್ರೀ ಪ್ರತಿಷ್ಠಾನ ಈ ವರ್ಷ ವರುಣ ದೇವ ರೌದ್ರಾವತಾರ ನಿಲ್ಲಿಸಿ ಶಾಂತವಾಗುವಂತೆ ಪ್ರಾರ್ಥಿಸಿ ಈ “ವರುಣ ಮಹಾಯಾಗ”ವನ್ನು ನಿರ್ವಹಿಸಿದೆ.
ಶ್ರೀ ಪೂಜಾ ಕರ್ತೃತ್ವವನ್ನು ಸಂತ್ರಸ್ತ ಊರಿನವರಾದ ಶ್ರೀ ಚಿದಾನಂದ ಹಾಗೂ ಶ್ರೀಮತಿ ಆರತಿ ದಂಪತಿಗಳು ವಹಿಸಿದ್ದರು. ಎಲ್ಲಾ ವೈದಿಕರು ಸೇವಾ ರೂಪದಲ್ಲಿ ಸಹಕರಿಸಿದರು.
ಶ್ರೀಯುತ ಉಪೇಂದ್ರ ಕಾಮತ್, ಶ್ರೀ ಎನ್.ಎ. ರಾಮಚಂದ್ರ ಹಾಗೂ ನೂರಾರು ಜನ ಭಕ್ತ ಬಂಧುಗಳು ಮತ್ತು ಸಂತ್ರಸ್ತ ಊರಿನ ಬಾಂಧವರು ಉಪಸ್ಥಿತರಿದ್ದರು.
ಯಜ್ಞದಲ್ಲಿ ಬಳಸಿರುವ ವಿಶೇಷ ವೇದಮಂತ್ರಗಳು (ಕೃಷ್ಣಯಜುರ್ವೇದದ 1 ಕಾಂಡದ 3 ಅಧ್ಯಾಯದ 20 ಅನುವಾಕದಲ್ಲಿ ಉಲ್ಲೇಖಿಸಿರುವ “ಸಮುದ್ರಂ ಗಚ್ಛ ಸ್ವಾಹಾಂತರಿಕ್ಷಂಗಚ್ಛ ಸ್ವಾಹಾ…..” ಮಂತ್ರವನ್ನು 10,008 ಬಾರಿ ಜಪಿಸಿ 1008 ಸಂಖ್ಯೆಯಲ್ಲಿ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿರುವ ದ್ರವ್ಯಗಳಿಂದ ಯಜ್ಞೇಶ್ವರನಿಗೆ ಆಹುತಿಯನ್ನು ನೀಡಿ ಸಮರ್ಪಿಸಲಾಯಿತು.
ಮಂತ್ರದ ಅರ್ಥ: ಹೇ.. ವರುಣದೇವಾ ನೀನು ಕಾಡಿನಲ್ಲಿ ಅಥವಾ ಕಡಲಿನಲ್ಲಿ ಬೇಕಿದ್ದರೆ ಯಥೇಚ್ಛವಾಗಿ ಸುರಿ, ಯಾಕೆಂದರೆ ಅಲ್ಲಿ ಅವುಗಳಿಗೆ ಸಹಿಸಿಕೊಳ್ಳುವ ಶಕ್ತಿ ಇದೆ. ಅದರಿಂದ ಯಾವ ಹಾನಿಯಾಗಲೀ ಸಭವಿಸದು. ಆದರೆ ಜನರು ವಾಸಮಾಡುವ ನಾಡಿನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸುರಿದರೆ, ಅದನ್ನು ಸಹಿಸಿಕೊಳ್ಳುವ ಶಕ್ತಿಯೇ ನಮಗಿರುವುದಿಲ್ಲ. ಹಾಗೂ ಮಳೆಯೇ ಬರಬಾರದೆಂದಿಲ್ಲ ಬದಲಾಗಿ ಎಲ್ಲೆಲ್ಲಿ ಅಗತ್ಯ ಇದೆಯೋ ಅಲ್ಲಲ್ಲಿ ಅಗತ್ಯಕ್ಕೆ ತಕ್ಕ ಪ್ರಮಾಣದಲ್ಲಿ ಸುರಿಯೆಬೇಕೆಂದು ವರುಣದೇವರಲ್ಲಿ ಮೊರೆಯಿಡುವ ರೀತಿಯಲ್ಲಿ ಈ ಮಂತ್ರದ ಅರ್ಥವಾಗಿರುತ್ತದೆ.