Saturday, November 23, 2024
ದಕ್ಷಿಣ ಕನ್ನಡಬೆಳ್ತಂಗಡಿರಾಜ್ಯಸುದ್ದಿ

ಬೆಳ್ತಂಗಡಿಯಲ್ಲಿ ಜಿಲ್ಲೆಯಲ್ಲಿಯೇ ಪ್ರಥಮ ಮಲಿನ ನೀರು ಶುದ್ಧೀಕರಣ ಘಟಕ ; ಶೀಘ್ರ ಲೋಕಾರ್ಪಣೆ ಮಾಡಲಾಗುವುದು ಎಂದ ಶಾಸಕ ಹರೀಶ್‌ ಪೂಂಜ – ಕಹಳೆ ನ್ಯೂಸ್

ಬೆಳ್ತಂಗಡಿ: ಮಾನವನ ನೇರ ನಿರ್ಲಕ್ಷ್ಯ ಹಾಗೂ ದುರಾಸೆಯಿಂದ ಭವಿಷ್ಯದ ಪರಿಸರ ಅಕ್ಷರಶಃ ಮಾಲಿನ್ಯಕರವಾಗಲಿದೆ. ಇದನ್ನು ಇಂದೇ ಸರಿಪಡಿಸಿ ಸುಸ್ಥಿತಿಗೆ ತರುವ ಉದ್ದೇಶದಿಂದ ಬೆಳ್ತಂಗಡಿ ಪ.ಪಂ. ಮುಂದಡಿಯಿಟ್ಟಿದ್ದು, ಪಟ್ಟಣ ವ್ಯಾಪ್ತಿಯ ಶೌಚಾಲಯದ ದ್ರವ ತ್ಯಾಜ್ಯವನ್ನು ಶುದ್ಧೀಕರಿಸಿ ಮರುಬಳಕೆಗೆ ಯೋಗ್ಯವಾಗಿಸುವ ಘಟಕ ಸ್ಥಾಪಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಕೆ.ಯು. ಎಸ್‌. ಮತ್ತು ಡಿ.ಬಿ.)ಯಿಂದ ಯೋಜನೆ ಅನುಷ್ಠಾನಗೊಳಿಸಿದ್ದು 6.7 ಕೋ.ರೂ. ಘಟಕ ವೆಚ್ಚ, 5 ವರ್ಷಗಳ ನಿರ್ವಹಣೆ, ಸಕ್ಕಿಂಗ್‌ಯಂತ್ರ ಸಹಿತ ಒಟ್ಟು 10 ಕೋ. ರೂ. ಅನುದಾನದಡಿ ಮಲಿನ ನೀರು ಶುದ್ಧೀಕರಣ ಘಟಕವನ್ನು ಹುಬ್ಬಳ್ಳಿಯ ಸಿವಿಕೆ ಗುತ್ತಿಗೆದಾರರು ಕಾಮಗಾರಿ ನಿರ್ವಹಿಸಿದ್ದಾರೆ. ಪ.ಪಂ.ಗೆ ಸೇರಿರುವ ಕೊಯ್ಯೂರು ಗ್ರಾಮದ ಅರಳಿಯಲ್ಲಿರುವ 3 ಎಕ್ರೆ ಘನತ್ಯಾಜ್ಯ ಘಟಕದಲ್ಲಿ 50 ಸೆಂಟ್ಸ್‌ ಸ್ಥಳದಲ್ಲಿ ಘಟಕ ನಿರ್ಮಿಸಲಾಗಿದೆ.

3,972 ಕಟ್ಟಡಗಳ ಮಲಿನ ನೀರು ಶುದ್ಧೀಕರಣ
ಪ.ಪಂ. ವ್ಯಾಪ್ತಿಯಲ್ಲಿರುವ 2,714 ಗೃಹ, 1,258 ವಾಣಿಜ್ಯ ಸೇರಿ 3,972 ಕಟ್ಟಡಗಳ ಶೌಚಾಲಯದ ತ್ಯಾಜ್ಯ ನೀರನ್ನು ಶುದ್ಧೀಕರಿಸುವ ಕಾರ್ಯ ಆಗಲಿದೆ. ಇದಕ್ಕೆ
ಪೂರಕವಾಗಿ ಹುಣ್ಸೆಕಟ್ಟೆ ಹಾಗೂ ರೆಂಕೆದಗುತ್ತುಗಳಲ್ಲಿನ ಪ್ರತ್ಯೇಕ ಶೌಚಾಲಯದ ನೀರಿನ ಭೂಗತ ಶೇಖರಣೆ ಘಟಕ ನಿರ್ಮಿಸಲಾಗಿದೆ. ಮನೆಗಳ ಶೌಚಾಲಯದಿಂದ ಈ ಘಟಕಕ್ಕೆ ನೇರ ಪೈಪ್‌ಲೈನ್‌ ಸಂಪರ್ಕ ನೀಡಲಾಗಿದೆ. ಕಾಲನಿ, ಪಟ್ಟಣದ ಇತರ ಗೃಹ, ವಾಣಿಜ್ಯದ ದ್ರವತ್ಯಾಜ್ಯವನ್ನು ಮುಂದೆ ಯುಜಿಡಿಗೆ ಬಿಡದೆ ನೇರವಾಗಿ ಸಕ್ಕಿಂಗ್‌ ಯಂತ್ರದ ಮೂಲಕ ಕೊಯ್ಯೂರು ಘಟಕಕ್ಕೆ ಕೊಂಡೊಯ್ದು ಶುದ್ಧೀಕರಿಸುವ ಯೋಜನೆಯಾಗಿದೆ.

ಘಟಕದ ಪ್ರಯೋಜನ
ಮಲಿನ ನೀರು ನೇರವಾಗಿ ಸಮುದ್ರ ಅಥವಾ ಹೊಳೆಗೆ ಸೇರುವುದನ್ನು ತಡೆಯುವುದು ಇದರ ಮೂಲ ಉದ್ದೇಶವಾಗಿದೆ. ಈಗಾಗಲೇ ಬೆಂಗಳೂರು ಸಹಿತ ಮಹಾನಗರಗಳಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಬೆಳ್ತಂಗಡಿ ಪ.ಪಂ. ಮುಂದಡಿಯಿಟ್ಟಿದೆ. ಶುದ್ಧೀಕರಣ ಘಟಕಕ್ಕೆ ಶೌಚಾಲಯದ ತ್ಯಾಜ್ಯನೀರು ರವಾನಿಸಲು 6,000 ಲೀಟರ್‌ ಸಾಮರ್ಥ್ಯದ ನೂತನ ಸಕ್ಕಿಂಗ್‌ ಯಂತ್ರ ಜತೆಗೆ ಪ.ಪಂ. ಹಳೆಯ 3,000 ಲೀ. ಸಾಮರ್ಥ್ಯದ ಸಕ್ಕಿಂಗ್‌ ಯಂತ್ರ
ಕಾರ್ಯಾಚರಿಸುತ್ತದೆ. ಶುದ್ಧೀಕರಣ ಘಟಕವು ಪ್ರತಿದಿನ 2,000 ಲೀ. ನೀರು ಶುದ್ಧೀಕರಣ ಸಾಮರ್ಥ್ಯ ಹೊಂದಿದೆ.

ನೀರಿನ ಮರುಬಳಕೆ ಹೇಗೆ?
ಆರು ಪ್ರತ್ಯೇಕ ಘಟಕಗಳು ವಿವಿಧ ರೀತಿಯ ಸಂಸ್ಕರಣ ತಂತ್ರಜ್ಞಾನದೊಂದಿಗೆ ಕಲ್ಮಶ ನೀರನ್ನು ಮರುಬಳಕೆಗೆ ಯೋಗ್ಯ ವಾಗುವಂತೆ ಪರಿವರ್ತಿಸುತ್ತದೆ. ಈ ನೀರು ಕುಡಿಯಲು ಯೋಗ್ಯವಲ್ಲದಿದ್ದರೂ ಕೃಷಿ, ತೋಟ, ಉದ್ಯಾನವನ, ಶೌಚಾಲಯ ಫ್ಲಶಿಂಗ್‌, ಹೂತೋಟ, ಕೈಗಾರಿಕೆಗೆ ಬಳಸಲು ಯೋಗ್ಯ ನೀರಾಗಲಿದೆ.
ಪ್ರಾಯೋಗಿಕವಾಗಿ ಈಗಾಗಲೇ ನೀರನ್ನು ಶುದ್ಧೀಕರಿಸಿ ಬಳಸಲಾಗುತ್ತಿದೆ.

ಪಟ್ಟಣದಲ್ಲಿ ವಿರೋಧ
ಈ ಹಿಂದೆ ಘಟಕವು ಪಟ್ಟಣ ವ್ಯಾಪ್ತಿಯ ರೆಂಕೆದಗುತ್ತುವಿನ ಒಂದು ಎಕ್ರೆ ಸ್ಥಳದಲ್ಲಿ ಸ್ಥಾಪಿಸಲು ಮುಂದಾಗಿ ಕಾಮಗಾರಿ ಆರಂಭಗೊಂಡಿತ್ತು. ಆದರೆ ಸ್ಥಳೀಯರು ದುರ್ವಾಸನೆ ಬೀರುತ್ತದೆ ಎಂದು ವಿರೋಧಿಸಿದ್ದರು. ಇದರಿಂದ ಕೊಯ್ಯೂರು ತ್ಯಾಜ್ಯಘಟಕ ಪ್ರದೇಶಕ್ಕೆ ಸ್ಥಳಾಂತರಗೊಂಡಿತ್ತು. ಪಟ್ಟಣ ವ್ಯಾಪ್ತಿಯಲ್ಲಿ ಇದ್ದಿದ್ದರೆ ಸಾಗಾಟ ವೆಚ್ಚ ಉಳಿತಾಯ ಸಹಿತ ಸ್ಥಳೀಯವಾಗಿ ನೀರಿನ ಮರುಬಳಕೆಗೂ ಪ್ರಯೋಜನವಾಗುತ್ತಿತ್ತು.

ಶೀಘ್ರ ಲೋಕಾರ್ಪಣೆ
ನಗರ ವ್ಯಾಪ್ತಿಯಲ್ಲಿ ಹಿಂದೆ 5 ಸೆಂಟ್ಸ್‌ವರೆಗೆ ಮನೆಗೆ ನಿವೇಶನ ನೀಡಲಾಗುತ್ತಿತ್ತು. ಭೂಮಿಯ ಕೊರತೆ ಉಂಟಾದಂತೆ ಪ್ರಸಕ್ತ ಒಂದೂವರೆ ಸೆಂಟ್ಸ್‌ ನೀಡುವಂತಾಗಿದೆ. ಇಷ್ಟು ಸಣ್ಣ ಸ್ಥಳದಲ್ಲಿ ಶೌಚಾಲಯದ ಪಿಟ್‌ ನಿರ್ಮಿಸಲು ಕಷ್ಟಸಾಧ್ಯ. ಇದಕ್ಕಾಗಿ ತ್ಯಾಜ್ಯ ನೀರು ಅಂತರ್ಜಲ ಸೇರಿ ಕಲುಷಿತವಾಗದಂತೆ ಶುದ್ಧೀಕರಣ ಘಟಕ ಸ್ಥಾಪಿಸಲಾಗಿದೆ. ಶೀಘ್ರವೇ ಲೋಕಾರ್ಪಣೆ ಮಾಡಲಾಗುವುದು.
– ಹರೀಶ್‌ ಪೂಂಜ, ಶಾಸಕರು

ಜಿಲ್ಲೆಯಲ್ಲಿ ಪ್ರಥಮ ಪ್ರಯೋಗ
ಹಸುರು ಪೀಠ ನ್ಯಾಯಾಲಯದಂತೆ ಮಲಿನ ನೀರು ಸಮುದ್ರ ಹಾಗೂ ಹೊಳೆಗೆ ಬಿಡುವಂತಿಲ್ಲ. ಅದರ ಆದೇಶದಂತೆ ಪ.ಪಂ.ನ ದೂರದೃಷ್ಟಿ ಯೋಜನೆಯಾಗಿ ಮಲಿನ ನೀರು ಶುದ್ಧೀಕರಣ ಘಟಕ ಸ್ಥಾಪಿಸಲಾಗಿದೆ. ಯುಜಿಡಿ ನೀರಿನ ಸಂಸ್ಕರಣೆ ಜಿಲ್ಲೆಯಲ್ಲಿದೆ. ಆದರೆ ಈ ಪ್ರಯೋಗ ಜಿಲ್ಲೆಯಲ್ಲೇ ಪ್ರಥಮವಾಗಿದೆ. ಮುಂದೆ ಶೌಚಾಲಯ ಅಥವಾ ತ್ಯಾಜ್ಯ ನೀರನ್ನು ನೇರವಾಗಿ ಚರಂಡಿಗೆ ಬಿಟ್ಟಲ್ಲಿ ಕ್ರಮ ವಹಿಸಲಾಗುತ್ತದೆ.
– ರಾಜೇಶ್‌, ಪ.ಪಂ. ಮುಖ್ಯಾಧಿಕಾರಿ