Thursday, January 23, 2025
ದಕ್ಷಿಣ ಕನ್ನಡಬೆಂಗಳೂರುರಾಜ್ಯಸುದ್ದಿ

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿನ ತ್ಯಾಜ್ಯ ನಿರ್ವಹಣೆ ಸಮಸ್ಯೆ ಪರಿಹಾರಕ್ಕೆ ‘ಸ್ವಚ್ಛ ಮಂದಿರ ಅಭಿಯಾನ’ : ಫೆ.10ರಂದು ಉದ್ಘಾಟನೆ – ರೋಹಿಣಿ ಸಿಂಧೂರಿ- ಕಹಳೆ ನ್ಯೂಸ್

ಬೆಂಗಳೂರು: ಭಕ್ತಾದಿಗಳಿಗೆ ದೇವಾಲಯಗಳಲ್ಲಿ ನೈರ್ಮಲ್ಯದ ವಾತಾವರಣ ಮತ್ತು ಸ್ವಚ್ಚ ಪರಿಸರವನ್ನು ನೀಡುವ ಉದ್ದೇಶವನ್ನು ಹೊಂದಿರುವ ರಾಜ್ಯ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವಚ್ಛ ಮಂದಿರ ಅಭಿಯಾನ ಉದ್ಘಾಟನೆಗೆ ಸಿದ್ದವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಫೆ. 10 ರಂದು ನಿಮಿಷಾಂಭ ದೇವಸ್ಥಾನದಿಂದ ಉದ್ಘಾಟನೆ ಮಾಡಲಾಗುವುದು ಎಂದು ರಾಜ್ಯ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಆಯುಕ್ತರಾದ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆಯನ್ನು ನೀಡಿರುವ ಅವರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯು ತನ್ನ ವ್ಯಾಪ್ತಿಯಲ್ಲಿನ ದೇವಸ್ಥಾನಗಳಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಘನ ತ್ಯಾಜ್ಯ ನಿರ್ವಹಣೆಯ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಹೊಸ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿನ ರಾಜ್ಯದ ಪ್ರಮುಖ 12 ದೇವಾಲಯಗಳಲ್ಲಿ ಸಮಗ್ರ ತ್ಯಾಜ್ಯ ನಿರ್ವಹಣೆಯ ‘ಸ್ವಚ್ಚ ಮಂದಿರ ಅಭಿಯಾನ’ದ ಅಡಿಯಲ್ಲಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದ್ದು, ಫೆ 10 ರಂದು ಮಾನ್ಯ ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಶ್ರೀ ನಿಮಿಷಾಂಬ ದೇವಸ್ಥಾನದಲ್ಲಿ ತ್ಯಾಜ್ಯ ನಿರ್ವಹಣೆ ಘಟಕವನ್ನು ಉದ್ಘಾಟಿಸಿ ನಂತರ ವಿಡಿಯೋ ಕಾನ್ಫರೆನ್ಸ್ ಮೂಲಕ ಉಳಿದ 11 ದೇವಸ್ಥಾನಗಳ ಘಟಕಗಳಿಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

‘ಸ್ವಚ್ಚ ಮಂದಿರ ಅಭಿಯಾನ’ ದ ಮೂಲಕ ದೇವಸ್ಥಾನಗಳಲ್ಲಿ ಹಾಗೂ ದೇವಸ್ಥಾನದ ಆವರಣದಲ್ಲಿ ಉತ್ಪತ್ತಿಯಾಗುವ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಸಮಸ್ಯೆಗಳಿಗೆ ಸಂಬಂಧಿಸಿದಂತಹ ಸವಾಲುಗಳಿಗೆ ವೈಜ್ಞಾನಿಕ ರೀತಿಯಲ್ಲಿ ಪರಿಹಾರಗಳನ್ನು ಒದಗಿಸಲಾಗುವುದು. ತ್ಯಾಜ್ಯ ಉತ್ಪಾದನೆಯನ್ನು ಕಡಿಮೆ ಮಾಡಲು ವ್ಯವಸ್ಥಿತ ಕ್ರಮಗಳನ್ನು ಹುಟ್ಟುಹಾಕುವುದು ಮತ್ತು ದೇವಾಲಯಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಂಗ್ರಹಿಸುವುದು, ಸಾಗಿಸುವುದು, ಸಂಸ್ಕರಿಸುವುದು ಮತ್ತು ವಿಲೇವಾರಿ ಮಾಡಲು ಅಗತ್ಯವಾದ ಬೆಂಬಲ ವ್ಯವಸ್ಥೆಗಳೊಂದಿಗೆ ಮೂಲದಲ್ಲಿ ತ್ಯಾಜ್ಯವನ್ನು ಪ್ರತ್ಯೇಕಿಸುವುದು ಮತ್ತು ತ್ಯಾಜ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಲು ಸೌಲಭ್ಯಗಳನ್ನು ಸ್ಥಾಪಿಸುವ ಮೂಲಕ ದೇವಸ್ಥಾನವನ್ನು ಸುಸ್ಥಿರ ಸಂಸ್ಥೆ ಮತ್ತು ಶೂನ್ಯ ತ್ಯಾಜ್ಯ ಆವರಣವನ್ನಾಗಿ ಮಾಡುವ ಗುರಿಯನ್ನು ಈ ಯೋಜನೆ ಹೊಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಜೀ ಅವರ ಸ್ವಚ್ಚ ಮಂದಿರ ಪರಿಕಲ್ಪನೆಯನ್ನು ರಾಜ್ಯದಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ‘ಸ್ವಚ್ಛ ಮಂದಿರ ಅಭಿಯಾನ’ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಮೊದಲ ಹಂತದಲ್ಲಿ 12 ದೇವಸ್ಥಾನಗಳಲ್ಲಿ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಪ್ರಾರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ದೇವಸ್ಥಾನಗಳಲ್ಲಿ ಅಳವಡಿಸಲಾಗುವುದು. ಈ ಸೌಲಭ್ಯದಿಂದಾಗಿ ಪ್ರತಿದಿನ ಈ ದೇವಸ್ಥಾನಗಳಲ್ಲಿ ಉತ್ಪತ್ತಿಯಾಗುವ ಸುಮಾರು 3500 ರಿಂದ 12 ಸಾವಿರ ಕೆಜಿಗಳಷ್ಟು ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗಲಿದೆ. ಭಕ್ತಾದಿಗಳಿಗೆ ಸ್ವಚ್ಚ, ಸುಂದರ ಹಾಗೂ ನೈರ್ಮಲ್ಯದ ವಾತಾವರಣ ಒದಗಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

ಮೊದಲ ಹಂತದಲ್ಲಿ ಉದ್ಘಾಟನೆಯಾಗುವ ಘನತ್ಯಾಜ್ಯ ನಿರ್ವಹಣಾ ಘಟಕಗಳನ್ನು ಹೊಂದಿರುವ ದೇವಸ್ಥಾನಗಳ ಪಟ್ಟಿ:
1. ಶ್ರೀ ನಿಮಿಷಾಂಭ ದೇವಾಲಯ, ಗಂಜಾಂ, ಶ್ರೀರಂಗಪಟ್ಟಣ, ಮಂಡ್ಯ ಜಿಲ್ಲೆ
2. ಶ್ರೀ ಬನಶಂಕರಿ ದೇವಾಲಯ, ಕರಿಯಪ್ಪ ರಸ್ತೆ, ಬೆಂಗಳೂರು ನಗರ ಜಿಲ್ಲೆ
3. ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ, ಬೆಂಗಳೂರು ಗ್ರಾಮಾಂತರ ಜಿಲ್ಲೆ
4. ಶ್ರೀ ರೇವಣ ಸಿದ್ಧೇಶ್ವರ ದೇವಾಲಯ, ರಾಮನಗರ ತಾಲ್ಲೂಕು, ರಾಮನಗರ ಜಿಲ್ಲೆ
5. ಶ್ರೀ ಕಬ್ಬಾಳಮ್ಮ ದೇವಾಲಯ, ಕನಕಪುರ ತಾಲ್ಲೂಕು, ರಾಮನಗರ ಜಿಲ್ಲೆ
6. ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯ, ರಾಮನಗರ ಜಿಲ್ಲೆ
7. ಶ್ರೀ ರಂಗನಾಥಸ್ವಾಮಿ ದೇವಾಲಯ, ಶ್ರೀರಂಗಪಟ್ಟಣ, ಮಂಡ್ಯ ಜಿಲ್ಲೆ
8. ಶ್ರೀ ಚೆನ್ನಕೇಶವಸ್ವಾಮಿ ದೇವಾಲಯ, ಬೇಲೂರು ತಾಲ್ಲೂಕು, ಹಾಸನ ಜಿಲ್ಲೆ
9. ಶ್ರೀ ದುರ್ಗಪರಮೇಶ್ವರಿ ದೇವಾಲಯ, ಮಂದಾರ್ತಿ, ದಕ್ಷಿಣ ಕನ್ನಡ ಜಿಲ್ಲೆ
10. ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯ, ನಾಯಕನಹಟ್ಟಿ, ಚಳ್ಳಕೆರೆ, ಚಿತ್ರದುರ್ಗ ಜಿಲ್ಲೆ
11. ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯ, ದೇವರಾಯನ ದುರ್ಗ, ತುಮಕೂರು ಜಿಲ್ಲ
12. ಶ್ರೀ ಪೊಳಲಿ ರಾಜರಾಜೇಶ್ವರಿ ದೇವಾಲಯ, ದಕ್ಷಿಣ ಕನ್ನಡ ಜಿಲ್ಲೆ