Friday, January 24, 2025
ಬೆಂಗಳೂರುರಾಜ್ಯಸುದ್ದಿ

ಪತ್ರಕರ್ತರ ರಾಜ್ಯ ಮಟ್ಟದ 37ನೇ ಸಮ್ಮೇಳನ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ ; ಬೇಡಿಕೆಗಳಿಗೆ ಬಜೆಟ್​ನಲ್ಲಿ ಅನುಮೋದನೆ – ಕಹಳೆ ನ್ಯೂಸ್

ವಿಜಯಪುರ: ಪತ್ರಿಕೋದ್ಯಮದ ಹರಿಕಾರ ಖ್ಯಾತಿಯ ಮೊಹರೆ ಹನುಮಂತರಾಯರ ತವರಿನಲ್ಲಿ ಪ್ರಪ್ರಥಮ ಬಾರಿಗೆ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿರುವ ಎರಡು ದಿನಗಳ ಪತ್ರಕರ್ತರ 37 ನೇ ರಾಜ್ಯಮಟ್ಟದ ಸಮ್ಮೇಳನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ವಿದ್ಯುಕ್ತ ಚಾಲನೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇಲ್ಲಿನ ಕಂದಗಲ್ಲ ಹನುಮಂತರಾಯ ರಂಗಮಂದಿರದ ಮೊಹರೆ ಹನುಮಂತರಾಯ ವೇದಿಕೆಯಲ್ಲಿ ಶನಿವಾರ ಆಯೋಜಿಸಿದ್ದ ಸಮ್ಮೇಳನವನ್ನು ಸಿಎಂ ಬೊಮ್ಮಾಯಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಶತಮಾನದ ಸಂತ ಪರಮ ಪೂಜ್ಯ ಲಿಂ. ಸಿದ್ಧೇಶ್ವರ ಶ್ರೀ ಹಾಗೂ ಮಹಾತ್ಮ ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಶುಭಾರಂಭಗೊಳಿಸಿದ ಸಿಎಂ ಬೊಮ್ಮಾಯಿ, ಪತ್ರಿಕೆಗಳು ಬೇಕಾದರೆ ಪ್ರಾದೇಶಿಕವಾಗಿರಲಿ ಆದರೆ, ಪತ್ರಕರ್ತರು ಪ್ರಾದೇಶಿಕವಾಗಿರದೇ ಅಖಂಡ ಕರ್ನಾಟಕವನ್ನು ಪ್ರತಿನಿಧಿಸುವಂತಿರಬೇಕೆಂದರು.

ಪತ್ರಕರ್ತರು-ರಾಜಕಾರಣಿ ಸಂಬಂಧ:
ಪತ್ರಕರ್ತರು ಹಾಗೂ ರಾಜಕಾರಣಿಗಳ ಮಧ್ಯೆ ಅವಿನಾಭಾವ ಸಂಬಂಧವಿದೆ. ರಾಜ್ಯದಲ್ಲಿ ಜನಾಭಿಪ್ರಾಯ ರೂಪಿಸಲು ಪತ್ರಿಕೆಗಳು ಸಹಾಯಕ. ಪತ್ರಿಕೆ ಇಲ್ಲದಿದ್ದರೆ ಏನೋ ಕಳೆದುಕೊಂಡ ಭಾವ. ಇನ್ನೊಂದೆಡೆ ರಾಜಕಾರಣಿಗಳೇ ಇಲ್ಲದಿದ್ದರೆ ಪತ್ರಿಕೆ ನಡೆಯುವುದು ಕಷ್ಟಸಾಧ್ಯ. ಇಂದಿನ ಬಹುತೇಕ ಮುಖಪುಟಗಳು ರಾಜಕೀಯಕ್ಕೆ ಸಂಬಂಧಿಸಿದ್ದಾಗಿರುತ್ತವೆ. ಹೀಗಾಗಿ ಈ ಎರಡೂ ಕ್ಷೇತ್ರಗಳಲ್ಲಿ ಆರೋಗ್ಯಕರ ವಾತಾವರಣ ನಿರ್ಮಾಣವಾಗಬೇಕು. ಮಾಧ್ಯಮ ಕ್ಷೇತ್ರ ಈಗ ಸಾಕಷ್ಟು ಬದಲಾಗಿದೆ. ಪ್ರತಿಯೊಬ್ಬ ಓದುಗ ಸಹ ಇಂದು ಪತ್ರಕರ್ತನಾಗಿದ್ದಾನೆ. ಪತ್ರಕರ್ತರ ವೃತ್ತಿ ಸವಾಲಿನಿಂದ ಕೂಡಿದೆ. ವಿಶ್ವಾಸಾರ್ಹತೆಯೇ ಪತ್ರಿಕೆಯ ಜೀವಾಳ. ಇದು ರಾಜಕಾರಣಿಗಳಿಗೂ ಅನ್ವಯ ಎಂದರು.

ಪತ್ರಕರ್ತರ ಬೇಡಿಕೆಗೆ ಮನ್ನಣೆ:
ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಬೇಡಿಕೆ ಇದ್ದು, ಅದನ್ನು ಈಡೇರಿಸಲಾಗುವುದು. ಅದಕ್ಕಾಗಿ ಬಜೆಟ್‌ನಲ್ಲಿ ಅನುದಾನ ಇರಿಸಲಾಗುವುದು. ಮಾಸಾಶನ ಹೆಚ್ಚಿಸಲಾಗುವುದು. ವಿಧಾನ ಪರಿಷತ್‌ಗೆ ಪತ್ರಕರ್ತರನ್ನೂ ನಾಮ ನಿರ್ದೇಶನ ಮಾಡಬೇಕೆಂಬ ಬೇಡಿಕೆ ಇದ್ದು, ಆ ಬಗ್ಗೆ ಯೋಚಿಸಿ ನಿರ್ಣಯ ಕೈಗೊಳ್ಳಲಾಗುವುದು. ಏಕೆಂದರೆ ನಮ್ಮಲ್ಲಿಯೇ ಪೈಪೋಟಿ ಹೆಚ್ಚಿದೆ. ಹೀಗಾಗಿ ಬರುವ ದಿನಗಳಲ್ಲಿ ಅವಕಾಶ ಸಿಕ್ಕರೆ ಆ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಸಿಎ ನಿವೇಶನ ಹಂಚಿಕೆಯಲ್ಲಿ ಮೀಸಲಾತಿ ಕಲ್ಪಿಸುವುದು, ಜಾಹಿರಾತು ದರ ಹೆಚ್ಚಿಸುವುದು ಹಾಗೂ ಯಶಸ್ವಿನಿ ಯೋಜನೆ ವ್ಯಾಪ್ತಿಗೆ ಪತ್ರಕರ್ತರನ್ನು ತರುವ ಬೇಡಿಕೆ ಇರಿಸಲಾಗಿದ್ದು ಬರುವ ಬಜೆಟ್‌ನಲ್ಲಿ ಘೋಷಣೆ ಮಾಡಿ ಅನುದಾನ ಮೀಸಲಿಡುವ ಭರವಸೆ ನೀಡಿದರು.

ಹಿರಿಯ ಸಂಪಾದಕ ರವೀಂದ್ರ ಭಟ್ ಮಾತನಾಡಿ, ಪರಮ ಪೂಜ್ಯ ಸಿದ್ಧೇಶ್ವರ ಶ್ರೀಗಳು ಹೇಳಿದಂತೆ ಈ ಪ್ರಪಂಚದಲ್ಲಿ ಒಳ್ಳೆಯದೇನಿದೆಯೋ ಅದೆಲ್ಲವೂ ಹೇಳಿಯಾಗಿದೆ, ಇನ್ನೇನಿದ್ದರೂ ಆಚರಣೆ ಮಾತ್ರ ಎಂಬಂತೆ ಎರಡು ದಿನದ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಚರಿಸೋಣ. ಪತ್ರಕರ್ತರ ಆತ್ಮಾವಲೋಕನಕ್ಕಿದು ಸಕಾಲ ಎಂದರು.

ಸಚಿವ ಗೋವಿಂದ ಕಾರಜೋಳ ಮಾತನಾಡಿ, ದೇಶದ ಸ್ವಾತಂತ್ರೃ ಚಳುವಳಿಯಲ್ಲಿ ಪತ್ರಿಕೆಗಳ ಪಾತ್ರ ಅನನ್ಯ. ಮಹಾತ್ಮ ಗಾಂಧಿ, ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ಸಹ ಪತ್ರಕರ್ತರಾಗಿದ್ದರು. ಆದರೆ, ಅಂದಿನ ಪತ್ರಿಕಾ ಕ್ಷೇತ್ರ ಈಗ ಉಳಿದಿಲ್ಲ. ಪತ್ರಿಕಾ ಕ್ಷೇತ್ರ ಉದ್ಯಮವಾಗಿದ್ದು, ಲಾಭ ನಷ್ಟದ ಲೆಕ್ಕಾಚಾರ ಶುರುವಾಗಿದೆ. ಸಾಮಾಜಿಕ ಕಳಕಳಿ ಇರುವ ಪತ್ರಿಕೆಗಳ ಪ್ರವೃತ್ತಿ ಕಡಿಮೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಇತ್ತೀಚೆಗೆ ಯುಟ್ಯೂಬ್ ಹಾವಳಿ ಹೆಚ್ಚಿದೆ. ಕಾರ್ಯನಿರತ ಪತ್ರಕರ ಸಂಘವೊಂದಿದ್ದರೆ ಪಾಸ್ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುವ ಸಂಘವೊಂದಿದೆ. ಇಲೆಕ್ಟ್ರಾನಿಕ್ ಮಾದ್ಯಮ ಮದ್ಯಮವಾಗಿದ್ದರೆ ಮುದ್ರಣ ಮಾದ್ಯಮ ಮಾತ್ರ ಇಂದಿಗೂ ತನ್ನ ಗೌರವ ಉಳಿಸಿಕೊಂಡಿದೆ ಎಂದರು.

ಜ್ಞಾನ ಯೋಗಾಶ್ರಮದ ಪರಮಪೂಜ್ಯ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅಧ್ಯಕ್ಷತೆ ವಹಿಸಿದ್ದರು.

ಸಚಿವ ಮುರುಗೇಶ ನಿರಾಣಿ ವ್ಯಂಗ್ಯಚಿತ್ರ ಪ್ರದರ್ಶನ ಉದ್ಘಾಟಿಸಿದರು. ಸಚಿವ ಸಿ.ಸಿ. ಪಾಟೀಲ, ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಎ.ಎಸ್. ಪಾಟೀಲ ನಡಹಳ್ಳಿ, ರಮೇಶ ಭೂಸನೂರ, ಸೋಮನಗೌಡ ಪಾಟೀಲ ಸಾಸನೂರ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಪಂ ಸಿಇಒ ರಾಹುಲ್ ಶಿಂಧೆ ಮತ್ತಿತರರಿದ್ದರು. ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಸ್ವಾಗತಿಸಿದರು.

ಸಾಧಕ ಪತ್ರಕರ್ತರಾದ ಸುಕನ್ಯಾ, ಬಿ.ಎನ್. ಮಲ್ಲೇಶ ಹಾಗೂ ಶಂಕರ ಪಾಗೋಜಿ ಇವರಿಗೆ ಸಾಂಕೇತಿಕವಾಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.