ರುದ್ರಗಿರಿಯ ರಣಕಹಳೆ | ಹಿಂದೂ ಜಾಗರಣ ವೇದಿಕೆ ಹೋರಾಟದ ಫಲಶ್ರುತಿ, ಶ್ರೀ ಕಾರಿಂಜೇಶ್ವರ ದೇವಸ್ಥಾನದ ಸುತ್ತ 2 ಕಿ.ಮೀ. ಗಣಿಗಾರಿಕೆ ನಿಷೇಧ : ಜಿಲ್ಲಾಡಳಿತದಿಂದ ರಾಜ್ಯ ಸರಕಾರಕ್ಕೆ ಪ್ರಸ್ತಾವ – ಕಹಳೆ ನ್ಯೂಸ್
ಬಂಟ್ವಾಳ: ಇಲ್ಲಿನ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಸುತ್ತಮುತ್ತಲ 2 ಕಿ.ಮೀ. ವ್ಯಾಪ್ತಿಯನ್ನು ಕ್ಷೇತ್ರದ ಪಾವಿತ್ರ್ಯ ಮತ್ತು ಸಂರಕ್ಷಣೆಯ ಜತೆಗೆ ಸ್ಥಳೀಯರ ಧಾರ್ಮಿಕ ಭಾವನೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಗಣಿಗಾರಿಕಾ ಚಟುವಟಿಕೆ ನಿಷೇಧಿತ ಪ್ರದೇಶವೆಂದು ಘೋಷಿಸುವ ಕುರಿತು ದ.ಕ.ಜಿಲ್ಲಾಡಳಿತ ರಾಜ್ಯ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.
ಮುಖ್ಯಮಂತ್ರಿಗಳ ನಿರ್ದೇಶನದಂತೆ ಕ್ಷೇತ್ರದ ಸುತ್ತ ಗಣಿಗಾರಿಕೆ ನಿಷೇಧಿಸುವ ನಿಟ್ಟಿನಲ್ಲಿ ಪ್ರಸ್ತಾವ ಸಲ್ಲಿಸಲು ಮಂಗಳೂರು ಸಹಾಯಕ ಕಮಿಷನರ್ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರು ಕಳೆದ ಜ. 12ರಂದು ದೇವಸ್ಥಾನದ ಸುತ್ತಮುತ್ತಲು ಜಂಟಿ ಸ್ಥಳ ಪರಿಶೀಲನೆ ನಡೆಸಿದ್ದರು.
ಈ ಪರಿಶೀಲನೆಯ ವರದಿಯ ಆಧಾರದಲ್ಲಿ ಜಿಲ್ಲಾಧಿಕಾರಿ ಡಾ| ರವಿಕುಮಾರ್ ಎಂ.ಆರ್. ಅವರು ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸರಕಾರದ ಕಾರ್ಯದರ್ಶಿ(ಗಣಿ ಮತ್ತು ಎಂಎಸ್‌ಎಂಇ) ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರಿಗೆ ಗಣಿಗಾರಿಕೆ ನಿಷೇಧದ ಕುರಿತು ಪ್ರಸ್ತಾವ ಸಲ್ಲಿಸಿದ್ದಾರೆ. ಇದರಂತೆ ಗಣಿಗಾರಿಕೆ ನಿಷೇಧಿಸಬೇಕೇ ಎಂಬುದರ ಕುರಿತು ಸರಕಾರ ನಿರ್ಧಾರ ಕೈಗೊಳ್ಳಲಿದೆ.
ಶಾಶ್ವತ ನಿಷೇಧಕ್ಕೆ ಮನವಿ
ಕಾರಿಂಜ ಪರಿಸರದಲ್ಲಿ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಲ್ಲಿಸಲು ಸರಕಾರ ಸೂಕ್ತ ಕ್ರಮಕೈಗೊಳ್ಳುವಂತೆ ಬಂಟ್ವಾಳ ಹಿಂದೂ ಜಾಗರಣ ವೇದಿಕೆಯ ಸಂಚಾಲಕ ತಿರುಲೇಶ್ ಬೆಳ್ಳೂರು ಸಹಿತ ಸ್ಥಳೀಯ ನಾಗರಿಕರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರಲ್ಲದೇ ಹೋರಾಟ, ಆಕ್ಷೇಪಣೆ, ದೂರುಗಳನ್ನು ಸಲ್ಲಿಸಿದ್ದರು.
ಕ್ಷೇತ್ರದ ಪಾವಿತ್ರ್ಯ ಮತ್ತು ಸಂರಕ್ಷಣೆಯ ಜತೆಗೆ ಸ್ಥಳೀಯ ಜನರ ಧಾರ್ಮಿಕ ಭಾವನೆಗೆ ಸ್ಪಂದಿಸುವ ನಿಟ್ಟಿನಲ್ಲಿ ಕ್ಷೇತ್ರದ ಸುತ್ತಲೂ ಗಣಿಗಾರಿಕೆ ಚಟುವಟಿಕೆಗಳನ್ನು ನಿಷೇಧಿಸಿ ರಕ್ಷಿತ ವಲಯವೆಂದು ಸರಕಾರ ಘೋಷಿಸಲು ಪ್ರಸ್ತಾವ ಸಲ್ಲಿಸಬಹುದು ಎಂದು ಅಭಿಪ್ರಾಯಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರು ಜಂಟಿ ಪರಿಶೀಲನೆಯ ವರದಿ ಸಿದ್ಧಪಡಿಸಿದ್ದರು. ಇದರ ಆಧಾರದಲ್ಲಿ ಡಿಸಿಯವರು ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ.