ಶಿವಮೊಗ್ಗ: ಇತ್ತೀಚೆಗೆ ಪ್ರತಿಷ್ಠಿತ ‘ಆಭರಣ’ ಮಳಿಗೆ ಕಂಬಳ ಗದ್ದೆಯ ವೀರ ಶ್ರೀನಿವಾಸ ಗೌಡರನ್ನು ಮಾಡೆಲ್ ಆಗಿ ಆಯ್ಕೆ ಮಾಡಿತ್ತು. ಕಂಬಳ ಕೋಣ ಸಹಿತ, ಚಿನ್ನ ತೊಟ್ಟ ಶ್ರೀನಿವಾಸ ಗೌಡ ಫೋಟೋಗೆ ಪೋಸ್ ನೀಡಿದ್ದ ಜಾಹೀರಾತು ಕಣ್ಮನ ಸೆಳೆದಿತ್ತು. ಇದೀಗ ಇದೀ ರೀತಿಯ ಮತ್ತೊಂದು ಜಾಹೀರಾತು ಜನರನ್ನು ಆಕರ್ಷಿಸಿದೆ.
ಹೌದು, ಕರಾವಳಿ ಮಲೆನಾಡು ಎಂದರೆ ಥಟ್ಟನೆ ನೆನಪಾಗುವುದು ಅಡಿಕೆ ಬೆಳೆ. ಬಹುತೇಕ ಮಂದಿ ಅಡಿಕೆ ಬೆಳೆಯನ್ನು ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಇದೀಗ ಪ್ರತಿಷ್ಠಿತ ‘ಆಭರಣ’ ಮಳಿಗೆ ರೈತನನ್ನು ರೂಪದರ್ಶಿಯಾಗಿ ಬಿಂಬಿಸಿದೆ. ಕೈಯಲ್ಲಿ ಅಡಿಕೆ ಗೊನೆ ಹಿಡಿದಿರುವ ಕೃಷಿಕನಿಗೆ ಚಿನ್ನ ತೊಡಿಸಿ ಜಾಹೀರಾತಿಗಾಗಿ ಫೋಟೋಶೂಟ್ ಮಾಡಿಸಿದ್ದು, ಬಹಳ ಸುಂದರವಾಗಿ ಮೂಡಿಬಂದಿದೆ.
‘ನಗು ಹೊತ್ತ ಧೀಮಂತ ಆಭರಣದ ಸಿರಿವಂತ’ ಎಂದು ಜಾಹೀರಾತಿಗೆ ಶೀರ್ಷಿಕೆ ನೀಡಲಾಗಿದೆ. ದೊಡ್ಡದಾಗಿ ಹಾಕಲಾದ ಜಾಹೀರಾತಿನ ಬಂಟಿಂಗ್ಸ್ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್ ಆಗಿದೆ. ಟ್ವಿಟರ್ ಬಳಕೆದಾರರೊಬ್ಬರು ಇದನ್ನು ಪೋಸ್ಟ್ ಮಾಡಿದ್ದು, ಕಳೆದ ಬಾರಿ ಕಂಬಳದ ಫೋಟೋ ಶೂಟ್, ಈ ಬಾರಿ ಅಡಿಕೆ ಕೃಷಿಕರೊಬ್ಬರ ಫೋಟೋಶೂಟ್ ಎಂದು ಶೀರ್ಷಿಕೆ ನೀಡಿದ್ದಾರೆ.
ಸದ್ಯ, ಅಡಿಕೆ ಕೃಷಿಕರ ಈ ‘ಆಭರಣ’ ಜಾಹೀರಾತು ಜನರ ಕಣ್ಮನ ಸೆಳೆದಿದೆ. ಇತ್ತೀಚೆಗಷ್ಟೇ ಆಭರಣ ಜ್ಯೂವೆಲರ್ಸ್ ಕೋಣದ ಜೊತೆಯಲ್ಲಿ ಶ್ರೀನಿವಾಸ ಗೌಡರನ್ನು ನಿಲ್ಲಿಸಿ ಶ್ರೀನಿವಾಸ ಗೌಡರಿಗೆ ಮತ್ತು ಕೋಣಕ್ಕೆ ಆಭರಣಗಳನ್ನು ಹಾಕಿ ಫೋಟೋಶೂಟ್ ಮಾಡಿಸಿತ್ತು. ಕಂಬಳ ಗದ್ದೆಯ ವೀರನನ್ನು ರೂಪದರ್ಶಿಯಾಗಿ ಪರಿಗಣಿಸಿದ್ದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಅಡಿಕೆ ಕೃಷಿಕನನ್ನು ಮಾಡೆಲ್ ಆಗಿ ಆಯ್ಕೆ ಮಾಡಿರುವುದು ಕೂಡ ನೆಟ್ಟಿಗರ ಸಂತಸಕ್ಕೆ ಕಾರಣವಾಗಿದೆ.