ಮೂರು ದಿನಗಳ ಭಾರತ ಇಂಧನ ಸಪ್ತಾಹಕ್ಕೆ ಚಾಲನೆ – ಗ್ರೀನ್ ಮೊಬಿಲಿಟಿ ರ‍್ಯಾಲಿಗೆ ಹಸಿರು ನಿಶಾನೆ ; ವಿಶ್ವದಲ್ಲಿ ಭಾರತ ಮುಂಚೂಣಿಯಲ್ಲಿರುವ ಮತ್ತೊಂದು ಕ್ಷೇತ್ರವೆಂದರೆ ಗ್ರೀನ್ ಹೈಡ್ರೋಜನ್ : ಪ್ರಧಾನಿ ಮೋದಿ ಭಾಷಣ – ಕಹಳೆ ನ್ಯೂಸ್
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಗ್ರೀನ್ ಮೊಬಿಲಿಟಿ ರ‍್ಯಾಲಿಗೆ ಬೆಂಗಳೂರಿನಲ್ಲಿ ಚಾಲನೆ ನೀಡಿದರು. ಈ ರ‍್ಯಾಲಿಯ ಮೂಲಕ ಹಸಿರು ಇಂಧನಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಉದ್ಧೇಶಿಸಲಾಗುತ್ತಿದೆ. ಹೀಗಾಗಿ ಗ್ರೀನ್ ಮೊಬಿಲಿಟಿ ರ‍್ಯಾಲಿಯಲ್ಲಿ ಹಸಿರು ಇಂಧನ ಬಳಸಿಕೊಂಡು ಸಂಚರಿಸುವ ವಾಹನಗಳು ಭಾಗವಹಿಸುತ್ತಿವೆ.
ರ‍್ಯಾಲಿಯು 42 ಕಿ.ಮೀ ಸಂಚರಿಸಲಿದ್ದು, ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಿಂದ ಆರಂಭವಾಗಿ ಮಾದಾವರ ನೀಲಕಂಠ ಪಾರ್ಕಿಂಗ್ ಮೈದಾನದಲ್ಲಿ ಮುಕ್ತಾಯವಾಗಲಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ‘ಭಾರತ ಇಂಧನ ಸಪ್ತಾಹ’ಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಖಾಸಗಿ ಸಹಭಾಗಿತ್ವ, ಹೂಡಿಕೆದಾರರಿಗೆ ಭಾರತ ಹೇಳಿ ಮಾಡಿಸಿದ ನೆಲೆಯಾಗಿದ್ದು, ಇಂಧನ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ ಎಂದು ಹೇಳುವ ಮೂಲಕ ಹೂಡಿಕೆದಾರರಿಗೆ ಮುಕ್ತ ಆಹ್ವಾನ ನೀಡಿದರು.
ಸಾಂಪ್ರದಾಯಿಕ ಹಾಗೂ ಅಸಾಂಪ್ರದಾಯಿಕ ಸೇರಿ ಹಸಿರು ಇಂಧನ ವಲಯದಲ್ಲಿ ದೊಡ್ಡ ಬದಲಾವಣೆಯಾಗುತ್ತಿದ್ದು, ಭಾರತವು ವಿಶ್ವದ ಇಂಧನ ಪರಿವರ್ತನೆಯ ಕೇಂದ್ರವಾಗುತ್ತಿದ್ದು, ಹೂಡಿಕೆದಾರರಿಗೆ ಉತ್ತಮ ಅವಕಾಶಗಳಿವೆ. ಸ್ಥಿರ ಸರ್ಕಾರ, ನಿರ್ಣಾಯಕ ನೀತಿಗಳು ಹಾಗೂ ದೇಶದ ಬಳಕೆ ಸಾಮರ್ಥ್ಯ ಒತ್ತಾಸೆಯಾಗಿ ನಿಲ್ಲಲಿದೆ ಎಂದು ಮೋದಿ ಖಾತರಿ ನೀಡಿದರು .
ಇದೇ ಸಂದರ್ಭದಲ್ಲಿ ಏಕಬಳಕೆ ಪೆಟ್ ಬಾಟಲ್ ಮರು ಬಳಸಿ ತಯಾರಿಸಿದ ಜಾಕೆಟ್, ಸೋಲಾರ್ ಕುಕ್ ಟಾಪ್ ಬಿಡುಗಡೆ ಮಾಡಿದ ಅವರು, ಹಸಿರು ಇಂಧನ ಮೂಲದಿಂದ ಚಾಲಿತ ವಾಹನಗಳಿಗೆ ಹಸಿರು ನಿಶಾನೆ ತೋರಿಸಿದರು.
ವಿಶ್ವದಲ್ಲಿ ಭಾರತ ಮುಂಚೂಣಿಯಲ್ಲಿರುವ ಮತ್ತೊಂದು ಕ್ಷೇತ್ರವೆಂದರೆ ಗ್ರೀನ್ ಹೈಡ್ರೋಜನ್: ಪ್ರಧಾನಿ ಮೋದಿ
ಭಾಷಣದ ಆರಂಭದಲ್ಲೇ ಇಂದು ಟರ್ಕಿಯಲ್ಲಿ ಭೂಕಂಪ ಸಂಭವಿಸಿ ನೂರಾರು ಮಂದಿ ಸಾವಿಗೀಡಾಗಿರುವುದನ್ನು ಪ್ರಸ್ತಾಪಿಸಿ, ಭೂಕಂಪ ಪೀಡಿತ ಜನರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ಭಾರತ ಸಿದ್ಧವಾಗಿದೆ ಎಂದು ಪ್ರಧಾನಿ ಅಭಯ ಹಸ್ತ ಚಾಚಿದರು. ಟರ್ಕಿಯಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪವನ್ನು ನಾವೆಲ್ಲರೂ ನೋಡುತ್ತಿದ್ದೇವೆ. ಹಲವಾರು ಜನರು ಸಾವನ್ನಪ್ಪಿರುವ ಮತ್ತು ಹಾನಿಯಾಗಿರುವುದಾಗಿ ವರದಿಗಳಾಗಿವೆ. ಈ ಸಂದರ್ಭದಲ್ಲಿ ಭಾರತದ 140 ಕೋಟಿ ಜನರ ಸಹಾನುಭೂತಿಯು ಭೂಕಂಪ ಪೀಡಿತ ಜನರೊಂದಿಗೆ ಇದೆ ಎಂದರು.
ಬೆಂಗಳೂರು ತಂತ್ರಜ್ಞಾನ, ಪ್ರತಿಭೆ ಮತ್ತು ನಾವೀನ್ಯತೆಯ ಶಕ್ತಿಯಿಂದ ತುಂಬಿದ ನಗರವಾಗಿದೆ. ನನ್ನಂತೆಯೇ ನೀವೂ ಸಹ ಇಲ್ಲಿನ ಯುವ ಶಕ್ತಿಯನ್ನು ಅನುಭವಿಸುತ್ತಿರಬೇಕು. ಭಾರತದ G20 ಪ್ರೆಸಿಡೆನ್ಸಿ ಕ್ಯಾಲೆಂಡರ್‌ನಲ್ಲಿ ಇದು ಮೊದಲ ಪ್ರಮುಖ ಕಾರ್ಯಕ್ರಮವಾಗಿದೆ. ಇಂದಿನಿಂದ ಆರಂಭವಾಗುತ್ತಿರುವ ಭಾರತ ಎನರ್ಜಿ ವೀಕ್ ಕಾರ್ಯಕ್ರಮಕ್ಕೆ ನಾನು ಎಲ್ಲರನ್ನು ಸ್ವಾಗತಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.
ಈ 21ನೇ ಶತಮಾನದಲ್ಲಿ ವಿಶ್ವದ ಭವಿಷ್ಯವನ್ನು ನಿರ್ಧರಿಸುವಲ್ಲಿ ಇಂಧನ ಕ್ಷೇತ್ರವು ಪ್ರಮುಖ ಪಾತ್ರ ವಹಿಸುತ್ತದೆ. ಶಕ್ತಿಯ ಹೊಸ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಶಕ್ತಿಯ ಪರಿವರ್ತನೆಯಲ್ಲಿ ಭಾರತವು ಇಂದು ಪ್ರಬಲವಾದ ಧ್ವನಿಗಳಲ್ಲಿ ಒಂದಾಗಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಸಂಕಲ್ಪದೊಂದಿಗೆ ನಡೆಯುತ್ತಿರುವ ಭಾರತದ ಇಂಧನ ಕ್ಷೇತ್ರವು ಅಭೂತಪೂರ್ವ ಸಾಧ್ಯತೆಗಳನ್ನು ಹೊಂದಿದೆ ಎಂದು ಹೇಳಿದರು.
ಸ್ಥಿರ ನಿರ್ಣಾಯಕ ಸರ್ಕಾರ, ನಿರಂತರ ಸುಧಾರಣೆಗಳು ಮತ್ತು ಸಾಮಾಜಿಕ ಆರ್ಥಿಕ ಸಬಲೀಕರಣವು ಜಾಗತಿಕ ಸವಾಲುಗಳನ್ನು ನಿಭಾಯಿಸಲು ದೇಶಕ್ಕೆ ಸಹಾಯ ಮಾಡಿದೆ. ಒಂಬತ್ತು ವರ್ಷಗಳಲ್ಲಿ, ಭಾರತದಲ್ಲಿ ಇಂಟರ್ನೆಟ್ ಸಂಪರ್ಕಗಳು ಮೂರು ಪಟ್ಟು ಬೆಳೆದಿವೆ. ಗ್ರಾಮೀಣ ಇಂಟರ್ನೆಟ್ ಸಂಪರ್ಕವು ನಗರ ಭಾರತಕ್ಕಿಂತ ವೇಗವಾಗಿ ಬೆಳೆಯುತ್ತಿದೆ. ಭಾರತದ ಇಂಧನ ಬೇಡಿಕೆ ಅತ್ಯಧಿಕ ವೇಗದಲ್ಲಿ ಬೆಳೆಯುತ್ತಿದೆ. ಭಾರತವು ಹೂಡಿಕೆದಾರರು, ಕಂಪನಿಗಳು ಮತ್ತು ಎಲ್ಲಾ ಪಾಲುದಾರರಿಗೆ ಅವಕಾಶವನ್ನು ನೀಡುತ್ತಿದೆ. ಭಾರತದ ಗ್ಯಾಸ್ ಪೈಪ್‌ಲೈನ್ ಜಾಲವು ಶೀಘ್ರದಲ್ಲೇ 35,000 ಕಿ.ಮೀ ತಲುಪಲಿದೆ. ಭಾರತದಲ್ಲಿ ಅನಿಲ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡಲು ದೊಡ್ಡ ಅವಕಾಶವಿದೆ. ಪಳೆಯುಳಿಕೆ ಇಂಧನ ಪರಿಶೋಧನೆಯಲ್ಲಿ ನಿಮ್ಮ ಭಾಗವಹಿಸುವಿಕೆಯನ್ನು ಹೆಚ್ಚಿಸಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ ಎಂದು ಮೋದಿ ಹೇಳಿದರು.
ಐಎಂಎಫ್ ವರದಿ ಪ್ರಕಾರ ಭಾರತದ ಆರ್ಥಿಕತೆ ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಎಂದ ಅವರು ಸಾಮಾಜಿಕ, ಆರ್ಥಿಕ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಒತ್ತು ನೀಡಿದೆ ಎಂದರು. ಸಾಂಪ್ರದಾಯಿಕ ಹಾಗೂ ಅಸಾಂಪ್ರದಾಯಿಕ ಸೇರಿ ಹಸಿರು ಇಂಧನ ವಲಯದಲ್ಲಿ ದೊಡ್ಡ ಬದಲಾವಣೆಯಾಗುತ್ತಿದ್ದು, ಭಾರತವು ವಿಶ್ವದ ಇಂಧನ ಪರಿವರ್ತನೆಯ ಕೇಂದ್ರವಾಗುತ್ತಿದ್ದು, ಹೂಡಿಕೆದಾರರಿಗೆ ಉತ್ತಮ ಅವಕಾಶಗಳಿವೆ. ಸ್ಥಿರ ಸರ್ಕಾರ, ನಿರ್ಣಾಯಕ ನೀತಿಗಳು ಹಾಗೂ ದೇಶದ ಬಳಕೆ ಸಾಮರ್ಥ್ಯ ಒತ್ತಾಸೆಯಾಗಿ ನಿಲ್ಲಲಿದೆ ಎಂದು ಮೋದಿ ಖಾತರಿ ನೀಡಿದರು .
ಇದೇ ಸಂದರ್ಭದಲ್ಲಿ ಏಕಬಳಕೆ ಪೆಟ್ ಬಾಟಲ್ ಮರು ಬಳಸಿ ತಯಾರಿಸಿದ ಜಾಕೆಟ್, ಸೋಲಾರ್ ಕುಕ್ ಟಾಪ್ ಬಿಡುಗಡೆ ಮಾಡಿದ ಅವರು, ಹಸಿರು ಇಂಧನ ಮೂಲದಿಂದ ಚಾಲಿತ ವಾಹನಗಳಿಗೆ ಹಸಿರು ನಿಶಾನೆ ತೋರಿಸಿದರು.