ಬ್ರಾಹ್ಮಣರೇಕೆ ಮುಖ್ಯಮಂತ್ರಿಯಾಗಬಾರದು..? ಅವರು ಭಾರತದ ಪ್ರಜೆಗಳಲ್ಲವೇ..? : ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ – ಕಹಳೆ ನ್ಯೂಸ್
ಮದ್ದೂರು: ‘ಬ್ರಾಹ್ಮಣರು ಮುಖ್ಯಮಂತ್ರಿ ಆಗುವುದಾದರೆ ಆಗಲಿ. ಅವರೇಕೆ ಮುಖ್ಯಮಂತ್ರಿಯಾಗಬಾರದು..? ಅವರು ಭಾರತದ ಪ್ರಜೆಗಳಲ್ಲವೇ..? ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರಶ್ನಿಸಿದರು.
ಪಟ್ಟಣದ ಶ್ರೀ ಹೊಳೆ ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಮಾತನಾಡಿದ ಅವರು,’ಹಿಂದಿನಿಂದಲೂ ಬ್ರಾಹ್ಮಣರ ವಿರುದ್ಧದ ಹೇಳಿಕೆಗಳು ಬರುತ್ತಿದ್ದು, ಚುನಾವಣೆ ಸಂದರ್ಭದಲ್ಲಿ ಹೆಚ್ಚಾಗುತ್ತವೆ.
ರಾಜ್ಯದಲ್ಲಿ ಬ್ರಾಹ್ಮಣ ಶಾಸಕರೆಷ್ಟಿದ್ದಾರೆ, ಎಷ್ಟು ಮಂದಿಗೆ ಸ್ಪರ್ಧಿಸಲು ಟಿಕೆಟ್ ಸಿಕ್ಕಿದೆ’ ಎಂದು ಪ್ರಶ್ನಿಸಿದರು.
‘ಬ್ರಾಹ್ಮಣರು ಕಡಿಮೆ ಇದ್ದಾರೆಂಬ ಕಾರಣಕ್ಕೆ ಏನು ಮಾತನಾಡಿದರೂ ನಡೆಯುತ್ತದೆ ಎಂದು ಮಾತನಾಡುತ್ತಾರೆ. ಹಿನ್ನೆಲೆ ಅಥವಾ ಪುರಾವೆ ಇಟ್ಟುಕೊಂಡು ಮಾತನಾಡಬೇಕು’ ಎಂದು ಪ್ರತಿಪಾದಿಸಿದರು.
‘ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಆತನ ಇಡೀ ಸಮಾಜವನ್ನು ದೂಷಿಸುವುದಾದರೆ, ಇತರೆ ಸಮಾಜದಲ್ಲಿ ನಡೆದ ವಿಚಾರವನ್ನ ಏಕೆ ಸಾಮೂಹಿಕರಣ ಮಾಡುತ್ತಿಲ್ಲ? ಪ್ರಜಾಪ್ರಭುತ್ವದಲ್ಲಿ ಯಾರಿಗೂ ಅನ್ಯಾಯವಾಗಬಾರದು. ಯಾವುದೇ ಧರ್ಮವನ್ನು ದೂಷಿಸುವುದು ಸರಿಯಲ್ಲ. ಯಾರಿಗೂ ಅನ್ಯಾಯವಾಗಬಾರದು’ ಎಂದರು.