Monday, January 20, 2025
ಸುದ್ದಿ

ಪಾಂಬೂರಿನ “ಪರಿಚಯ ಪ್ರತಿಷ್ಠಾನ”ಕ್ಕೆ ದಶಮಾನೋತ್ಸವದ ಸಂಭ್ರಮ – ಕಹಳೆ ನ್ಯೂಸ್

ಉಡುಪಿ : ನಾಡಿನ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಕಲಾ ಪರಂಪರೆಯನ್ನು ಉಳಿಸಿ, ಬೆಳೆಸಿ, ಪರಿಚಯಿಸುವ ಹೊಣೆಯೊಂದಿಗೆ ಆರಂಭಗೊಂಡ ಪರಿಚಯ ಸಂಸ್ಥೆಯು ಇದೀಗ ದಶಮಾನೋತ್ಸವವನ್ನು ಪೂರೈಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಸ್ಥೆಯ ಬಗ್ಗೆ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಕಾರ್ಯದರ್ಶಿ ಪ್ರಕಾಶ್ ನೊರೋನ್ನಾ ಅವರು, ಆಧುನಿಕ ಜೀವನ ಕ್ರಮಕ್ಕೆ ಜನ ಜೀವನ ಬದಲಾಗುತ್ತಿರುವ ಸಂದಂರ್ಭದಲ್ಲಿ ನಮ್ಮ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಕಲಾ ಪರಂಪರೆಯನ್ನು ಉಳಿಸಿ, ಬೆಳೆಸಿ ಪರಿಚಯಿಸುವ ನಿಟ್ಟಿನಲ್ಲಿ ಪರಿಚಯ ಸಂಸ್ಥೆಯು 2012ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ‘ಪರಿಚಯ’ವು ಯಾವುದೇ ಧರ್ಮ, ಜಾತಿ, ಮತ, ಭಾಷೆಗಳ ಬಂಧನವಿಲ್ಲದ ಸಮಾನ ಮನಸ್ಕರ, ಸ್ವತಂತ್ರ, ರಾಜಕೀಯೇತರ ಸಾಂಸ್ಕೃತಿಕ ಸಂಸ್ಥೆಯಾಗಿದೆ. ಇದೀಗ ಸಂಸ್ಥೆ ದಶಮಾನೋತ್ಸವವನ್ನು ಪೂರೈಸಿದ ಸಂದರ್ಭದಲ್ಲಿ ಪರಿಚಯ ಸಂಸ್ಥೆಯು ಪರಿಚಯ ಪ್ರತಿಷ್ಠಾನ ಪಾಂಬೂರು ಎಂಬ ಹೆಸರಿನೊಂದಿಗೆ ವಿಶ್ವಸ್ಥ ಸಂಸ್ಥೆಯಾಗಿ ನೋಂದಾವಣೆಗೊಂಡಿದೆ ಎಂದರು.

ದೇಶಿಯ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತ, ನೃತ್ಯ ಇತ್ಯಾದಿಗಳಿಗೆ ಪ್ರೋತ್ಸಾಹ ನೀಡುವುದು, ಪುಸ್ತಕ, ಓದು, ಬರವಣಿಗೆ ಇತ್ಯಾದಿ ಜ್ಞಾನಾಭಿವೃದ್ಧಿ ಕಾರ್ಯಕ್ರಮಗಳನ್ನು ಉತ್ತೇಜಿಸುವುದು, ಗ್ರಾಮೀಣ ಪರಿಸರದಲ್ಲಿ ರಂಗಚಟುವಟಿಕೆಗಳನ್ನು ಪ್ರೋತ್ಸಾಹಿಸುವುದರೊಂದಿಗೆ ಜನರಿಗೆ ಉತ್ತಮ ಮೌಲ್ಯಾಧಾರಿತ ಮನೋರಂಜನೆಯನ್ನು ನೀಡುವುದು ಹಾಗೂ ಜಾನಪದ ಕಲಾ ಪ್ರಕಾರಗಳನ್ನು, ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವುದು. ಮತ್ತು ದೃಶ್ಯಕಲೆ (ವೀಶುವಲ್ ಆರ್ಟ್), ಸಾದರ ಕಲೆ(ಪರ್ಫಾರ್ಮಿಂಗ್ ಆರ್ಟ್) ಗೆ ಹೆಚ್ಚಿನ ಒತ್ತು ನೀಡುವುದು, ಇತರ ಊರಿನ, ಭಾಷೆಯ, ಪ್ರಾಂತ್ಯದ, ಜನಾಂಗದ ಸಂಸ್ಕೃತಿಯನ್ನು ನಮ್ಮ ಪರಿಸರಕ್ಕೆ ಪರಿಚಯಿಸುವುದು. ನಮ್ಮ ಸಂಸ್ಕೃತಿಯನ್ನು ಇತರರಲ್ಲಿ ಹಂಚಿಕೊಳ್ಳುವುದು, ಸಾಂಸ್ಕೃತಿಕ ಕಾರ್ಯಕ್ರಮಗಳು, ಮಾಹಿತಿ, ಜಾಗೃತಿ ಶಿಬಿರಗಳು, ಕಾರ್ಯಾಗಾರಗಳನ್ನು ನಡೆಸುವುದು ಇವೇ ಮೊದಲಾದ ಧ್ಯೇಯೋದ್ದೇಶವನ್ನು ಈ ಸಂಸ್ಥೆ ಹೊಂದಿದೆ ಎಂದು ಮಾಹಿತಿ ನೀಡಿದರು.

ಹಾಗೂ ಕಳೆದ 11 ವರ್ಷಗಳಲ್ಲಿ ಸಂಸ್ಥೆಯ ಯೋಜಿತ ಉದ್ದೇಶದಂತೆ, ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿವೆ. ಪ್ರತಿ ವರ್ಷ ನಾಟಕ ಸಪ್ತಾಹಗಳನ್ನು ಆಯೋಜಿಸುವುದರ ಮೂಲಕ ಈ ವರೆಗೆ ಸರಿಸುಮಾರು 50 ವಿವಿಧ ಭಾಷೆಯ ನಾಟಕಗಳು ಇಲ್ಲಿ ಪ್ರದರ್ಶನಗೊಂಡಿವೆ. ಹಲವಾರು ಸಂಗೀತ ಕಛೇರಿಗಳು ಪರಿಚಯ ವೇದಿಕೆಯಲ್ಲಿ ಪ್ರಸ್ತುತಗೊಂಡಿವೆ. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಹಲವಾರು ಖ್ಯಾತ ಕಲಾವಿದರು. ರಂಗಕರ್ಮಿಗಳು, ಸಂಗೀತಗಾರರು ಪರಿಚಯ ವೇದಿಕೆಯಲ್ಲಿ ಕಲಾಪ್ರದರ್ಶನ ನೀಡಿದ್ದಾರೆ. ಅಲ್ಲದೆ ಕಳೆದ 11 ವರ್ಷಗಳಲ್ಲಿ ಒಂದು ಪ್ರಬುದ್ಧ ಪ್ರೇಕ್ಷಕ ವರ್ಗ ಈ ಗ್ರಾಮೀಣ ಪ್ರದೇಶದಲ್ಲಿ ತಯಾರಾದದ್ದು ಪರಿಚಯ ಸಂಸ್ಥೆಯ ಸಾಧನೆಯಾಗಿದೆ ಎಂದು ಹೇಳಿದರು.

ಇದೇ ವೇಳೆ ಸಂಸ್ಥೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಅವರು, ಪಾಂಬೂರಿನ ಪ್ರಾಕೃತಿಕ ಸೊಬಗಿನ ನಡುವೆ ಮೇರಿ ನೊರೋನ್ನಾರವರು ನೀಡಿದ ಸ್ಥಳದಲ್ಲಿ ಸಂಸ್ಥೆಯ ಕನಸಿನ ಯೋಜನೆಯಾದ ಬಯಲು ರಂಗ ರಂಗ ಪರಿಚಯ’ ನಿರ್ಮಾಣ ಹಂತದಲ್ಲಿದ್ದು ಅಂತರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದರಾದ ವಿಲ್ಸನ್ ಕಯ್ಯಾರ್ ಅವರು ವಿನ್ಯಾಸಗೊಳಿಸುತ್ತಿದ್ದಾರೆ. ಇದೇ ಫೆಬ್ರವರಿ 12ರಿಂದ 18ರ ವರಗೆ ನಡೆಯುವ ನಾಟಕ ಸಪ್ತಾಹಪರಿಚಯ ರಾಷ್ಟ್ರೀಯ ರಂಗೋತ್ಸವ 2023′ ಇದೇ ರಂಗಮಂದಿರದಲ್ಲಿ ನಡೆಯಲಿದೆ. ಈ ರಂಗೋತ್ಸವದಲ್ಲಿ ಕನ್ನಡ, ಕೊಂಕಣಿ, ತುಳು, ಹಿಂದಿ, ಬುಂಧೇಲಿ ಹೀಗೆ ಐದು ಭಾಷೆಗಳ ಏಳು ನಾಟಕಗಳ ಹಬ್ಬ ನಡೆಯಲಿದೆ ಎಂದು ತಿಳಿಸಿದರು.

ಹಾಗೂ ಮುಂದಿನ ಹಂತದಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಮಾಹಿತಿ, ಜಾಗೃತಿ ಶಿಬಿರಗಳು, ಕಾರ್ಯಾಗಾರಗಳನ್ನು ನಡೆಸಲು ಒಳಾಂಗಣ ರಂಗಮಂದಿರ, ಕಲಾವಿದರಿಗೆ ವಸತಿ ವ್ಯವಸ್ಥೆ, ಇತ್ಯಾದಿಗಳನ್ನು ನಿರ್ಮಿಸುವ ಮಹತ್ತರ ಯೋಜನೆಯು ಸಂಸ್ಥೆಗಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಅನಿಲ್ ಡೇಸಾ, ಖಜಾಂಚಿ ಐವನ್ ಪೀಟರ್, ಟ್ರಸ್ಟಿ ಅರುಳ್ ಡಿಸೋಜಾ, ಕುರ್ಕಾಲು ಸದಾಶಿವ ಬಂಗೇರ ಉಪಸ್ಥಿತರಿದ್ದರು.