ಮಂಗಳೂರು: ಫೆಬ್ರವರಿ 11ರಂದು ಗೃಹ ಸಚಿವ ಅಮಿತ್ ಶಾ ಪುತ್ತೂರಿಗೆ ಆಗಮಿಸುತ್ತಿದ್ದು, ಈ ಹಿನ್ನೆಲೆ ಎಲ್ಲೆಡೆ ಕೇಸರಿ ಪತಾಕೆ ಎಲ್ಲೆಡೆ ರಾರಾಜಿಸ್ತಾ ಇದ್ದು, ಭರ್ಜರಿ ತಯಾರಿ ನಡೆಯುತ್ತಿದೆ.
ಅಮಿತ್ ಶಾ ಪುತ್ತೂರು ಆಗಮನದ ಬಳಿಕ ಮಂಗಳೂರಿಗೆ ಆಗಮಿಸಲಿದ್ದು, ಈ ಹಿನ್ನೆಲೆ ಮಂಗಳೂರಿನಲ್ಲಿ ರೋಡ್ ಶೋ ನಿಗದಿಯಾಗಿತ್ತು. ಆದ್ರೆ ಇದೀಗ ಈ ರೋಡ್ ಶೋ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಲಾಗಿದೆ.
ಕಾವೂರಿನಿಂದ ಪದವಿನಂಗಡಿ ಮೇರಿಹಿಲ್‍ವರೆಗೆ ಸುಮಾರು ಎರಡೂವರೆ ಕಿಮೀ ಉದ್ದಕ್ಕೆ ರೋಡ್ ಶೋನಲ್ಲಿ ಅಮಿತ್ ಶಾ ಭಾಗವಹಿಸುವುದು ಬಹುತೇಕ ಫಿಕ್ಸ್ ಆಗಿತ್ತು. ಈ ಮಧ್ಯೆ ಪದವಿನಂಗಡಿ ನಡುವೆ ಬರುವ ಕೊರಗಜ್ಜನ ಗುಡಿಯಲ್ಲಿ ಫೆ.11 ರಂದು ಕೋಲ ನಡೆಯುವ ವಿಷಯ ಗೊತ್ತಾಗಿದೆ. ಅಂದು ರೋಡ್ ಶೋ ನಡೆಸಿದರೆ ಕೋಲಕ್ಕೆ ಹಾಗೂ ಅಲ್ಲಿನ ಜನರಿಗೆ ತೊಂದರೆಯಾಗುತ್ತದೆ ಎಂದು ಭಾವಿಸಿ ಬಿಜೆಪಿ ನಾಯಕರು ಅಮಿತ್ ಶಾಗೆ ವಿಷಯ ತಿಳಿಸಿದ್ದಾರೆ. ಕೊರಗಜ್ಜನ ಕೋಲಕ್ಕೆ ತೊಂದರೆಯಾಗುವುದಾದರೆ ರೋಡ್ ಶೋವನ್ನೇ ರದ್ದು ಮಾಡಿ ಎಂದು ಅಮಿತ್ ಶಾ ಬಿಜೆಪಿ ನಾಯಕರಿಗೆ ಹೇಳಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆ ಮಂಗಳೂರಿನಲ್ಲಿ ಆಯೋಜನೆಗೊಂಡ ರೋಡ್ ಶೋ ಮಂಗಳೂರು ವಿಮಾನ ನಿಲ್ದಾಣ ಮತ್ತು ಮರವೂರು ಸೇತುವೆ ಮಧ್ಯೆ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.