ಉಡುಪಿ, ಆ 24 : ಮಹಾಮಳೆ ಮತ್ತು ಜಲಪ್ರಳಯದಿಂದ ಕಂಗಾಲಾಗಿರುವ ಕೊಡಗು ಜಿಲ್ಲೆಯ ಸಂತ್ರಸ್ತರಿಗೆ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಇದೀಗ ನಿರಾಶ್ರಿತರ ನೆರವಿಗೆ ಉಡುಪಿಯ ಕೃಷ್ಣ ಮಠ ಮುಂದಾಗಿದ್ದು, ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಒಂದು ಗ್ರಾಮವನ್ನು ದತ್ತು ಪಡೆದು ಪುನರ್‌ನಿರ್ಮಾಣ ಮಾಡುವುದಾಗಿ ತಿಳಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸ್ತ್ರಗಳಲ್ಲಿ ಹೇಳಿರುವಂತೆ ಅಷ್ಟ ಭಾವಪುರುಷಗಳಲ್ಲಿ ದಯೆ ಎಂಬುದು ಭಗವಂತನಿಗೆ ಅತ್ಯಂತ ಪ್ರಿಯವಾದುದು. ಆದ್ದರಿಂದ ಕಷ್ಟದಲ್ಲಿರುವವರಿಗೆ ಕರುಣೆ ಮತ್ತು ದಯೆಯಿಂದ ಸಹಾಯ ಮಾಡಿದರೆ ಅವರಲ್ಲಿರುವ ಭಗವಂತ ಸಂತುಷ್ಟನಾಗುತ್ತಾನೆ. ಇದೀಗ ಕೊಡಗಿನಲ್ಲಿ ಸಂಕಷ್ಟಕ್ಕೀಡಾಗಿರುವವರಿಗೆ ಹೆಗಲು ಕೊಡುವುದು ನಮ್ಮ ಕರ್ತವ್ಯ. ಸಂತ್ರಸ್ತರ ಸೇವೆ ಮಾಡುವುದು ದೇವರ ಪೂಜೆಯಷ್ಟೇ ಶ್ರೇಷ್ಠವಾದುದು ಎಂದು ಹೇಳಿದ್ದಾರೆ.
ಸಾರ್ವಜನಿಕರ ನೆರವಿನಿಂದ ಕೊಡಗಿನ ಗ್ರಾಮವನ್ನು ಪುನರ್ ನಿರ್ಮಾಣ ಮಾಡಿ ಅಭಿವೃದ್ಧಿ ಪಡಿಸುವುದಾಗಿ ಶ್ರೀಗಳು ಹೇಳಿದ್ದಾರೆ. ಈ ನಡುವೆ ಯಾವುದೇ ರೀತಿಯಲ್ಲಿಯೂ ಅತಿವೃಷ್ಟಿ, ಅನಾಹುತಗಳು ಘಟಿಸದಂತೆ ವಿಶೇಷ ಪ್ರಾರ್ಥನೆಯನ್ನು ಶ್ರೀಕೃಷ್ಣನ ಸನ್ನಿಧಾನದಲ್ಲಿ ಶ್ರೀಗಳು ನೇರವೇರಿಸಿದ್ದಾರೆ.
.