ಹರಿಯಾಣದ ಮಹಿಳಾ ವೈದ್ಯರಿಗೆ ಡ್ರೆಸ್ ಕೋಡ್ – ಶಾರ್ಟ್ಸ್, ಜೀನ್ಸ್, ಸ್ಕರ್ಟ್,ಟೈಟ್ ಪ್ಯಾಂಟ್, ಬ್ಯಾಕ್‌ಲೆಸ್ ಟಾಪ್, ಡೀಪ್ ನೆಕ್ ಟಾಪ್, ಮೇಕಪ್ ಬ್ಯಾನ್ ; ಮಾತ್ರವಲ್ಲದೇ ಉಗುರುಗಳನ್ನು ಉದ್ದವಾಗಿ ಬೆಳೆಸುವಂತಿಲ್ಲ – ಕಹಳೆ ನ್ಯೂಸ್
ಚಂಡೀಗಢ: ಹರಿಯಾಣ (Haryana) ಸರ್ಕಾರ ರಾಜ್ಯದಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ (Govt Hospital) ಕೆಲಸ ಮಾಡುವ ವೈದ್ಯರಿಗೆ (Doctors) ಏಕರೂಪತೆಯನ್ನು ತರಲು ಹಾಗೂ ರೋಗಿಗಳಿಗೆ ಸಿಬ್ಬಂದಿಯನ್ನು ಗುರುತಿಸಲು ಸುಲಭವಾಗುವಂತೆ ಹೊಸ ಡ್ರೆಸ್ ಕೋಡ್ (Dress Code) ನೀತಿಯನ್ನು ಪ್ರಕಟಿಸಿದೆ.
ಮೂಲಗಳ ಪ್ರಕಾರ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಡೆನಿಮ್ ಜೀನ್ಸ್, ಪಲಾಝೋ ಪ್ಯಾಂಟ್, ಬ್ಯಾಕ್‌ಲೆಸ್ ಟಾಪ್ಸ್ ಹಾಗೂ ಸ್ಕರ್ಟ್ಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಮಹಿಳಾ ವೈದ್ಯರು ಮೇಕಪ್ ಹಾಗೂ ಭಾರವಾದ ಆಭರಣಗಳನ್ನು ಧರಿಸುವಂತಿಲ್ಲ ಮಾತ್ರವಲ್ಲದೇ ಉಗುರುಗಳನ್ನು ಉದ್ದವಾಗಿ ಬೆಳೆಸುವಂತಿಲ್ಲ. ಪುರುಷರು ತಮ್ಮ ಕಾಲರ್‌ಗಿಂತಲೂ ಉದ್ದವಾಗಿ ಕೂದಲನ್ನು ಬೆಳೆಸುವಂತಿಲ್ಲ ಎನ್ನಲಾಗಿದೆ.
ಫೆಬ್ರವರಿ 9 ರಂದು ಹೊರಡಿಸಲಾದ ಈ ಹೊಸ ನೀತಿಯನ್ನು ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ತಿಳಿಸಲಾಗಿದೆ. ಡ್ರೆಸ್ ಕೋಡ್ ಅನ್ನು ಅನುಸರಿಸದ ಸಿಬ್ಬಂದಿ ಕರ್ತವ್ಯಕ್ಕೆ ಗೈರುಹಾಜರೆಂದು ಪರಿಗಣಿಸಲಾಗುತ್ತದೆ ಮತ್ತು ಕಠಿಣ ಕ್ರಮಕ್ಕೆ ಒಳಗಾಗುತ್ತಾರೆ ಎಂದು ಆದೇಶಿಸಲಾಗಿದೆ.
ಇಷ್ಟಕ್ಕೂ ಹರಿಯಾಣದಲ್ಲಿ ವೈದ್ಯರಿಗೆ ಡ್ರೆಸ್ ಕೋಡ್‌ನ ಅಗತ್ಯವೇನು ಎಂದು ನೋಡಲು ಹೋದರೆ, ಆಸ್ಪತ್ರೆಗಳಲ್ಲಿ ರೋಗಿಗಳು ಹಾಗೂ ವೈದ್ಯರ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯುವುದು ಕಷ್ಟವಾಗುತ್ತಿದೆ. ಇದಕ್ಕಾಗಿ ಸಿಬ್ಬಂದಿಗೆ ಡ್ರೆಸ್ ಕೋಡ್ ಅನ್ನು ಅಳವಡಿಸಲಾಗಿದೆ. ಇದರಿಂದ ಸಿಬ್ಬಂದಿ ಸದಸ್ಯರ ದೃಷ್ಟಿಕೋನ ಹೆಚ್ಚಲಿದ್ದು, ರೋಗಿಗಳಿಗೆ ಉತ್ತಮ ಆರೋಗ್ಯ ಸೌಲಭ್ಯ ಪಡೆಯಲು ಸಹಾಯವಾಗುತ್ತದೆ ಎಂದು ಹರಿಯಾಣದ ಆರೋಗ್ಯ ಸಚಿವ ಅನಿಲ್ ವಿಜ್ ತಿಳಿಸಿದ್ದಾರೆ.
ನಾವು ಖಾಸಗಿ ಆಸ್ಪತ್ರೆಗೆ ಹೋದಾಗಲೆಲ್ಲಾ ಅಲ್ಲಿನ ಒಬ್ಬ ಸಿಬ್ಬಂದಿಯೂ ಸಮವಸ್ತ್ರವಿಲ್ಲದೆ ಕಾಣಿಸಿಕೊಳ್ಳುವುದಿಲ್ಲ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗಿಲ್ಲ. ಯಾರೊಬ್ಬರೂ ಸಮವಸ್ತ್ರವನ್ನು ಧರಿಸುವುದಿಲ್ಲ. ಇದರಿಂದ ರೋಗಿಗಳು ಹಾಗೂ ವೈದ್ಯರ ನಡುವೆ ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ. ಹೀಗಾಗಿ ಈ ಹೊಸ ನಿಯಮವನ್ನು ಜಾರಿಗೊಳಿಸಲಾಗಿದೆ ಎಂದು ವಿಜ್ ತಿಳಿಸಿದ್ದಾರೆ.
ವರದಿಗಳ ಪ್ರಕಾರ ಆಸ್ಪತ್ರೆ ಸಿಬ್ಬಂದಿ ಯಾವುದೇ ಬಣ್ಣದ ಡೆನಿಮ್ ಜೀನ್ಸ್ ಧರಿಸುವಂತಿಲ್ಲ. ಸ್ವೆಟ್ ಶರ್ಟ್, ಡೆನಿಮ್ ಸ್ಕರ್ಟ್, ಶಾರ್ಟ್ಸ್, ಸ್ಟ್ರೆಚ್ ಮಾಡಬಹುದಾದ ಟೀ ಶರ್ಟ್‌ಗಳು ಅಥವಾ ಪ್ಯಾಂಟ್‌ಗಳು, ಟೈಟ್ ಪ್ಯಾಂಟ್‌ಗಳು, ಸೊಂಟದವರೆಗಿನ ಟಾಪ್‌ಗಳು, ಸ್ಟ್ರಾಪ್‌ಲೆಸ್ ಟಾಪ್, ಬ್ಯಾಕ್‌ಲೆಸ್ ಟಾಪ್, ಕ್ರಾಪ್ ಟಾಪ್, ಡೀಪ್ ನೆಕ್ ಟಾಪ್, ಆಫ್ ಶೋಲ್ಡರ್ ಬ್ಲೌಸ್ ಮತ್ತು ಸ್ನೀಕರ್ಸ್ ಅಥವಾ ಚಪ್ಪಲಿಗಳನ್ನೂ ಧರಿಸುವಂತಿಲ್ಲ ಎನ್ನಲಾಗಿದೆ. ಈ ನೀತಿ ವೈದ್ಯರಿಗೆ ಹಾಗೂ ನರ್ಸ್‌ಗಳಿಗೆ ಸೇರಿದಂತೆ ಆಸ್ಪತ್ರೆಯ ಭದ್ರತಾ ಸಿಬ್ಬಂದಿ, ವಾಹನ ಚಾಲಕರು, ನೈರ್ಮಲ್ಯ ಸಿಬ್ಬಂದಿ ಮತ್ತು ಅಡುಗೆಮನೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೂ ಡ್ರೆಸ್ ಕೋಡ್ ಒಳಗೊಳ್ಳುತ್ತದೆ ಹಾಗೂ ಅವುಗಳನ್ನು ಸರಿಯಾಗಿ ಧರಿಸುವಂತೆ ತಿಳಿಸಲಾಗಿದೆ.