ಮಂದಾರಬೈಲು ಶ್ರೀ ದುರ್ಗಾಪರಮೇಶ್ವರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ : ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ, ಆನುವಂಶಿಕ ಮೊಕ್ತೇಸರ ಲಕ್ಷ್ಮೀನಾರಾಯಣ ಆಸ್ರಣ್ಣ –ಕಹಳೆ ನ್ಯೂಸ್
ದೇರೆಬೈಲು ಬಳಿಯ ಮಂದಾರಬೈಲು ಶ್ರೀ ದುರ್ಗಾಪರಮೇಶ್ವರೀ ವೆಂಕಟರಮಣ ದೇವಸ್ಥಾನದಲ್ಲಿ ಫೆ.9ರಂದು ಆರಂಭವಾಗಿ ಫೆ.11ರವರೆಗೆ ಗಣಯಾಗ, ಶತಚಂಡಿಕಾಯಾಗ, ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ.
ನಿನ್ನೆ ದೇವಸ್ಧಾನದಲ್ಲಿ ಸಭಾ ಕಾರ್ಯಕ್ರಮ ನಡೆದಿದ್ದು, ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ, ಆನುವಂಶಿಕ ಮೊಕ್ತೇಸರ ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನ ನೀಡಿದರು.
ಹಿಂದು ಧರ್ಮವೆಂದರೆ ಜೀವನ ಧರ್ಮ. ಇಂದು ಮನುಷ್ಯನಿಗೆ ಬೇಕಾದ ಭೌತಿಕ ವಸ್ತುಗಳೆಲ್ಲವೂ ಮಾರುಕಟ್ಟೆಯಲ್ಲಿ ದೊರಕುತ್ತದೆ. ಆದರೆ ಅವಶ್ಯವಾಗಿ ಬೇಕಾದ ನೆಮ್ಮದಿ, ಸುಖ, ಶಾಂತಿ ಧಾರ್ಮಿಕ ಆರಾಧನೆಯಲ್ಲಿ ಮಾತ್ರ ಸಿಗಲು ಸಾಧ್ಯ.. ಇಂದು ಭಾರತ ವಿಶ್ವಮಾನ್ಯವಾಗಿದೆ. ಜಗತ್ತಿನ ಎಲ್ಲ ಧರ್ಮದವರೂ ಭಾರತೀಯ ಧಾರ್ಮಿಕ ಚಿಂತನೆಗೆ ಮಾರು ಹೋಗುತ್ತಿದ್ದಾರೆ. ಯೋಗ, ಧ್ಯಾನ, ಧರ್ಮಾಚರಣೆಯಿಂದ ಜೀವನದಲ್ಲಿ ನೆಮ್ಮದಿ ಸಾಧ್ಯ. ಸನಾತನ ವರ್ಷಗಳಿಂದ ನಮ್ಮ ಹಿರಿಯರು ಧಾರ್ಮಿಕ ಕಟ್ಟುಪಾಡು, ಆಚರಣೆಯ ಮೌಲ್ಯಗಳನ್ನು ಮನಗಾಣಿಸಿದ್ದಾರೆ. ಮಕ್ಕಳಲ್ಲಿ ಉತ್ತಮ ಸಂಸ್ಕೃತಿ, ಸಂಸ್ಕಾರ, ಧಾರ್ಮಿಕ ಆಚರಣೆಯ ಮೌಲ್ಯವನ್ನು ಉದ್ಧೀಪನಗೊಳಿಸುವ ಕಾರ್ಯವನ್ನು ಮಾತೆಯರು ಮಾಡಬೇಕಿದೆ. ಇದರಿಂದ ಸಂಸ್ಕಾರಯುತ ಸಮಾಜ ನಿರ್ಮಾಣ ಸಾಧ್ಯ ಎಂದರು.
ಧರ್ಮದ ಅನುಷ್ಠಾನದಿಂದ ಜೀವನ ನಡೆಸಿದಾಗ ಮಾತ್ರ ಸಂಸಾರದಲ್ಲಿ ಸುಖ, ಶಾಂತಿ, ನೆಮ್ಮದಿ ಸಾಧ್ಯ. ಧಾರ್ಮಿಕ ಆಚರಣೆಗಳು, ಪುರಾಣಕತೆಗಳು, ಯಕ್ಷಗಾನದಂತಹ ಆರಾಧನೆಗಳ ಮೂಲಕವೂ ಧಾರ್ಮಿಕ ಅನುಷ್ಠಾನ ಸಾಧ್ಯ. ಅಂತಹ ಪ್ರಯತ್ನಕ್ಕೆ ಪೂರಕವಾಗಿ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ಅರ್ಥಪೂರ್ಣ. ಜನ ಸನ್ಮಾರ್ಗದಲ್ಲಿ ನಡೆಯಲು ಪೂರಕ. ಧರ್ಮದ ಅಡಿಯಲ್ಲಿ ಬದುಕಿದಾಗ ಮಾತ್ರ ರಾಮರಾಜ್ಯ ಸಾಧ್ಯ ಎಂದರು.
ಇನ್ನು ಶಾರದಾ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ಬಿ ಪುರಾಣಿಕ್ ಮಾತನಾಡಿ ಹಿರಿಯರು ಕೊಟ್ಟ ಆಧ್ಯಾತ್ಮ ಶಕ್ತಿ ಸನಾತನ ಹಿಂದು ಧರ್ಮದ ಜೀವಾಳ, ಇದನ್ನು ಅರಿತು ಧರ್ಮಪಥದಲ್ಲಿ ನಡೆಯಬೇಕಿರುವುದು ನಮ್ಮೆಲ್ಲರ ಕರ್ತವ್ಯ. ಧಾರ್ಮಿಕ ಕಾರ್ಯಗಳಿಗೆ ಸಹಕಾರ ನೀಡುವುದು ನಮ್ಮ ಆದ್ಯತೆಯಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಮಂದಾರಬೈಲು ಶ್ರೀ ದುರ್ಗಾಪರಮೇಶ್ವರೀ ವೆಂಕಟರಮಣ ದೇವಸ್ಥಾನದ ತಂತ್ರಿ, ಮಾರ್ಗದರ್ಶಕ ಬ್ರಹ್ಮಶ್ರೀ ವಿಠಲದಾಸ ತಂತ್ರಿ ಆಶೀರ್ವಚನ ನೀಡಿದರು. ಶಾಸಕ ಡಾ.ವೈ.ಭರತ್ ಶೆಟ್ಟಿ, ಮಂಗಳೂರು ಮೇಯರ್ ಜಯಾನಂದ ಅಂಚನ್, ವಿಶ್ವ ಹಿಂದು ಪರಿಷತ್‌ನ ಕರ್ನಾಟಕ ದಕ್ಷಿಣ ಪ್ರಾಂತ್ಯ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಕಾರ್ಪೋರೇಟರ್ ಶಶಿಧರ್ ಹೆಗ್ಡೆ, ಕಾರ್ಪೋರೇಟರ್ ರಂಜಿನಿ ಕೋಟ್ಯಾನ್, ಕೊಂಚಾಡಿ ದುರ್ಗಾಪರಮೇಶ್ವರಿ ನಾಗಕನ್ನಿಕಾ ದೇವಸ್ಥಾನದ ಜೆ.ಬಾಲಕೃಷ್ಣ ಕೊಟ್ಟಾರಿ, ಶ್ರೀನಿವಾಸ ಕಲ್ಯಾಣೋತ್ಸವ ಸೇವಾ ಸಮಿತಿ ಅಧ್ಯಕ್ಷ ದುರ್ಗಾದಾಸ್ ಇರ್ವತ್ತಾಯ, ಕಾರ್ಯಾಧ್ಯಕ್ಷ ಲಕ್ಷ್ಮಣ್ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಕಡಂಬಾರ್ ಉಪಸ್ಥಿತರಿದ್ದರು. ಸುಧಾಕರ್ ಪೇಜಾವರ ಮತ್ತು ಮುರಳಿ ಭಾರಾಧ್ವಜ್ ಕಾರ್ಯಕ್ರಮ ನಿರೂಪಿಸಿದರು.
‘ಸನಾತನ ನಾಟ್ಯಾಂಜಲಿ’
ಕಾರ್ಯಕ್ರಮದ ಬಳಿಕ ಸನಾತನ ನಾಟ್ಯಾಲಯದ ಕಲಾವಿದರಿಂದ ‘ಸನಾತನ ನಾಟ್ಯಾಂಜಲಿ’ ಕಾರ್ಯಕ್ರಮ ನಡೆಯಿತು.
ಹೊರೆಕಾಣಿಕೆ ಮೆರವಣಿಗೆ
ಕ್ಷೇತ್ರದಲ್ಲಿ ಬೆಳಗ್ಗೆ ತೋರಣ ಮುಹೂರ್ತ, ಗಣಯಾಗ, ಏಕಾದಶ ರುಧ್ರಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ ನಡೆಯಿತು. ಬಳಿಕ ಶರವು ಶ್ರೀ ಮಹಾಗಣಪತಿ ದೇವಸ್ಥಾನ ಶಿಲೆ ಶಿಲೆ ಆಡಳಿತ ಮೊಕ್ತೇಸರ ರಾಘವೇಂದ್ರ ಶಾಸ್ತ್ರಿ ಹಾಗೂ ಧಾರ್ಮಿಕ ಪರಿಷತ್ ಸದಸ್ಯ ಗಿರಿಪ್ರಕಾಶ್ ತಂತ್ರಿ, ವಿಶ್ವ ಹಿಂದೂ ಪರಿಷತ್ ನ ಶರಣ್ ಪಂಪುವೆಲ್, ಗೋಪಾಲ್ ಕುತ್ತಾರ್ , ಶಿವಾನಂದ ಮೈಂಡನ್, ಪುನೀತ್ ಅತ್ತಾವಾರ, ನವೀನ್ ಮೂಡುಶೆಡ್ಡೆ , ದೀಪಕ್ ಮರೋಳಿ, ರವಿ ಆಸೈಗೋಳಿ ಅಜಿತ್ ಕಾವೂರು,ಗುರು ಪ್ರಸಾದ್ ಉಳ್ಳಾಲ, ಹರೀಶ್ ಶೇಟ್ ಉಪಸ್ಥಿತಿಯಲ್ಲಿ ಹೊರೆಕಾಣಿಕೆ ಮೆರವಣಿಗೆ ನಡೆಯಿತು.
ಕಲ್ಯಾಣೋತ್ಸವ ಕಾರ್ಯಕ್ರಮದ ವಿವರ
11ನೇ ಫೆಬ್ರವರಿಯಂದು ಮಂದಾರಬಯಲು ಕಲ್ಯಾಣೋತ್ಸವದಂದು, ಬೆಳಿಗ್ಗೆ ಗಂಟೆ10 ರಿಂದ 11.30 ರವರೆಗೆ ಅಭಿಷೇಕ, ಪುಷ್ಪಾರ್ಚನೆ ಮತ್ತು ಸಾಮೂಹಿಕ ವಿಷ್ಣುಸಹಸ್ರನಾಮ ಪಾರಾಯಣ. 11.45ಕ್ಕೆ ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ. ಮದ್ಯಾಹ್ನ 12.00ಗಂಟೆಗೆ ಅನ್ನ ಸಂತರ್ಪಣೆ ನಡೆದು ಸಂಜೆ 3.00 ರಿಂದ ಕಲ್ಯಾಣೋತ್ಸವ ದಿಬ್ಬಣ ಮೆರವಣಿಗೆ – ಕೊಂಚಾಡಿ ಬ್ರಿಗೇಡ್ ಪಿನಾಕಲ್ ವಸತಿ ಸಮುಚ್ಚಯದ ಬಳಿಯಿಂದ ನಡೆಯಲಿದೆ. ಸಂಜೆ 6 ರಿಂದ 8ವರಗೆ ಗೋದೂಳಿ ಲಗ್ನದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸೇವೆ ಮತ್ತು ಮಹಾ ಮಂಗಳಾರತಿ ಸೇವೆ ನಡೆದು, ರಾತ್ರಿ 8.00ಗಂಟೆಯಿAದ ಅನ್ನಸಂತರ್ಪಣೆ ನಡೆಯಲಿದೆ ಎಂದು ಶ್ರೀನಿವಾಸ ಕಲ್ಯಾಣೋತ್ಸವದ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಗುರು ಪ್ರಸಾದ್ ಕಡಂಬಾರ್ ತಿಳಿಸಿದರು.