ಅಮಿತ್ ಷಾ ಇಂದು ಉದ್ಘಾಟಿಸಲಿರುವ ಹನುಮಗಿರಿಯ ‘ಅಮರಗಿರಿ’ ಹೇಗಿದೆ..? ಇಲ್ಲಿನ ವಿಶೇಷತೆ ಏನು ಗೊತ್ತಾ..? – ಕಹಳೆ ನ್ಯೂಸ್
ಹುಲ್ಲು ಹಾಸಿನ ಪ್ರಕೃತಿ ರಮಣೀಯ ಪ್ರದೇಶ, ಕಲ್ಲಿನ ಮೆಟ್ಟಿಲು ಹೆಜ್ಜೆ ಹಾಕಿದಷ್ಟು ದೂರಕ್ಕೂ ಮುದ ನೀಡುವ ತಾಣ. ಸುಂದರ ಪ್ರವೇಶ ದ್ವಾರ.. ದೇವರ ದರ್ಶನದೊಮದಿಗೆ ನೋಡಿದಷ್ಟು ಮತ್ತೆಮತ್ತೇ ನೋಡ ಬೇಕೆನ್ನುವಷ್ಟು ಕಣ್ಣಿಗೆ ಹಬ್ವವನ್ನ ತುಂಬಿಸೋ ಸೋಬಗಿನ ಸಿರಿ ಹೊದ್ದ ಜಾಗವೇ ಹನುಮಗಿರಿ ಕ್ಷೇತ್ರ.. ಇಲ್ಲಿಯವರೆಗೂ ಹನುಮಗಿರಿ ಪಂಚಮುಖಿ ಆಂಜನೇಯ ಕ್ಷೇತ್ರಕ್ಕೆ ಭೇಟಿ ಕೊಟ್ಟು, ದೇವರಿಗೆ ಕೈ ಮುಗಿದು ಪ್ರಕೃತಿ ಸೌಂದರ್ಯವನ್ನ ಸವಿದ ಅನುಭವ ಒಂದು ಕಡೆಯಾದ್ರೆ ಇದೀಗ ಮತ್ತಷ್ಟು ವಿಶೇಷತೆಗಳೊಂದಿಗೆ ವಿನೂತನವಾಗಿ ಹನುಮಗಿರಿಯಲ್ಲಿ ಅಮರಗಿರಿ ತಲೆ ಎತ್ತಿ ನಿಂತಿದೆ.
ಧರ್ಮಶ್ರೀ ಪ್ರತಿಷ್ಠಾನದ ವತಿಯಿಂದ ನಿರ್ಮಾಣವಾಗಿರುವ ಭಾರತ ಮಾತಾ ಮಂದಿರ ಅಮರಗಿರಿಯನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟನೆಮಾಡಲಿದ್ದಾರೆ.
ಅಮರಗಿರಿ ಹೇಗಿದೆ..?
ಕನ್ಯಾಕುಮಾರಿ ಬಿಟ್ಟರೆ ಭಾರತ ಮಾತೆಯ ಎರಡನೇ ಮಂದಿರ ಇದುವೇ.. ಶ್ರೀ ಹನುಮಗಿರಿ ಕ್ಷೇತ್ರದಲ್ಲಿ – ದೇಶಪೂಜನ ಕಲ್ಪನೆಯ ಅಮರಗಿರಿ ತಲೆಎತ್ತಿ ನಿಂತಿದ್ದು, ಶ್ರೀ ಕ್ಷೇತ್ರ ಹನುಮಗಿರಿಯು ಅಮರಯೋಧ ಶ್ರೀ ಆಂಜನೇಯ ಸ್ವಾಮಿಯ ಶಕ್ತಿ, ಸಾನ್ನಿಧ್ಯಗಳ ಭವ್ಯಕ್ಷೇತ್ರ, ಇಲ್ಲಿರುವ ‘ಅಮರಗಿರಿ’ಯು ಭಾರತಮಾತೆ, ಯೋಧರು ಹಾಗೂ ಅನ್ನದಾತರನ್ನು ನೆನಪಿಸುವ, ಗೌರವಿಸುವ ತಾಣ. ಆಂಜನೇಯ, ಕೋದಂಡರಾಮರು ನೆಲೆಯಾದ ಪುಣ್ಯ ಕ್ಷೇತ್ರ. ‘ಹನುಮಗಿರಿ, ರಾಮಗಿರಿ’ಯ ದರ್ಶನದ ಬಳಿಕ ‘ಅಮರಗಿರಿ’ಯ ವೀಕ್ಷಣೆಯು ಮುದ ನೀಡುತ್ತದೆ.
ಮೊದಲಿಗೆ ಶ್ರೀ ಭಾರತೀ ಅಮರ ಜ್ಯೋತಿ ಮಂದಿರದ ವೀಕ್ಷಣೆ. ಬಳಿಕ ಭಾರತಾಂಬೆಯನ್ನು ಕೊಂಡಾಡುವ ‘ವಂದೇ ಮಾತರಂ’ ಶಿಲಾ ಫಲಕ ದರ್ಶನ. ಫಲಕದ ಹಿಂದೆ ಯೋಧನ ಪ್ರತಿಮೆ ವೀಕ್ಷಿಸಬಹುದಾಗಿದೆ.
ಮುಂದೆ ವಿಸ್ಮಯ ತಂತ್ರಜ್ಞಾನದ ಅಷ್ಟಭುಜಾಕಾರದ ಆಲಯವು ಮನ ಸೆಳೆಯುತ್ತದೆ. ಗಿರಿಯನ್ನು ಇಳಿಯುತ್ತಾ ಬರುತ್ತಿದ್ದಂತೆ ಕೈಯಲ್ಲಿ ರಾಷ್ಟ್ರಧ್ವಜವನ್ನು ಹಿಡಿದ ಯೋಧರ ಹಸ್ತ ಆಕಾರದ ಶಿಲ್ಪ. ಇದು ಅಮರ ಯೋಧರ ವಿಜಯದ ಸಂಕೇತ, ಮುಂದೆ ಸಿಗುವುದು ‘ವೀರಕಂಭ.’ ಭಾರತದ ಮೂರು ಮಾನಗಳಾದ ‘ಭು, ವಾಯು ಮತ್ತು ಜಲ ಸೇನೆ’ಗಳ ಲಾಂಛನಗಳನ್ನು ಹೊತ್ತ ಸ್ಥಂಭ. ಶಿಲೆಯಲ್ಲಿ ಅಮರಜ್ಯೋತಿ ಮತ್ತು ಗಡಿಯಲ್ಲಿ ಕಾವಲು ಕಾಯುತ್ತಿರುವ ವೀರ ಸೈನಿಕರ ಶಿಲ್ಪಾಕೃತಿಗಳು ಭವ್ಯ ಭಾರತದ ರಕ್ಷಣಾ ವ್ಯವಸ್ಥೆಯನ್ನು ನೆನಪಿಸುತ್ತದೆ. ಇವೆಲ್ಲವನ್ನೂ ವೀಕ್ಷಿಸುತ್ತಾ ಅಷ್ಟಭುಜಾಕೃತಿಯ ಆಲಯವನ್ನು ಒಳಹೊಕ್ಕಾಗ ಶ್ವೇತವರ್ಣದ ಅಮೃತಶಿಲೆಯ “ಭಾರತ ಮಾತೆ’ಯ ಆರಡಿ ಎತ್ತರದ ವಿಗ್ರಹ. ಹಿಂದೆ ಅಖಂಡ ಭಾರತದ ಚಿತ್ತಾರದಲ್ಲಿ ಆಂಜನೇಯ ಮತ್ತು ಪಾರ್ವತೀ ಪರಮೇಶ್ವರರ ನೆಲೆ.
ಭಾರತಮಾತೆಯ ಎಡ, ಬಲಗಳಲ್ಲಿ ಮೂರಡಿ ಎತ್ತರದ ರೈತ ಮತ್ತು ಯೋಧರ (ಜೈ ಜವಾನ್, ಜೈ ಕಿಸಾನ್) ಪ್ರತಿಮೆಗಳು. ‘ದೇಶಕ್ಕೆ ಅನ್ನ ನೀಡುವ ರೈತ ಮತ್ತು ಗಡಿಗಳಲ್ಲಿ ಕಾವಲು ಕಾಯುವ ಯೋಧ’ – ಇವರೀರ್ವರು ದೇಶದ ಉಸಿರೆಂಬ ಸಂಕೇತ. ಸಂಬ ಸಂಕೇತ, ಭಾರತಾಂಬೆಯ ಎದುರಿಗೆ ‘ಅಮರ ಜವಾನ್’ ಸ್ಮಾರಕ ಶಿಲೆ. ನೇಪಥ್ಯದಲ್ಲಿ ಸೂರ್ಯೋದಯದ ಕಲ್ಪನೆಯ ರಚನೆಗಳು. ನಮ್ಮೆಲ್ಲರ ಬದುಕಿನ ಸೂರ್ಯೋದಯಕ್ಕೆ ಕಾರಣರಾದ ಯೋಧರ ಸಾಹಸ, ಸಾಧನೆ, ಬಲಿದಾನಗಳನ್ನು ಮತ್ತೆ ಮತ್ತೆ ನೆನಪಿಸುವ, ಗೌರವಿಸುವ ಉಪಾಧಿಯಿದು.
ಮೇಲ್ಬಾಗದಲ್ಲಿ ಸಮರ್ಥ, ಸಮೃದ್ಧ ಭಾರತವನ್ನು ಕಟ್ಟಿದ ದಾರ್ಶನಿಕರ, ವೀರ ಸೇನಾನಿಗಳ ತೈಲಶಿಲ್ಪಗಳು ತ್ಯಾಗ, ಶೌರ್ಯದ ಇತಿಹಾಸವನ್ನು ಕಣ್ಣೆದುರು ನಿಲ್ಲಿಸುತ್ತವೆ. ಭವ್ಯ ಭಾರತವನ್ನು ನಿರೂಪಿಸಿದ ಇವರೆಲ್ಲರ ಇತಿಹಾಸಗಳ ಪ್ರಸ್ತುತಿ ಚೇತೋಹಾರಿ, ಸುಮಾರು ನೂರು ಮಂದಿ ಕುಳಿತುಕೊಳ್ಳಬಹುದಾದಷ್ಟು ವಿಶಾಲ ಸ್ಥಳ.
ಅಮರಗಿರಿಯ ಆವರಣದಲ್ಲಿ ಯುದ್ಧಭೂಮಿಯ ವರ್ಲಿ ಚಿತ್ತಾರಗಳು. ಒಂದೊAದು ಚಿತ್ರಗಳಲ್ಲಿ ದೇಶ, ಸೈನ್ಯದ ಕುರಿತಾದ ಕುರುಹುಗಳು. ಭಾರತಾಂಬೆಯು ಆರಾಧ್ಯ ದೇವತೆ, ಭಕ್ತಿ-ನಂಬುಗೆಗಳೇ ಪೂಜೆ. ರಾಷ್ಟ್ರಭಕ್ತಿಯು ಅನುಷ್ಠಾನವೇ ಪುಷ್ಪಾರ್ಚನೆ.. ಹೀಗೆ ಉದಾತ್ತ ಕಲ್ಪನೆ. “ಇಂದು ಭಾರತ ದೇಶವು ಜಗತ್ತಿನ ಮಹಾ ನಾಯಕನ ಸ್ಥಾನದಲ್ಲಿದೆ. ಭಾರತ ದೇಶದ ರಕ್ಷಣೆಯಲ್ಲಿ ಅನೇಕ ಸಾಹಸಿಗರ ತ್ಯಾಗ, ಬಲಿದಾನಗಳು ಮಹತ್ತರವಾದುದು, ಇವರೆಲ್ಲರ ಜೀವನವನ್ನು ನೆನಪಿಸಿಕೊಳ್ಳುವುದು ಮುಖ್ಯವಾಗುತ್ತದೆ. ಅವರು ಬಿಟ್ಟುಹೋದ ಬದುಕಿನ ಮಾದರಿಗಳನ್ನು ಯಥಾಸಾಧ್ಯ ಅನುಷ್ಠಾನಗೊಳಿಸುವುದಲ್ಲದೆ, ನಮ್ಮೊಳಗೆ ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿಯನ್ನು ಉದ್ದೀಪನಗೊಳಿಸುವುದು” ಅಮರಗಿರಿಯ ಉದ್ದೇಶ ಮತ್ತು ಸಂದೇಶ, ಆಲಯದ ಮುಂಭಾಗ, ಹಿಂಭಾಗಗಳಲ್ಲಿಯೋಧರ ಹುಮ್ಮಸ್ಸಿನ ಬಿಂಬ-ಪ್ರತಿಬಿAಬ, ಬದುಕಿಗೆ ಜೀವನಧರ್ಮ ಬೋಧಿಸಿದ ‘ಗೀತೋಪದೇಶ’ದ ಸಂದೇಶ, ಹನುಮಂತ ವೀರ ಯೋಧ, ಆತ ಅಮರ, ಅವನ ಸಾನ್ನಿಧ್ಯದ ‘ಅಮರಗಿರಿ’ಯು ಸ್ಪೂರ್ತಿಯ ಸಂಕೇತ.
ದೇವತಾರಾಧನೆ, ರಾಷ್ಟ್ರಾರಾಧನೆ, ಕಲಾರಾಧನೆ, ನಿಸರ್ಗಾರಾಧನೆಗಳ ಮೂಲಕ ಭವ್ಯ ಭಾರತವನ್ನು ಕಟ್ಟುವ ಪ್ರಕ್ರಿಯೆಗಳಿಗೆ ‘ಅಮರಗಿರಿ’ ಆರಂಭದ ತಾಣವಾಗಿದೆ. ‘ಬದುಕು ಸಮಾಜಕ್ಕಾಗಿ – ಪ್ರಾಣ ದೇಶಕ್ಕಾಗಿ’ ಎನ್ನುವ ಸಂದೇಶಗಳು ಮನದೊಳಗೆ ಇಳಿಯುತ್ತವೆ. ಒಳಹೊಕ್ಕು ಹೊರ ಬರುವಾಗ ‘ದೇಶಪೂಜನ’ದ ಅನುಭಾವ.
ಇನ್ನು ಪ್ರತೀ ಶನಿವಾರ, ಭಾನುವಾರ ಅಮರಗಿರಿ ತೆರೆದಿರಲಿದ್ದು, ಪ್ರವಾಸಿಗರು ಆಗಮಿಸಿ ಕಣ್ತುಂಬಿಕೊಳ್ಳಬಹುದಾಗಿದೆ. ಈ ಎರಡು ದಿನ ರಾತ್ರಿ ವೇಳೆ ವಿದ್ಯುತ್ ದೀಪಾಲಂಕಾರವಿರುತ್ತದೆ. ಸುಮಾರು 2.5 ಎಕರೆ ಜಾಗದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ. ಸಾಕಷ್ಟು ದಾನಿಗಳು ಕೂಡ ನೆರವಾಗಿದ್ದಾರೆ.