ಯಕ್ಷಗಾನ ಭಾಗವತ ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಗೆ ‘ಬೊಂಡಾಲ’ ಪ್ರಶಸ್ತಿ ; ಫೆ. 17 ಕ್ಕೆ ಪ್ರಶಸ್ತಿ ಪ್ರದಾನ – ಕಹಳೆ ನ್ಯೂಸ್
ಬಂಟ್ವಾಳ : ಹಳೆ ತಲೆಮಾರಿನ ಅರ್ಥಧಾರಿ ದಿ.ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ಅವರ ಪುತ್ರ ಹವ್ಯಾಸಿ ಯಕ್ಷಗಾನ ಕಲಾವಿದ, ದಿ.ಬೊಂಡಾಲ ರಾಮಣ್ಣ ಶೆಟ್ಟರ ಹೆಸರಿನಲ್ಲಿ ನೀಡಲಾಗುವ ಬೊಂಡಾಲ ಪ್ರಶಸ್ತಿಗೆ ಕಟೀಲು ಮೇಳದ ಭಾಗವತ ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಆಯ್ಕೆಯಾಗಿದ್ದಾರೆ.
ಬೊಂಡಾಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಟೀಲು ಮೇಳದಲ್ಲಿ ಸೇವೆಸಲ್ಲಿಸಿದ ಕಲಾವಿದರಿಗಾಗಿ ಉದ್ಯಮಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಅವರು ನೀಡುತ್ತಿರುವ ವಾರ್ಷಿಕ ಪ್ರಶಸ್ತಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸಂಚಾಲಕರಾಗಿರುವ ಆಯ್ಕೆ ಸಮಿತಿ 2022 – 23 ನೇ ಸಾಲಿಗೆ ಪುಂಡಿಕಾಯಿ ಅವರ ಹೆಸರನ್ನು ಸೂಚಿಸಿದೆ. ಪ್ರಶಸ್ತಿಯು ರೂ. 10,000 ನಗದು ಒಳಗೊಂಡಿದೆ.
ಫೆ. 17 ಕ್ಕೆ ಪ್ರಶಸ್ತಿ ಪ್ರದಾನ
ಫೆ. 16 ರಂದು ಬಂಟ್ವಾಳ ತಾಲೂಕು ಶಂಭೂರು ಗ್ರಾಮದ ಬೊಂಡಾಲದಲ್ಲಿ ಶ್ರೀ ದುರ್ಗಾಪರಮೇಶ್ವರಿ ಬಯಲಾಟ ಸೇವಾ ಸಮಿತಿ ಮತ್ತು ಹತ್ತು ಸಮಸ್ತರ ವತಿಯಿಂದ ‘ದಾನಶೂರ ಕರ್ಣ’ ಹಾಗೂ 17 ರಂದು ಬೊಂಡಾಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ‘ಶ್ರೀದೇವಿ ಮಹಾತ್ಮೆ’ ಸೇವಾ ಬಯಲಾಟಗಳು ಜರಗಲಿವೆ.
ಫೆ.17 ರಂದು ಶುಕ್ರವಾರ ರಾತ್ರಿ ದಿ.ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ದಿ.ಬೊಂಡಾಲ ರಾಮಣ್ಣ ಶೆಟ್ಟಿ ಸಂಸ್ಮರಣಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ಅಧ್ಯಕ್ಷತೆಯಲ್ಲಿ ಕಟೀಲು ಕ್ಷೇತ್ರದ ಆರ್ಚಕ ಅನಂತಪದ್ಮನಾಭ ಆಸ್ರಣ್ಣ ಆಶೀರ್ವಚನ ನೀಡುವರು. ಮಾಜಿ ಸಚಿವ ಬಿ. ರಮಾನಾಥ ರೈ, ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅತಿಥಿಗಳಾಗಿ ಭಾಗವಹಿಸುವರು ಎಂದು ಬೊಂಡಾಲ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.