Saturday, January 25, 2025
ದಕ್ಷಿಣ ಕನ್ನಡಬೆಂಗಳೂರುಬೆಳ್ತಂಗಡಿರಾಜ್ಯಸುದ್ದಿ

ರಬ್ಬರ್‌ ಬೆಳೆಗೆ ಬಜೆಟ್‌ನಲ್ಲಿ ಬೆಂಬಲ ಬೆಲೆ – ಕೇರಳ ಮಾದರಿ ಪರಿಹಾರಕ್ಕೆ ಆಗ್ರಹ ; ಉಜಿರೆ ರಬ್ಬರ್‌ ಸೊಸೈಟಿ ನೇತೃತ್ವದಲ್ಲಿ ಶಾಸಕ ಹರೀಶ್‌ ಪೂಂಜ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ತೋಟಗಾರಿಕೆ ಸಚಿವ ಮುನಿರತ್ನ ಅವರನ್ನು ಭೇಟಿ ಮಾಡಿ ರಬ್ಬರ್‌ ಕೃಷಿಕರ ಸಮಸ್ಯೆ ಕುರಿತು ಮನವರಿಕೆ – ಕಹಳೆ ನ್ಯೂಸ್

ಬೆಳ್ತಂಗಡಿ: ವರ್ಷದ ಎಲ್ಲ ದಿನಗಳಲ್ಲೂ ಆದಾಯ ತರುವಂತಹ ಬೆಳೆ ರಬ್ಬರ್‌. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಅಡಿಕೆಯ ಜತೆಗೆ ಮುಖ್ಯ ವಾಣಿಜ್ಯ ಬೆಳೆಯಾಗಿ ರಬ್ಬರನ್ನು ಅವಲಂಬಿ ಸಿದ್ದರೂ ಐದು ವರ್ಷಗಳಿಂದ ಉತ್ತಮ ಧಾರಣೆ ಕಾಣದಿರುವ ಹಿನ್ನೆಲೆಯಲ್ಲಿ ಮಕ್ಕಳಂತೆ ಸಲಹಿದ ರಬ್ಬರ್‌ ಮರಗಳ ಬುಡಕ್ಕೆ ಕೊಡಲಿ ಏಟು ಹಾಕಬೇಕಾದ ಅನಿವಾರ್ಯ ಪರಿಸ್ಥಿತಿ ಒದಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯದಲ್ಲಿ 60 ಸಾವಿರ ಹೆಕ್ಟೇರ್‌ಗೂ ಮೇಲ್ಪಟ್ಟು ಪ್ರದೇಶದಲ್ಲಿ ರಬ್ಬರ್‌ ಬೆಳೆಯಲಾಗುತ್ತಿದೆ. ದ.ಕ., ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಯ 5 ಲಕ್ಷಕ್ಕೂ ಹೆಚ್ಚು ಬೆಳೆಗಾರರಿದ್ದಾರೆ. 12 ವರ್ಷಗಳ ಹಿಂದೆ ಕೆಜಿಗೆ 250 ರೂ. ಆಸುಪಾಸಿನಲ್ಲಿದ್ದ ಧಾರಣೆ ಇಂದು 130-150 ರೂ. ಆಸುಪಾಸಿನಲ್ಲಿದೆ.

ಕೇರಳದಲ್ಲಿ 2015-16ರ ಬಜೆಟ್‌ ನಲ್ಲಿ ಬೆಳೆಗಾರರ ರಕ್ಷಣೆಗಾಗಿ ರಬ್ಬರು ಉತ್ಪಾ ದನ ಪ್ರೋತ್ಸಾಹಧನ ಯೋಜನೆ ಯಡಿ ಪ್ರತೀ ಕೆಜಿಗೆ 170 ರೂ. ಕನಿಷ್ಠ ಧಾರಣೆ ನಿಗದಿ ಪಡಿಸಿ, ಮಾರುಕಟ್ಟೆ ಧಾರಣೆ ಮತ್ತು ಬೆಂಬಲ ಬೆಲೆಯ ವ್ಯತ್ಯಾಸದ ಮೊತ್ತ ವನ್ನು ನೇರವಾಗಿ ರೈತರ ಖಾತೆ ಗಳಿಗೆ ಜಮೆ ಮಾಡುವ ಯೋಜನೆ ಜಾರಿ ಗೊಳಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಸರಕಾರದ ಪ್ರೋತ್ಸಾಹ ಸರಿಯಾಗಿ ಸಿಗದ ಕಾರಣ ಬೆಳೆಗಾರರು ಅತಂತ್ರರಾಗಿದ್ದಾರೆ.

ಸಂಘಟನೆಯ ಕೊರತೆ
ರಾಜ್ಯದಲ್ಲಿ ರಬ್ಬರ್‌ ಬೆಳೆಗೆ ಪೂರಕವಾದ ಗೊಬ್ಬರ, ಮೈಲುತುತ್ತು, ಆಯಸಿಡ್‌, ಪ್ಲಾಸ್ಟಿಕ್‌ ಇತ್ಯಾದಿಗಳ ಬೆಲೆ ಗಗನಕ್ಕೇರಿದ್ದು, ಗಿಡವೊಂದರ ಟ್ಯಾಪಿಂಗ್‌ಗೆ 1ರಿಂದ 2.50 ರೂ. ತಗಲುತ್ತದೆ. ಇದರಿಂದ ನಿರ್ವಹಣೆ ಸವಾಲಾಗಿದೆ. ಅತ್ತ ಬೆಳೆದು ನಿಂತಿರುವ ಮರ, ಇತ್ತ ಉಪಬೆಳೆ ಬೆಳೆಯಲೂ ಆಗದ ಸ್ಥಿತಿ ಬೆಳೆಗಾರನದು. ಮತ್ತೂಂದೆಡೆ ವಿದೇಶಗಳಿಂದ ಕಡಿಮೆ ಬೆಲೆಗೆ ಆಮದಾಗುತ್ತಿದೆ. ಅಡಿಕೆ ಇತ್ಯಾದಿ ಬೆಳೆಗಳಿಗೆ ಕ್ಯಾಂಪ್ಕೋ ಮುಂತಾದ ಸಂಸ್ಥೆಗಳು ಧ್ವನಿಯಾಗಿವೆ. ಆದರೆ ರಬ್ಬರ್‌ ಬೆಳೆಗಾರರು ಅಸಂಘಟಿತರು, ಹೋರಾಟಕ್ಕೆ ಬಲದ ಕೊರತೆ ಕಾಡುತ್ತಿದೆ. ಸರಕಾರದ ಪ್ರೋತ್ಸಾಹವೂ ಕಡಿಮೆ.

ಹಲವು ತೋಟಗಳು ಟ್ಯಾಪಿಂಗ್‌ ಮಾಡಲು ಕಾರ್ಮಿಕರಿಲ್ಲದೆ ಪಾಳು ಬಿದ್ದಿವೆ. ವಾತಾವರಣದ ಏರುಪೇರಿನಿಂದ ಮಳೆಗಾಲದ ಆರಂಭದಲ್ಲೇ ಎಲೆ ಉದು ರುವ ಸ್ಥಿತಿಯಿದೆ. ಚಳಿ ಕೊರತೆಯಾಗಿ ಇಳುವರಿ ಕೂಡ ಕಡಿಮೆಯಾಗಿದೆ. ಪರಿ ಣಾಮ ಗಿಡದ ಆಯುಸ್ಸು ಕುಸಿಯುತ್ತಿದೆ.

ರಬ್ಬರ್‌ ಬೆಳೆಗಾರರಿಗೆ ನಿರೀಕ್ಷಿಸಿದ ಆದಾಯ ಕೈಸೇರುತ್ತಿಲ್ಲ. ಬೆಂಬಲ ಬೆಲೆ ಘೋಷಿಸಬೇಕೆಂದು ಮನವಿಗಳು ಬಂದಿವೆ. ಈ ಕುರಿತು ಪ್ರತ್ಯೇಕ ಸಭೆ ನಡೆಸಿ ಮುಖ್ಯಮಂತ್ರಿಗಳಿಗೆ ವರದಿ ನೀಡಲಾಗಿದೆ. ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಎಂಬ ಬಗ್ಗೆ ಚರ್ಚಿಸಲಾಗುತ್ತಿದೆ.
– ಮುನಿರತ್ನ, ತೋಟಗಾರಿಕೆ ಸಚಿವ

ಬೆಳ್ತಂಗಡಿಯಿಂದ ಉಜಿರೆ ರಬ್ಬರ್‌ ಸೊಸೈಟಿ ನೇತೃತ್ವದಲ್ಲಿ ಶಾಸಕ ಹರೀಶ್‌ ಪೂಂಜ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ತೋಟಗಾರಿಕೆ ಸಚಿವ ಮುನಿರತ್ನ ಅವರನ್ನು ಭೇಟಿ ಮಾಡಿ ರಬ್ಬರ್‌ ಕೃಷಿಕರ ಸಮಸ್ಯೆ ಕುರಿತು ಮನವರಿಕೆ ಮಾಡಲಾಗಿದೆ. ಕೇರಳ ಮಾದರಿಯಲ್ಲಿ ಮುಂದಿನ ಬಜೆಟ್‌ನಲ್ಲಿ ರಾಜ್ಯದಲ್ಲೂ ಬೆಂಬಲ ಬೆಲೆ ಘೋಷಿಸಬೇಕಾಗಿದೆ.
– ಅನಂತ ಭಟ್ ಮಚ್ಚಿಮಲೆ, ಉಪಾಧ್ಯಕ್ಷರು, ಉಜಿರೆ ರಬ್ಬರ್‌ ಸೊಸೈಟಿ

ಕರಾವಳಿ, ಮಲೆನಾಡು ಶಾಸಕರು ಧ್ವನಿಯಾಗಲಿ
ಆನೆ ಮತ್ತಿತರ ಕಾಡುಪ್ರಾಣಿಗಳ ಹಾವಳಿಯಿಂದ ರಬ್ಬರ್‌ ಟ್ಯಾಪಿಂಗ್‌ ತ್ರಾಸದಾಯಕ. ಈ ವಿಚಾರವನ್ನು ತೋಟಗಾರಿಕೆ ಸಚಿವರ ಗಮನಕ್ಕೂ ಬೆಳೆಗಾರರು ತಂದಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಎಲ್ಲ ಶಾಸಕರು ತಮ್ಮ ಪರವಾಗಿ ಧ್ವನಿ ಎತ್ತಬೇಕು ಎಂಬುದು ಬೆಳೆಗಾರರ ಆಗ್ರಹ.

ಪ್ರಮುಖ ಬೇಡಿಕೆಗಳು
– ಬೆಂಬಲ ಬೆಲೆ 200 ರೂ. ಆಸುಪಾಸಿನಲ್ಲಿ ಇರುವಂತೆ ಕ್ರಮ ಕೈಗೊಳ್ಳಬೇಕು.
– ಔಷಧ, ಗೊಬ್ಬರ, ಪರಿಕರಗಳನ್ನು ಸಬ್ಸಿಡಿಯಲ್ಲಿ ಒದಗಿಸಬೇಕು.
– ರಬ್ಬರ್‌ ಕಾರ್ಮಿಕರಿಗೆ ಪಿಂಚಣಿ, ಮಕ್ಕಳಿಗೆ ವಿದ್ಯಾರ್ಥಿವೇತನ ಅಗತ್ಯ.

ಪ್ರಮುಖ ಅಂಶಗಳು
∙ ರಬ್ಬರ್‌ನಿಂದ 40 ಸಾವಿರಕ್ಕೂ ಅಧಿಕ ಉತ್ಪನ್ನಗಳು ತಯಾರಾಗುತ್ತಿವೆ.
∙ರಾಜ್ಯದಲ್ಲಿದೆ 60 ಸಾವಿರ ಹೆಕ್ಟೇರ್‌ ಮೇಲ್ಪಟ್ಟು ರಬ್ಬರ್‌ ಬೆಳೆ
∙ರಾಜ್ಯದ ಪ್ರಸಕ್ತ ರಬ್ಬರ್‌ ಉತ್ಪಾದನೆ 40 ಸಾವಿರ ಟನ್‌
∙ರಾಜ್ಯದ ಕೃಷಿ ವಿಸ್ತೀರ್ಣ ಪರಿಗಣಿಸಿದರೆ 1 ಲಕ್ಷ ಟನ್‌ ಬೆಳೆಯಲು ಅವಕಾಶವಿದೆ
∙ಪ್ರಸಕ್ತ ಉತ್ಪಾದನೆಯಲ್ಲಿ 700 ಕೋ.ರೂ. ಆದಾಯದಿಂದ ಸರಕಾರಕ್ಕೆ 35 ಕೋ.ರೂ. ತೆರಿಗೆ ಲಾಭ
∙1 ಲಕ್ಷ ಟನ್‌ ಉತ್ಪಾದನೆಯಾದರೆ ಸರಕಾರಕ್ಕೆ 65 ಕೋ.ರೂ. ತೆರಿಗೆ ಸಂಗ್ರಹದ ಲಾಭ