ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ; ಮಂಜುನಾಥ ಸ್ವಾಮಿ ದರ್ಶನ ಪಡೆದು, ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ರಾಜ್ಯಪಾಲರು – ಕಹಳೆ ನ್ಯೂಸ್
ಬೆಳ್ತಂಗಡಿ: ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಮಂಗಳವಾರ ರಾತ್ರಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಅಗಮಿಸಿ ಇಂದು ಮುಂಜಾನೆ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆದರು.
ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಅವರನ್ನು ಕ್ಷೇತ್ರದ ವತಿಯಿಂದ ಹೆಗ್ಗಡೆಯವರು ಗೌರವಿಸಿದರು.
ಬಳಿಕ ಧರ್ಮಸ್ಥಳ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಹಮ್ಮಿಕೊಂಡ ನವಜೀವನ ಸಮಾವೇಶ, ಮದ್ಯವರ್ಜಿತರ ಕೌಟುಂಬಿಕ ಸಮ್ಮಿಲನ ಕಾರ್ಯಕ್ರಮವನ್ನು ರಾಜ್ಯಪಾಲರು ಉದ್ಘಾಟಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಡಾ.ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ರಾಜಣ್ಣ ಮೂ.ಕೊರವಿ, ಗ್ರಾ.ಯೋ. ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್, ಜನಜಾಗೃತಿ ವೇದಿಕೆಯ ಕಾರ್ಯದರ್ಶಿ ವಿವೇಕ್ ವಿ. ಪಾಯಿಸ್ ಉಪಸ್ಥಿತರಿದ್ದರು.
ಮದ್ಯಮುಕ್ತರಾದ ಮಂಜುನಾಥ ತೀರ್ಥಹಳ್ಳಿ ಅನಿಸಿಕೆ ವ್ಯಕ್ತಪಡಿಸಿದರು. ಮದ್ಯ ವ್ಯಸನಮುಕ್ತರಾದ ಸಾಂಕೇತಿಕವಾಗಿ 5 ಮಂದಿಗೆ ಗುರುತಿನ ಚೀಟಿ ವಿತರಿಸಲಾಯಿತು. ನವಜೀವನ ಸಮಿತಿ ಸದಸ್ಯರ ಮಕ್ಕಳಿಗಾಗಿ ಡಾ.ವಿರೂಪಾಕ್ಷ ದೇವರಮನೆ ಬರೆದಿರುವ ‘ನಿನಗೆ ನೀನೇ ಗೆಳೆಯ’ ಪುಸ್ತಕವನ್ನು ರಾಜ್ಯಪಾಲರು ಬಿಡುಗಡೆಗೊಳಿಸಿದರು. ಡಾ. ಥೋಮಸ್ ಸ್ಕರಿಯಾ ಅವರಿಗೆ ಜನಜಾಗೃತಿ ಜೀವಮಾನ ಸಾಧನಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ವ್ಯಸನ ಮುಕ್ತ ಸಾಧಕರನ್ನು ಸಮ್ಮಾನಿಸಲಾಯಿತು.
ಸಮಾರಂಭದಲ್ಲಿ ರಾಜ್ಯದ ಸುಮಾರು ಮೂರು ಸಾವಿರಕ್ಕೂ ಅಧಿಕ ಮಂದಿ ಮದ್ಯವರ್ಜಿತ ನವಜೀವನ ಸಮಿತಿ ಸದಸ್ಯರು ಭಾಗಿಯಾಗಿದ್ದರು.