ಮಹಾ ಶಿವರಾತ್ರಿ ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ ಬರುವ ಪಾದಯಾತ್ರಿಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ತಂಡದಿಂದ ಸ್ವಚ್ಛತಾ ಪಾಠ – ಕಹಳೆ ನ್ಯೂಸ್
ಸುಬ್ರಹ್ಮಣ್ಯ: ಮಹಾ ಶಿವರಾತ್ರಿ ಹಬ್ಬ ಎಂದ ಕೂಡಲೇ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಯಾತ್ರಾರ್ಥಿಗಳು ಪಾದಯಾತ್ರೆ ಮೂಲಕ ಆಗಮಿಸಲು ಆರಂಭಿಸುತ್ತಾರೆ. ಹೀಗೆ ಬರುವ ಪಾದಯಾತ್ರಾರ್ಥಿಗಳಲ್ಲಿ ಸ್ವಚ್ಛತಾ ಜಾಗೃತಿ ಮೂಡಿಸಲು ಶೌರ್ಯ ವಿಪತ್ತು ನಿರ್ವಹಣ ತಂಡ ಕೆಲಸ ಮಾಡುತ್ತಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಹಾ ಶಿವರಾತ್ರಿ ಅಂಗವಾಗಿ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಹಾಗೂ ಚಾರ್ಮಾಡಿ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆ ಕೈಗೊಳ್ಳುತ್ತಾರೆ. ಈ ರೀತಿ ಬರುವ ಪಾದಯಾತ್ರಿಗಳು ಅಲ್ಲಲ್ಲಿ ವಿಶ್ರಾಂತಿ ಪಡೆದು ಆಹಾರ ಸೇವಿಸುತ್ತಾರೆ. ಈ ವೇಳೆ ಕೆಲವೆಡೆ ಸ್ವಚ್ಛತೆಯನ್ನು ನಿರ್ಲಕ್ಷಿಸಿ ಎಲ್ಲೆಂದರಲ್ಲಿ ಕಸ, ಪ್ಲಾಸ್ಟಿಕ್ ಬಾಟಲಿ ಎಸೆಯುತ್ತಿರುವುದು ಕಂಡು ಬರುತ್ತದೆ. ಇದನ್ನು ತಡೆಯಲು ಜಾಗೃತಿ ಕಾರ್ಯ ಹಮ್ಮಿಕೊಳ್ಳಲಾಗಿದೆ.
ಸ್ವಚ್ಛತಾ ಜಾಗೃತಿ ಪಾದಯಾತ್ರೆ ನಡೆಸುವ ಯಾತ್ರಾರ್ಥಿಗಳಿಗೆ ಸ್ವತ್ಛತೆಯ ಬಗ್ಗೆ ಜಾಗೃತಿ ಮೂಡಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣ ತಂಡ ಮುಂದಾಗಿದೆ. ತಂಡದ ಸದಸ್ಯರು ಆಯಾ ವ್ಯಾಪ್ತಿಯಲ್ಲಿ ಪಾದಯಾತ್ರಿಗಳಿಗೆ ಸ್ವತ್ಛತೆ ಪಾಠ ಮಾಡಿ, ಕಸ ಹಾಕಲು ವ್ಯವಸ್ಥೆ ಕಲ್ಪಿಸುವ ಕೆಲಸ ನಿರ್ವಹಿಸುತ್ತಿದ್ದಾರೆ. ಸ್ಥಳೀಯಾಡಳಿತದ ನೆರವಿನಿಂದ ಅಲ್ಲಲ್ಲಿ ಕಸ ಹಾಕಲು ವ್ಯವಸ್ಥೆ ಮಾಡುತ್ತಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದದಿಂದ ಬಿಳಿನೆಲೆ, ಮರ್ದಾಳ, ಇಚ್ಲಂಪಾಡಿ, ಪೆರಿಯಶಾಂತಿ, ಕೊಕ್ಕಡ ವಿವಿಧೆಡೆ ವ್ಯವಸ್ಥೆ ಮಾಡಲಾಗಿದೆ. ಶೌರ್ಯ ವಿಪತ್ತು ನಿರ್ವಹಣ ತಂಡದ ಸದಸ್ಯರು ಈ ಸೇವೆಯಲ್ಲಿ ತೊಡಗಿಕೊಂಡಿದ್ದು, ಜಾಗೃತಿ ಕೆಲಸದಿಂದ ಯಾತ್ರಾರ್ಥಿಗಳಲ್ಲಿ ಸ್ವತ್ಛತ ಮನೋಭಾವ ಬೆಳೆಸಲಾಗುತ್ತಿದೆ. ಜತೆಗೆ ಅರಣ್ಯ ಇಲಾಖೆಯೂ ಪಾದಯಾತ್ರಿಗಳಿಗೆ ಪೂರಕ ವ್ಯವಸ್ಥೆ ಕಲ್ಪಿಸುತ್ತಿದೆ.