Sunday, January 19, 2025
ರಾಜಕೀಯಸುದ್ದಿ

`ಸಮೃದ್ಧ ಪುತ್ತೂರು’ ನಮ್ಮ ದೃಢ ಸಂಕಲ್ಪ ಬಿಜೆಪಿ ಬೆಂಬಲಿಸಲು ಮಹಿಳಾ ಮೋರ್ಚಾ ಮನವಿ – ಕಹಳೆ ನ್ಯೂಸ್

ಪುತ್ತೂರು : ಪುತ್ತೂರು ನಗರಸಭೆಯ 31 ವಾರ್ಡುಗಳ ಪೈಕಿ 14 ವಾರ್ಡುಗಳು ಮಹಿಳೆಯರಿಗೆ ಮೀಸಲಾಗಿದ್ದು, ಈ ಬಾರಿ ಬಿಜೆಪಿ ಸಮಾಜಮುಖಿ ಜನಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸಮರ್ಥ ಅಭ್ಯರ್ಥಿಗಳಿಗೆ ಅವಕಾಶ ನೀಡಿದೆ. ಪುತ್ತೂರನ್ನು `ಸಮೃದ್ಧ ಪುತ್ತೂರು’ ಆಗಿಸುವ ದೃಢ ಸಂಕಲ್ಪಕ್ಕೆ ಬಿಜೆಪಿ ಅಭ್ಯರ್ಥಿಗಳಾದ ನಾವು ಬದ್ಧರಾಗಿದ್ದು, ಪುತ್ತೂರಿನ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಬಿಜೆಪಿ ನಗರ ಮಹಿಳಾ ಮೋರ್ಚಾ ಘಟಕದ ಅಧ್ಯಕ್ಷೆ ವಿದ್ಯಾಗೌರಿ ಅವರು ವಿನಂತಿಸಿಕೊಂಡರು.


ಪುತ್ತೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಗರಸಭೆಯ 31 ಸ್ಥಾನಗಳ ಪೈಕಿ 26ರಲ್ಲಿ ಬಿಜೆಪಿ ಹೊಸ ಮುಖಗಳಿಗೆ ಅವಕಾಶ ಮಾಡಿಕೊಟ್ಟಿದೆ. ಅಧಿಕಾರ ಇಲ್ಲದೆ ವೇಳೆಯೂ ಜನತೆಯ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿರುವ ಅರ್ಹ ಮಂದಿಯನ್ನು ಗುರುತಿಸಿ ಅವಕಾಶ ನೀಡಿದೆ.ಪುತ್ತೂರು ನಗರಸಭೆಯಲ್ಲಿ 39 ಸಾವಿರಕ್ಕೂ ಅಧಿಕ ಮಂದಿ ಮತದಾರರಿದ್ದು, ಶೇ 51ಕ್ಕಿಂತ ಹೆಚ್ಚು ಮಹಿಳಾ ಮತದಾರರಿದ್ದಾರೆ. ಮಹಿಳೆಯರು ಸೇರಿದಂತೆ ಎಲ್ಲಾ ಮತದಾರರು ನೂರಕ್ಕೆ ನೂರರಷ್ಟು ಮತ ಚಲಾಯಿಸುವ ಮೂಲಕ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿದರು.
ಪುತ್ತೂರು ನಗರಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ `ಏಕಗವಾಕ್ಷಿ’ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ ಜನಸಾಮಾನ್ಯರಿಗೆ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಸಕಾಲ ವ್ಯವಸ್ಥೆಯನ್ನು ಸಕ್ರೀಯಗೊಳಿಸಲಾಗುವುದು. ಬಿಜೆಪಿ ಪಕ್ಷ ಪ್ರಣಾಳಿಕೆಯಲ್ಲಿ ಘೋಷಿಸಿದ ಅಂಶಗಳನ್ನು ನೂರಕ್ಕೆ ನೂರರಷ್ಟು ಜಾರಿಗೊಳಿಸಲಾಗುವುದು, ಪುತ್ತೂರು ನಗರದಲ್ಲಿ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವ `ಸ್ವಚ್ಚತಾ-ಕಸ ವಿಲೇವಾರಿ’ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಅವರು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗೌರಿ ಬನ್ನೂರು, ನಗರ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಜಯಶ್ರೀ ಶೆಟ್ಟಿ, ಕಾರ್ಯದರ್ಶಿ ಶ್ಯಾಮಲ,ಮಹಿಳಾ ಮೋರ್ಚಾದ ಜಿಲ್ಲಾ ಸಮಿತಿ ಸದಸ್ಯೆ ಅಪರ್ಣಾ ಅವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು