ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸುತ್ತಿದ್ದ ವೇಳೆ ವ್ಯಕ್ತಿಯೊರ್ವ ಸರಕಾರಿ ಕಚೇರಿಯೊಳಗೆ ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಬಿಸಿರೋಡಿನಲ್ಲಿ ನಡೆದಿದ್ದು, ಆತನನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.
ಅದಕ್ಕೂ ಮೊದಲು ಆತನನ್ನು ಸಿ.ಡಿ.ಪಿ.ಒ.ಇಲಾಖೆಯ ಸಿಬ್ಬಂದಿ ಗಳು ಸೇರಿ ಆತನನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗಿದೆ.
ಮಹಾರಾಷ್ಟ್ರ ಮೂಲದ ಪ್ರಕಾಶ್ ಚೌಗಲೆ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾನೆ ಎಂದು ಹೇಳಲಾಗಿದೆ. ಮಹಿಳಾ ಸಂರಕ್ಷಣಾಧಿಕಾರಿ ಭಾರತಿ ಬಿ.ಕುಂದರ್ ಸಮಾಲೋಚನೆ ನಡೆಸುತ್ತಿದ್ದರು. ಬಂಟ್ವಾಳದ ತಾಲೂಕಿನ ಬಿ.ಮೂಡ ನಿವಾಸಿ ಹೀನಾ ಕೌಶರ್ ಎಂಬ ಮಹಿಳೆಯ ಜೊತೆ ಕೆಲ ವರ್ಷಗಳ ಹಿಂದೆ ಮಹಾರಾಷ್ಟ್ರದ ಯುವಕನ ಜೊತೆ ಅಂತರ್ಜಾತಿ ವಿವಾಹ ನಡೆದಿತ್ತು ಎನ್ನಲಾಗಿದೆ. ಇವರಿಬ್ಬರು ಪ್ರೀತಿಸಿ ವಿವಾಹವಾಗಿದ್ದರು ಎನ್ನಲಾಗಿದೆ.
ಇಬ್ಬರು ಮಕ್ಕಳಿದ್ದು ಯಾವುದೋ ವಿಚಾರಕ್ಕೆ ಇವರಿಬ್ಬರ ನಡುವೆ ಕಲಹ ಉಂಟಾಗಿ ವಿಚ್ಚೇದನದ ವರೆಗೆ ತಲುಪಿದ್ದು, ಈ ಬಗ್ಗೆ ಬಂಟ್ವಾಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಮಹಿಳಾ ಸಂರಕ್ಷಣಾಧಿಕಾರಿಗೆ ಕೌಟುಂಬಿಕ ಕಲಹದ ದೂರು ನೀಡಿದ್ದರು. ದೂರಿನ ಬಗ್ಗೆ ಸಮಾಲೋಚನೆ ನಡೆಸುವ ವೇಳೆ ಪತ್ನಿ ಹಾಗೂ ಮಹಿಳಾ ಸಂರಕ್ಷಣಾ ಅಧಿಕಾರಿಯ ಎದುರಿನಲ್ಲಿ ಬಾಟಲಿಯಲ್ಲಿ ಪೂರ್ವಯೋಜಿತ ಕೃತ್ಯದಂತೆ ಬಾಟಲಿಯಲ್ಲಿ ತಂದಿದ್ದ ವಿಷ ಕುಡಿದಿದ್ದಾನೆ ಎನ್ನಲಾಗಿದೆ. ಆತ್ಮಹತ್ಯೆ ಗೆ ಪ್ರಯತ್ನಕ್ಕೆ ಮೊದಲೇ ಈತ ಡೆತ್ ನೋಟು ಕೂಡಾ ಬರೆದಿಟ್ಟಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.ನಗರ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.