ಆಸ್ತಿ ವಿಚಾರಕ್ಕೆ ಒಂದೇ ಕುಟುಂಬದ ನಾಲ್ವರನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ..! : ಸೊಸೆಯಿಂದಲೇ ನಡೆಯಿತಾ ಮಾರಣಹೋಮ..? –ಕಹಳೆ ನ್ಯೂಸ್
ಉತ್ತರ ಕನ್ನಡ: ಆಸ್ತಿ ವಿಚಾರಕ್ಕೆ ಒಂದೇ ಕುಟುಂಬದ ನಾಲ್ವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ಭಟ್ಕಳ ತಾಲೂಕಿನ ಹಾಡುವಳ್ಳಿಯ ಓಣಿಬಾಗಿಲು ಗ್ರಾಮದಲ್ಲಿ ನಡೆದಿದೆ.
ಹಾಡುವಳ್ಳಿ ಒಣಿಬಾಗಿಲು ನಿವಾಸಿ ಶಂಭು ಭಟ್ (70), ಪತ್ನಿ ಮಾದೇವಿ ಭಟ್ (60), ಮಗ ರಾಜು ಭಟ್ (40) ಹಾಗೂ ಸೊಸೆ ಕುಸುಮಾ ಭಟ್ (35) ಕೊಲೆಯಾದವರು. ಕೊಲೆಗೆ ಕೌಟುಂಬಿಕ ಕಲಹವೇ ಕಾರಣವಾಗಿದ್ದು ಹಿರಿಯ ಸೊಸೆಯ ಕುಟುಂಬದವರು ಈ ಕೃತ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕೊಲೆಯಾದ ಶಂಭು ಭಟ್‌ರಿಗೆ ಶ್ರೀಧರ್ ಭಟ್ ಎಂಬ ಮಗನಿದ್ದು ವಿದ್ಯಾ ಭಟ್ ಎನ್ನುವವರನ್ನು ಮದುವೆ ಆಗಿದ್ದರು. ಇತ್ತೀಚಿಗೆ ಶ್ರೀಧರ್ ಭಟ್ ಕಿಡ್ನಿ ವೈಫಲ್ಯದಿಂದ ಮೃತಪಟ್ಟಿದ್ದು, ಶ್ರೀಧರ್ ಭಟ್ ನಿಧನರಾದ ಮೇಲೆ ಆಸ್ತಿ ವಿಚಾರಕ್ಕಾಗಿ ವಿದ್ಯಾ ಕುಟುಂಬ ಹಾಗೂ ಶಂಭು ಭಟ್ ಕುಟುಂಬದ ಮಧ್ಯೆ ಗಲಾಟೆ ನಡೆಯುತ್ತಿತ್ತು.
ಇದೇ ಕಾರಣಕ್ಕೆ ವಿದ್ಯಾ ಭಟ್ ಹಾಗೂ ಆಕೆಯ ತಂದೆ ಸಹೋದರ ಶುಕ್ರವಾರ ಆಗಮಿಸಿ ನಾಲ್ವರನ್ನ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಅವರಲ್ಲಿ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.
ಕೃತ್ಯ ನಡೆಯುವ ವೇಳೆ 10 ವರ್ಷದ ಮಗು ಪಕ್ಕದ ಮನೆಯಲಿತ್ತು. 4 ವರ್ಷದ ಇನ್ನೊಂದು ಮಗು ಮಲಗಿದ್ದು ಹೀಗಾಗಿ ಇವರಿಬ್ಬರು ಕೊಲೆಗಟುಕರಿಂದ ಪಾರಾಗಿದ್ದಾರೆ.
ಈ ಕೊಲೆಗೆ ಬಗ್ಗೆ ಕೊಲೆಯಾದ ಶಂಭು ಭಟ್‌ರ ಅಳಿಯ ರಾಮಚಂದ್ರ ಭಟ್ ಮಾತನಾಡಿ, ಆಸ್ತಿಗಾಗಿ ತನ್ನ ತಮ್ಮನನ್ನು ಎತ್ತಿ ಕಟ್ಟಿ ವಿದ್ಯಾ ಭಟ್ ಈ ಕೃತ್ಯವನ್ನು ಮಾಡಿಸಿದ್ದಾರೆ. ಅಕೌಂಟ್‌ನಲ್ಲಿ 70 ಲಕ್ಷ ಬಂದಿದೆ. ಶ್ರೀಧರ್ ಭಟ್ ಒಳ್ಳೆಯ ವ್ಯಕ್ತಿ ಆಗಿದ್ದರು. ಅವನಿಂದಲೇ ಅಕೌಂಟ್‌ಗೆ ದುಡ್ಡು ಬಂದು ಬಿದ್ದಿದೆ. ಬೇಕಾದರೆ ಅಕೌಂಟ್ ಸರ್ಚ್ ಮಾಡಿದರೆ ಗೊತ್ತಾಗುತ್ತದೆ. ಹೀಗಿದ್ದೂ ಕೊಲೆ ಮಾಡಿದ್ದಾರೆ. ಹತ್ಯೆಯಾದ ಶಂಭು ಭಟ್ ನನ್ನ ಮಾವ. ಇವರು ನನ್ನ ತಾಯಿ ತಮ್ಮ ಸೋದರ ಮಾವ ಆಗುತ್ತಾರೆ. ಇದೆಲ್ಲ ವಿದ್ಯಾ ಮಾಡಿಸಿರೋದು. ವಿದ್ಯಾಳನ್ನ ಫಸ್ಟ್ ಅರೆಸ್ಟ್ ಮಾಡಿಸಿ ಎಂದಿದ್ದಾರೆ.