Sunday, November 24, 2024
ಬೆಂಗಳೂರುರಾಜ್ಯಸಿನಿಮಾಸುದ್ದಿ

ಹರ್ಷಿಕಾ ಪೂಣಚ್ಚ ನಟನೆಯ ‘ಕಾಸಿನಸರ‌’ ಮಾರ್ಚ್‌ 3ಕ್ಕೆ ತೆರೆಗೆ ; ಪ್ರಗತಿಪರ ರೈತನಾಗಿ ನಟ ವಿಜಯ ರಾಘವೇಂದ್ರ – ಕಹಳೆ ನ್ಯೂಸ್

ರಾಷ್ಟ್ರ ಪ್ರಶಸ್ತಿ ವಿಜೇತ ‘ಹೆಬ್ಬೆಟ್ ರಾಮಕ್ಕ’ ಸಿನಿಮಾ ನಿರ್ದೇಶಿಸಿದ್ದ ಎನ್.ಆರ್. ನಂಜುಂಡೇಗೌಡ ಅವರ ಹೊಸ ಸಿನಿಮಾ ‘ಕಾಸಿನಸರ’ ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದು, ಮಾರ್ಚ್‌ 3ರಂದು ರಾಜ್ಯದ ನೂರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಾಣಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಚಿತ್ರದಲ್ಲಿ ‘ಚಿನ್ನಾರಿಮುತ್ತ’ ನಟ ವಿಜಯ ರಾಘವೇಂದ್ರ ಅವರು ಪ್ರಗತಿಪರ ರೈತನಾಗಿ ನಟಿಸಿದ್ದಾರೆ. ವಿಜಯ್‌ಗೆ ನಟಿ ಹರ್ಷಿಕಾ ಪೂಣಚ್ಚ ‘ಸಂಪಿಗೆ’ ಎಂಬ ಪಾತ್ರದಲ್ಲಿ ಜೋಡಿಯಾಗಿದ್ದಾರೆ. ಗ್ರಾಮೀಣ ಸೊಗಡಿನಲ್ಲಿ ನಡೆಯುವ ಕೌಟುಂಬಿಕ ಸಂಬಂಧಗಳ ಸುತ್ತ ಹೆಣೆಯಲಾದ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಸಾವಯುವ ಕೃಷಿಯ ಬಗ್ಗೆ ಹೇಳಲಾಗಿದೆ. ಗ್ರಾಮೀಣ ಭಾಗದಿಂದಲೇ ಬಂದ ದೊಡ್ಡನಾಗಯ್ಯ ಅವರು ಈ ಚಿತ್ರ ನಿರ್ಮಾಣ ಮಾಡಿದ್ದಾರೆ.

‘ನಾವು ಎಷ್ಟೇ ಆಧುನಿಕತೆಗೆ ತೆರೆದುಕೊಂಡರೂ, ಕೃತಕ ಬುದ್ಧಿಮತ್ತೆ ಎಷ್ಟೇ ಅಭಿವೃದ್ಧಿಯಾದರೂ, ಬೇರು ಹುಡುಕುತ್ತ ಹಳ್ಳಿಗೇ ಬರಬೇಕು. ಅಲ್ಲಿ ಬದುಕುವ ರೈತರ ಬದುಕನ್ನು ಇಣುಕಿ ನೋಡಲೇಬೇಕು. ಕಲಾವಿದನಾಗಿ ನಾನು ಹಲವು ಪಾತ್ರಗಳಲ್ಲಿ ನಟಿಸಿದ್ದೇನೆ. ಈ ಪೈಕಿ ಬಹಳ ಗಂಭೀರವಾಗಿ ಯೋಚನೆಗೆ ಹಚ್ಚುವ ಸಿನಿಮಾ ‘ಕಾಸಿನಸರ’. ಇಲ್ಲಿ ನಾನು ಮೊದಲ ಬಾರಿ ರೈತನ ಪಾತ್ರಕ್ಕೆ ಬಣ್ಣಹಚ್ಚಿದ್ದೇನೆ. ಹಳ್ಳಿಯ ಬದುಕಿನ ಮೇಲೆ ನಮ್ಮ ಬದುಕು ಅವಲಂಬಿತವಾಗಿದೆ ಎನ್ನುವ ಸಂದೇಶ ಇಲ್ಲಿ ನಗರವಾಸಿಗಳಿಗಿದೆ’ ಎನ್ನುತ್ತಾರೆ ವಿಜಯ ರಾಘವೇಂದ್ರ.

‘ರೈತರ ಬದುಕು ಕೊಂಚ ಏರುಪೇರಾದರೂ ಎದುರಾಗಬಹುದಾದ ಸಂಕಷ್ಟ ಒಂದೆರಡಲ್ಲ. ಈ ಹೊಡೆತವನ್ನು ಖಂಡಿತವಾಗಿಯೂ ಯಾರಿಂದಲೂ ತಡೆದುಕೊಳ್ಳಲು ಸಾಧ್ಯವಿಲ್ಲ. ‘ಕಾಸಿನಸರ’ ಎನ್ನುವುದು ಕೇವಲ ಒಡವೆಯಲ್ಲ. ಒಂದು ರೈತ ಕುಟುಂಬವನ್ನು ಕಾಪಾಡುವುದರ ಜೊತೆಗೆ ಆತನ ಆರ್ಥಿಕ ಪರಿಸ್ಥಿತಿ, ಸಂಬಂಧಗಳ ಮೌಲ್ಯ ಕಾಪಾಡುವ ವಸ್ತುವದು’ ಎಂದರು ವಿಜಯ್.

ಚಿತ್ರಕ್ಕೆ ಶ್ರೀಧರ್‌ ವಿ. ಸಂಭ್ರಮ ಅವರ ಸಂಗೀತ ನಿರ್ದೇಶನವಿದೆ.