ಪ್ರಿಯತಮೆ ತನ್ನಿಂದ ದೂರವಾಗುತ್ತಿದ್ದಾಳೆ ಎಂದು ಪಾಗಲ್ ಪ್ರೇಮಿಯೊಬ್ಬ ಆಕೆಗೆ ೧೬ ಸಲ ಚುಚ್ಚಿ ಚುಚ್ಚಿ ಕೊಂದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಮುರುಗೇಶ್ಪಾಳ್ಯದಲ್ಲಿ ಈ ಪ್ರಕರಣ ನಡೆದಿದ್ದು, ಲೀಲಾ ಪವಿತ್ರ (೨೬) ಕೊಲೆಯಾದ ಯುವತಿ. ಆಂಧ್ರಪ್ರದೇಶ ಮೂಲದ ಈಕೆ ಒಮೆಗಾ ಎನ್ನುವ ಮೆಡಿಸನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಲೀಲಾ ಪವಿತ್ರ ಹಾಗೂ ದಿವಾಕರ್ ಇಬ್ಬರೂ ಐದು ವರ್ಷಗಳಿಂದ ಪ್ರೀತಿಸುತ್ತಿದ್ದು, ಅಂತರ್ಜಾತಿ ವಿವಾಹಕ್ಕೆ ಮನೆಯವರ ವಿರೋಧವಿತ್ತು. ಅದೇ ಕಾರಣಕ್ಕೆ ಯುವತಿ ಯುವಕನಿಂದ ಅಂತರ ಕಾಯ್ದುಕೊಂಡಿದ್ದಳು. ಇದರಿಂದ ಬೇಸತ್ತ ಯುವಕ, ಈಕೆಯ ಕೊಲೆ ಮಾಡಿದ್ದಾನೆ.
ಎದೆ, ಹೊಟ್ಟೆ ಹಾಗೂ ಕುತ್ತಿಗೆ ಭಾಗಕ್ಕೆ ಒಟ್ಟು ಸುಮಾರು ೧೬ ಸಲ ಇರಿದು ಕೊಲೆ ಮಾಡಿರುವ ಆರೋಪಿ ಈಗ ಪೊಲೀಸರ ವಶದಲ್ಲಿದ್ದಾನೆ. ಜೀವನ್ಬಿಮಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.