Monday, January 20, 2025
ಸುದ್ದಿ

ಎ.30 ರಿಂದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ಅಷ್ಟಬಂಧ ಬ್ರಹ್ಮ ಕಲಶೋತ್ಸವ – ಕಹಳೆ ನ್ಯೂಸ್

ಉಡುಪಿ : 21 ವರ್ಷಗಳ ನಂತರ ಮುಂಬರುವ ಎ.30ರಿಂದ ಮೇ 11ರವರೆಗೆ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳವಾರ ಕೊಲ್ಲೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಲ್ಲೂರು ಮೂಕಾಂಬಿಕೆಗೆ 1972ರಲ್ಲಿ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮ ನಡೆದ 30 ವರ್ಷಗಳ ಬಳಿಕ 2002ರಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆದಿದೆ. ಇದೀಗ ಮತ್ತೆ 21 ವರ್ಷಗಳ ನಂತರ ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯುತ್ತಿದೆ ಎಂದರು.

ಆಗಮಶಾಸ್ತ್ರದ ಪ್ರಕಾರ ಪ್ರತಿ 12 ವರ್ಷಗಳಿಗೊಮ್ಮೆ ಅಷ್ಟಬಂಧ ನಡೆಯಬೇಕಾಗಿದೆ. ಆದರೆ ಕಾರಣಾಂತರ ಗಳಿಂದ ಕಳೆದ 21 ವರ್ಷಗಳಿಂದ ಇದು ನಡೆದಿಲ್ಲ. ಈ ದೇವತಾ ಕಾರ್ಯ ನಡೆಸಲು ಈಗ ಕಾಲ ಕೂಡಿ ಬಂದಿದೆ. ಎಲ್ಲರ ಅಭಿಪ್ರಾಯ ಪಡೆದುಕೊಂಡು ಉತ್ಸವ ದಿನಾಂಕ ನಿಶ್ಚಯ ಮಾಡಲಾಗಿದ್ದು, ಕ್ಷೇತ್ರದ ಅರ್ಚಕರ ಹಾಗೂ ಭಕ್ತರ ಸಹಕಾರದಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದರು.

1972ರಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಸುವಾಗ ದೇವಸ್ಥಾನದ ಪರಿವಾರ ದೇವರುಗಳಲ್ಲಿ ಪ್ರಮುಖವಾದ ವೀರಭದ್ರ ದೇವರ ಗುಡಿಯ ಜೀರ್ಣೋದ್ಧಾರ ಕಾರ್ಯ ನಡೆಸಲಾಗಿತ್ತು. 2002ರ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಕ್ಷೇತ್ರಕ್ಕೆ ನೂತನ ಶಿಲಾ ಮಹಾದ್ವಾರ, ಸ್ವಾಗತ ಗೋಪುರ ಹಾಗೂ ಸ್ವರ್ಣಲೇಪಿತ ಧ್ವಜಸ್ಥಂಭ ಸಮರ್ಪಣೆ ಕಾರ್ಯ ನಡೆದಿತ್ತು. ಈ ಬಾರಿಯ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂರ್ವದಲ್ಲಿ ವೀರಭದ್ರ ದೇವರ ನೂತನ ಶಿಲಾಮಯ ದೇವಸ್ಥಾನ ಹಾಗೂ ನೂತನ ಬ್ರಹ್ಮರಥ ಲೋಕಾರ್ಪಣೆಯಾಗಿರುವುದು ವಿಶೇಷವಾಗಿದೆ ಎಂದರು.

ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ಕೆ ಅಂದಾಜು 5 ಕೋಟಿ ರೂ. ವೆಚ್ಚದ ಅಂದಾಜು ಮಾಡಲಾಗಿದ್ದು, ದೇವಸ್ಥಾನದಿಂದ 2 ಕೋಟಿ ರೂ. ಬಳಸಿಕೊಳ್ಳಲು ಹಾಗೂ ಉಳಿದ 3 ಕೋಟಿಯನ್ನು ಭಕ್ತರಿಂದ ಸಂಗ್ರಹಿಸಿ ಖರ್ಚು ಮಾಡಲು ಸರಕಾರ ಅನುಮತಿ ನೀಡಿದೆ ಎಂದು ಕೊಲ್ಲೂರು ಶ್ರೀಮೂಕಾಂಬಿಕಾ ದೇವಳದ ಕಾರ್ಯನಿರ್ವಹಣಾಧಿಕಾರಿ (ಪ್ರಭಾರ) ಹಾಗೂ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ತಿಳಿಸಿದರು.

ಈ ನಿಟ್ಟಿನಲ್ಲಿ ಎಲ್ಲಾ ಸಹೃದಯ ಭಕ್ತರ ಸಹಕಾರವನ್ನು ಕೋರಲಾಗಿದೆ ಎಂದ ಅವರು, ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಹಾಗೂ ಅಚ್ಚುಕಟ್ಟಾಗಿ ನಡೆಸಲು ಯೋಜನೆ ರೂಪಿಸಲಾಗುವುದು. ಜಿಲ್ಲಾಡಳಿತ, ಮುಜರಾಯಿ ಇಲಾಖೆ, ಸರಕಾರ ಹಾಗೂ ಭಕ್ತರಿಂದ ಎಲ್ಲಾ ರೀತಿಯ ಸಹಕಾರ ಪಡೆದುಕೊಳ್ಳಲಾಗುವುದು. ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕಾಗಿ ದೇಣಿಗೆ ನೀಡುವವರಿಗೆ ದೇವಸ್ಥಾನದ ಒಳ ಭಾಗದ ವಿಶೇಷ ಕೌಂಟರ್ ಹೊರತು ಪಡಿಸಿ ಬೇರೆ ಎಲ್ಲಿಯೂ ನಗದು ಪಾವತಿಗೆ ಅವಕಾಶ ಇಲ್ಲ. ದೇಣಿಗೆ ನೀಡುವವರು ಕೊಲ್ಲೂರು ಕೆನರಾ ಬ್ಯಾಂಕ್ ಉಳಿತಾಯ ಖಾತೆ ಸಂಖ್ಯೆ 01752200000014 (ಐಎಫ್‌ಎಸ್‌ಸಿ: ಸಿಎನ್‌ಆರ್‌ಬಿ0010175, ಎಂಐಸಿಆರ್:576015049)ಕ್ಕೆ ಆನ್ ಲೈನ್ ಮೂಲಕ ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿಯೂ ಹಣ ಸಂದಾಯ ಮಾಡಲು ಅವಕಾಶ ನೀಡಲಾಗಿದೆ ಎಂದರು.

ದೇವಸ್ಥಾನದ ತಂತ್ರಿಗಳಾದ ರಾಮಚಂದ್ರ ಅಡಿಗ ಮಾತನಾಡಿ, ಅಷ್ಟಬಂಧ ಬ್ರಹ್ಮಕಲಶೋತ್ಸವ ಆಗುವುದರಿಂದ ಸಾನಿಧ್ಯದ ಶಕ್ತಿ ವೃದ್ಧಿಸುತ್ತದೆ ಎನ್ನುವ ನಂಬಿಕೆ ಇದೆ. ವಿಶ್ವದ ಪ್ರಾಚೀನ ಕ್ಷೇತ್ರಗಳಲ್ಲಿ ಒಂದಾಗಿರುವ ಕೊಲ್ಲೂರು ಕ್ಷೇತ್ರದಲ್ಲಿ ಉದ್ಭವ ಲಿಂಗ ಸ್ವರೂಪದಲ್ಲಿ ಸ್ವರ್ಣ ರೇಖೆ ಹೊಂದಿರುವ ಅಪೂರ್ವವಾದ ‘ಸ್ವಯಂಭೂ’ ವಿಗೆ ನಡೆಯುವ ಅಪೂರ್ವವಾದ ಧಾರ್ಮಿಕ ವಿಧಿಯನ್ನು ಭಕ್ತರು ನೋಡಿ ಕಣ್ತುಂಬಿಕೊಳ್ಳಬೇಕು ಎಂದರು.

ಈ ಹಿಂದೆ ನಿಗದಿಯಾದ ಬ್ರಹ್ಮಕಲಶೋತ್ಸವವನ್ನು ಭಕ್ತರ ಒಂದು ವರ್ಗದಲ್ಲಿ ಕೇಳಿಬಂದ ಆಕ್ಷೇಪಗಳಿಂದ ಮುಂದೂಡಲಾಗಿದ್ದರೂ, ಅಂದು ಆಕ್ಷೇಪಿಸಿದವರೂ ಈ ಬಾರಿ ಒಪ್ಪಿಗೆ ಸೂಚಿಸಿದ್ದು, ಎಲ್ಲಾ ವರ್ಗಗಳೊಂದಿಗೆ ಸಮಾಲೋಚಿಸಿ ದಿನಾಂಕವನ್ನು ನಿಗದಿ ಪಡಿಸಿದ್ದೇವೆ ಎಂದು ಚಂದ್ರಶೇಖರ ಶೆಟ್ಟಿ ಸ್ಪಷ್ಟಪಡಿಸಿದರು.

ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಡಾ.ಅತುಲ್ ಕುಮಾರ ಶೆಟ್ಟಿ, ಗಣೇಶ್ ಕಿಣಿ ಬೆಳ್ವೆ, ಗೋಪಾಲಕೃಷ್ಣ ನಾಡ, ಜಯಾನಂದ ಹೋಬಳಿದಾರ್, ಸಂಧ್ಯಾ ರಮೇಶ್, ರತ್ನಾ ರಮೇಶ್ ಕುಂದರ, ಕೆ.ಪಿ.ಶೇಖರ ಪೂಜಾರಿ, ದೇವಸ್ಥಾನದ ಸಂತೋಷ್ ಕೊಠಾರಿ, ಪ್ರದೀಪ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.