Monday, November 25, 2024
ಸುದ್ದಿ

ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜ್ಞಾನಧಾರ ಕಲಿಕಾ ಹಬ್ಬ – ರಾಷ್ಟ್ರೀಯ ವಿಜ್ಞಾನ ದಿನಾಚರಣೆ – ಕಹಳೆ ನ್ಯೂಸ್

ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ರಾಮನ್ ಪ್ರಭಾವವನ್ನು ಗುರುತಿಸುವ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು. ಈ ದಿನ “ವಿವಿಧ ವಿಜ್ಞಾನ ಮಾದರಿ ಪ್ರದರ್ಶನ, ಪೌಷ್ಟಿಕ ಆಹಾರ ಮೇಳ ಹಾಗೂ ವಿದ್ಯಾರ್ಥಿಗಳೊಂದಿಗೆ ಪೌಷ್ಟಿಕ ಆಹಾರ ಸಹಭೋಜನ” ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

Inspiring Educator Award ಪುರಸ್ಕೃತರಾದ, ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ವಿಜ್ಞಾನ ಪ್ರಾಧ್ಯಾಪಕರಾದ ನಿಶಿತ ಕೆ.ಕೆ ಮಾತನಾಡುತ್ತಾ “ನಮ್ಮ ಪ್ರಾಚೀನ ಕಾಲದ ಸಾಧು ಸಂತರೆಲ್ಲರು ವಿಜ್ಞಾನಿಗಳೇ ಆಗಿದ್ದಾರೆ. ಅಂದು ಯಾವುದೇ ತರದ ಆಧುನಿಕ ಸಲಕರಣೆಗಳು ಇಲ್ಲದಿದ್ದರೂ ಹಲವಾರು ಸಂಶೋಧನೆಗಳನ್ನು ಮಾಡಿದ್ದಾರೆ. ಅವರ ಬುದ್ಧಿಮತ್ತೆ, ಪ್ರೌಢಿಮೆ ಅಪಾರವಾದುದು.

ಅವರ ಕೊಡುಗೆಗಳನ್ನು ನಾವು ಸ್ಮರಿಸಬೇಕು. ಅವರ ತಾಳ್ಮೆ, ಕಾರ್ಯನಿಷ್ಠೆಯನ್ನು ದಾರಿದೀಪವಾಗಿಟ್ಟುಕೊಳ್ಳಬೇಕು. ದಿನನಿತ್ಯದ ಸಮಸ್ಯೆಯನ್ನು ವೈಜ್ಞಾನಿಕ ದೃಷ್ಟಿಕೋನವಿಟ್ಟುಕೊಂಡು ಪ್ರಾಯೋಗಿಕವಾಗಿ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಇದೇ ತರ ವೈಜ್ಞಾನಿಕ ಮನೋಭಾವವನ್ನು ಇಟ್ಟುಕೊಂಡು ದೇಶಕ್ಕೆ ಅನುಕೂಲವಾಗುವಂತಹ ಅನ್ವೇಷಣೆ ಮಾಡಬೇಕು. ಯಾವುದೇ ಸಂಶೋಧನೆಯಾದರೂ ಅದು ಮುಂದಿನ ಪೀಳಿಗೆಗೆ ಅನುಕೂಲವಾಗುವಂತಿರಬೇಕು. ಇಲ್ಲದಿದ್ದರೆ ಅನಾಹುತ ಸಂಭವಿಸುತ್ತದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ, ನಾವು ನಮ್ಮ ಗುಣಮಟ್ಟ ಎತ್ತರಿಸಿ, ಜಾಗತಿಕವಾಗಿ ಶಕ್ತಿಯುತವಾಗಿ ಬೆಳೆಯಬೇಕು. ಎಲ್ಲರೂ ವಿಜ್ಞಾನಿಯಾಗೋಣ, ದೇಶದ ಸತ್ಪ್ರಜೆಯಾಗಿ ಬೆಳೆಯೋಣ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಿಗೆ ಹಲಸಿನ ಗಿಡವನ್ನು ನೀಡುವುದರ ಮೂಲಕ ಸ್ವಾಗತಿಸಲಾಯಿತು. ನಂತರ 7ನೇ ತರಗತಿಯ ವೈದೇಹಿ ಪ್ರೇರಣಾ ಗೀತೆ ಹಾಡಿದರು.

ಪುತ್ತೂರು ವಿವೇಕಾನಂದ ವಿದ್ಯಾವರ್ದಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ್ ಭಟ್ ಮಾತನಾಡುತ್ತಾ, “ಕುತೂಹಲವನ್ನು ಬೆಳೆಸಿದಾಗ ವಿಜ್ಞಾನಿಗಳಾಗುತ್ತಾರೆ.

ಒಂದು ಗಿಡ ಯಾಕೆ ಮೇಲ್ಮುಖವಾಗಿ ಬೆಳೆಯುತ್ತದೆ? ಬೇರು ಯಾಕೆ ಕೆಳಗೆ ಹೋಗುತ್ತದೆ? ಹೀಗೆ ಪ್ರಶ್ನೆಗಳು ಹುಟ್ಟಿಕೊಂಡಾಗ ಅದಕ್ಕೆ ಉತ್ತರ ಹುಡುಕುತ್ತಾ ವಿಜ್ಞಾನಿಗಳಾಗುತ್ತೇವೆ. ಅಣು ಸಂಶೋಧನೆಯಿಂದ ಒಂದು ದೇಶ ನಾಶವಾದಂತೆ ಸಂಶೋಧನೆ ಮಾಡಿದನ್ನು ಒಳ್ಳೆಯ ಕಾರ್ಯಕ್ಕೆ ಬಳಸಬೇಕು. ಸಂಶೋಧನೆಯು ದೇಶದ ಪ್ರಗತಿಗೆ ಪೂರವಾಗುವಂತೆ ಇರಬೇಕು.” ಎಂದು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಹೇಳಿದರು.

ಕಾರ್ಯಕ್ರಮದಲ್ಲಿ ಗಣಿತ – ವಿಜ್ಞಾನಕ್ಕೆ ಸಂಬಂಧಪಟ್ಟಂತಹ ರಂಗೋಲಿ, ಚಿತ್ರಕಲೆ, ರಸಪ್ರಶ್ನೆ ಹಾಗೂ ಮಾದರಿ ಪ್ರದರ್ಶನದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅಧ್ಯಾಪಕರಾದ ಜಯಲಕ್ಷ್ಮೀ ಹಾಗೂ ಯಕ್ಷಿತಾ ಬಹುಮಾನ ವಾಚಿಸಿದರು.

ವಿದ್ಯಾರ್ಥಿಗಳೇ ತಯಾರಿಸಿದ “Clapping Lamp” ಎಂಬ ವಿಶಿಷ್ಟ ಮಾದರಿಯನ್ನು ಅತಿಥಿಗಳು ಚಪ್ಪಾಳೆ ತಟ್ಟಿ ಬೆಳಗಿಸುವ ಮೂಲಕ ವಿಜ್ಞಾನ ಮಾದರಿ ಪ್ರದರ್ಶನಕ್ಕೆ ಚಾಲನೆ ನೀಡಿದರು. ನಂತರ ಅತಿಥಿ ಗಣ್ಯರು ವಿದ್ಯಾರ್ಥಿಗಳೇ ತಯಾರಿಸಿದ ಗಣಿತ – ವಿಜ್ಞಾನ ಮಾದರಿಯನ್ನು ವೀಕ್ಷಿಸಿದರು. ವಿದ್ಯಾರ್ಥಿಗಳು ವಿವರಿಸಿದರು.

ಮಧ್ಯಾಹ್ನದ ಭೋಜನಕ್ಕೆ ಪೌಷ್ಟಿಕ ಆಹಾರಗಳಾದ ಒಂದೆಲಗ, ಪುನರ್ಪುಳಿ ಸಿಪ್ಪೆ, ದಾಸವಾಳ. ಕರಿಬೇವು, ಹರಿವೆ ಸೊಪ್ಪು, ನುಗ್ಗೆ ಸೊಪ್ಪು, ಮೆಂತೆ ಸೊಪ್ಪು, ವಿಟಮಿನ್ ಸೊಪ್ಪು, ಸಬ್ಬಸ್ಸಿಗೆ ಸೊಪ್ಪು, ನೆಲಬಸಳೆ, ಬಾಳೆಹಣ್ಣು, ಪಾಲಕ್, ಚೀನಿಕಾಯಿ ಸೊಪ್ಪು, ಕೊತ್ತಂಬರಿ ಸೊಪ್ಪು, ಪುದೀನ ಸೊಪ್ಪು ಹಾಗೂ ಹಸಿತರಕಾರಿಗಳ ವಿವಿಧ ಭಕ್ಷ್ಯಗಳನ್ನು ತಯಾರಿಸಿ ವಿದ್ಯಾರ್ಥಿಗಳಿಗೆ ಹಂಚಲಾಯಿತು.

ವೇದಿಕೆಯಲ್ಲಿ ವಿಟ್ಲ ಪಶುಸಂಗೋಪನೆ ಇಲಾಖೆಯ ಹಿರಿಯ ಅಧಿಕಾರಿಯಾದ ಮಂದಾರ ಜೈನ್, ಗಣಿತ ವಿಷಯದ ರಾಜ್ಯ ಸಂಪನ್ಮೂಲ ವ್ಯಕ್ತಿಯಾದ ವಿಟ್ಲ ಜೆಸಿಐ ನ ಅಧ್ಯಕ್ಷರಾದ ಪರಮೇಶ್ವರ ಹೆಗಡೆ, ಸಿವಿಲ್ ಇಂಜಿನಿಯರ್ ಶೆಲ್ಟರ್ ಅಸೋಸಿಯೇಟ್ಸ್‍ನ ಸಂತೋಷ್ ಶೆಟ್ಟಿ ಬೆಲ್ತಡ್ಕ, ಕಡಬ ಶ್ರೀ ಸರಸ್ವತಿ ವಿದ್ಯಾಲಯದ ಸಂಚಾಲಕ ವೆಂಕಟ್ರಮಣ ರಾವ್ ಮಂಕುಡೆ, ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ಸಹಸಂಚಾಲಕ ರಮೇಶ್ ಎನ್, ಆಡಳಿತ ಮಂಡಳಿ ಸದಸ್ಯರಾದ ಮಲ್ಲಿಕಾ ಶೆಟ್ಟಿ ಹಾಗೂ ಮುಖ್ಯೋಪಾಧ್ಯಾರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ವೈಷ್ಣವಿ ಕಾಮತ್ ನಿರೂಪಿಸಿ, ಸುಶ್ಮಿತಾ ಭಟ್ ಸ್ವಾಗತಿಸಿ, ಪ್ರೇಕ್ಷಾ ವಂದಿಸಿದರು.