Wednesday, January 22, 2025
ಸುದ್ದಿ

ಈರುಳ್ಳಿ ಭಾರಿ ಬೇಡಿಕೆ.. ಉತ್ತಮ ಆದಾಯದ ಕನವರಿಕೆ… ಕಹಳೆ ನ್ಯೂಸ್

ಹೊಸದುರ್ಗ: ತಾಲ್ಲೂಕಿನ ಹಲವೆಡೆ ಈರುಳ್ಳಿ ಬಿತ್ತನೆ ಬೀಜದ ಸಸಿಗಳು ಉತ್ತಮವಾಗಿ ಬೆಳೆದಿದ್ದು, ಈ ಬಾರಿ ಈರುಳ್ಳಿ ಬಿತ್ತನೆಬೀಜ ಬೆಳೆ ಪ್ರದೇಶವೂ ಕಡಿಮೆ ಇರುವುದರಿಂದ ರೈತರು ಉತ್ತಮ ಆದಾಯ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ವರ್ಷ ಅಧಿಕ ಮಳೆ ಸುರಿದ ಪರಿಣಾಮ ಭೂಮಿಯಲ್ಲಿ ತೇವಾಂಶವಿದ್ದು, ಮಂಜು ಕೂಡ ಕಡಿಮೆಯಿರುವುದರಿಂದ ಈರುಳ್ಳಿ ಬೀಜದ ಸಸಿಗಳು ಉತ್ತಮವಾಗಿ ಬೆಳೆದಿವೆ.

ಹಚ್ಚ ಹಸಿರಾದ ಈರುಳ್ಳಿ ತೊಂಡೆಯ ಮೇಲೆ ಬಿಳಿ ಬಣ್ಣದ ಹೂವಿನ ಗುಚ್ಛ ನೋಡುಗರನ್ನು ತನ್ನತ್ತ ಸೆಳೆಯುತ್ತಿದೆ.

ಬೇಸಿಗೆ ಆರಂಭವಾದರೆ ಭಣಗುಡುವ ರೈತರ ಜಮೀನುಗಳಲ್ಲಿ ಈ ವರ್ಷ ಈರುಳ್ಳಿ ಬೀಜದ ಸಸಿಗಳು ಛಾಪು ಮೂಡಿಸುವ ಜೊತೆಗೆ ದಾರಿಹೋಕರ ಸೆಲ್ಫಿಗೆ ಜೊತೆಯಾಗಿ ನಿಂತಿವೆ.

‘ಫೆಬ್ರುವರಿ ಮಾರ್ಚ್‌ ತಿಂಗಳಲ್ಲಿ ಗೆಡ್ಡೆ ಹೂ ಬಿಡಲಿದ್ದು, ಏಪ್ರಿಲ್‌ನಲ್ಲಿ ಬೀಜ ಪಡೆಯಲು ಹಸನು ಮಾಡಲಾಗುತ್ತದೆ. ಮುಂಗಾರು ಹಂಗಾಮಿನಲ್ಲಿ ಮೊದಲ ಮಳೆ ಆರಂಭವಾಗುವ ಹಂತದಲ್ಲಿ ಈರುಳ್ಳಿ ಬೀಜ ಮಾರಾಟಕ್ಕೆ ಸಿದ್ಧವಾಗುತ್ತದೆ. ಈ ಬಾರಿ ಬೆಳೆ ಉತ್ತಮವಾಗಿರುವುದರಿಂದ ಎಕರೆಗೆ 500ಕ್ಕೂ ಹೆಚ್ಚು ಸೇರು ಬೀಜ ಬರುವ ಸಾಧ್ಯತೆ ಇದೆ. ಮೂರು ತಿಂಗಳ ಬೆಳೆ ಇದಾಗಿದ್ದು, ಸೇರು ಬೀಜಕ್ಕೆ ₹ 800ರಿಂದ ₹ 1,000ವರೆಗೆ ಬೆಲೆ ಇದ್ದು, ಉತ್ತಮ ಬೆಳೆಗೆ ತಕ್ಕ ಆದಾಯ ಸಿಕ್ಕರೆ ಸಾಕು’ ಎನ್ನುತ್ತಾರೆ ಹೊಸಕುಂದೂರಿನ ರೈತ ಜಿ. ಲೋಕಪ್ಪ.

‘ಕಳೆದ ಬಾರಿ ಈರುಳ್ಳಿಗೆ ಉತ್ತಮ ಬೆಲೆ ಸಿಗಬಹುದು ಎಂಬ ನಿರೀಕ್ಷೆಯೊಂದಿಗೆ ರೈತರು ಈರುಳ್ಳಿ ಬೀಜ ಕೊಳ್ಳಲು ಮುಂದಾದರು. ಬೀಜದ ಅಭಾವ ಉಂಟಾದ್ದರಿಂದ ಕಲಬೆರಕೆ ಬೀಜಗಳನ್ನು ಅಧಿಕ ಬೆಲೆಗೆ ರೈತರ ಮನೆ ಬಾಗಿಲಿಗೆ ತಂದು ನೀಡಲಾಯಿತು. ಈ ಬಾರಿ ಈ ರೀತಿಯಾಗದಂತೆ ಈರುಳ್ಳಿ ಬೆಳೆಗಾರರು ಎಚ್ಚರ ವಹಿಸಬೇಕು. ಈರುಳ್ಳಿ ಬೀಜ ಬೆಳೆದ ರೈತರಿಂದಲೇ ನೇರವಾಗಿ ಖರೀದಿಸಬೇಕು. ಕಳೆದ ವರ್ಷ ಬಿತ್ತನೆ ಮಾಡಿ, ಉಳಿದಿರುವ ಕಳಪೆ ಬೀಜ ಮಾರಾಟ ಮಾಡುವವರ ವಿರುದ್ಧ ಸಂಬಂಧಪಟ್ಟ ಇಲಾಖೆಯವರು ಕಠಿಣ ಕ್ರಮ ಜರುಗಿಸಬೇಕು’ ಎಂದು ಅವರು ಆಗ್ರಹಿಸಿದರು.

ವಿವಿಧ ತಳಿಗಳು: ತಾಲ್ಲೂಕಿನಲ್ಲಿ ಗರ್ವ ಈರುಳ್ಳಿ ಬೀಜದ ತಳಿಗೆ ಹೆಚ್ಚಿನ ಬೇಡಿಕೆಯಿದೆ. ಇದಲ್ಲದೇ ಬಳ್ಳಾರಿ ರೆಡ್‌, ಪೂನಾ ರೆಡ್‌, ಅರ್ಕಾ ಪ್ರಗತಿ, ಅರ್ಕಾನಿಕೇತನ, ಅರ್ಕಾ ಕಲ್ಯಾಣ, ಅರ್ಕಾ ಪೀತಾಂಬರ್‌, ತೆಲಗಿ ಕೆಂಪು ಮತ್ತು ಬಿಳಿ ತಳಿಯ ಬೀಜಗಳನ್ನು ಉತ್ಪಾದಿಸಲಾಗುತ್ತದೆ.

ಬೆಲೆ ಏರಿಕೆ ನಿರೀಕ್ಷೆ: ಕಳೆದ ವರ್ಷ ಈರುಳ್ಳಿಗೆ ಹೆಚ್ಚಿನ ಬೇಡಿಕೆ ಬಂದು ಉತ್ತಮ ಬೆಲೆಗೆ ಮಾರಾಟವಾಗಿತ್ತು. ಈ ಬಾರಿಯೂ ಈರುಳ್ಳಿಗೆ ಉತ್ತಮ ಧಾರಣೆ ಸಿಗುವ ಆಶಾಭಾವದೊಂದಿಗೆ ಈರುಳ್ಳಿ ಬೆಳೆಯಲು ರೈತರು ಮುಂದಾಗಿದ್ದು, ಬಿತ್ತನೆ ಬೀಜಕ್ಕೆ ಬೇಡಿಕೆ ಹೆಚ್ಚಲಿದೆ.

ಕಾವಳಿನ ಆತಂಕ: ಇಲ್ಲಿಯವರೆಗೂ ಈರುಳ್ಳಿ ಬೀಜದ ಸಸಿಗಳು ಉತ್ತಮವಾಗಿವೆ. ಮಂಜು ಬೀಳದಿದ್ದರೆ ಸಾಕು. ಹೂ ಬಂದಿರುವ ಸಂದರ್ಭದಲ್ಲಿ ಮಂಜು ಎದುರಾದರೆ ಹೂ ಬಾಡುವುದರ ಜೊತೆಗೆ ಬೀಜದ ಪ್ರಮಾಣ ಕುಗ್ಗುತ್ತದೆ. ಪುಣ್ಯಕ್ಕೆ ಈ ಬಾರಿ ಕಾವಳ ಇಲ್ಲ ಎನ್ನುತ್ತಾರೆ ರೈತ ಗೌಡ್ರ ನೀಲಪ್ಪ.

ಈರುಳ್ಳಿ ಬೀಜದ ತಯಾರಿಕೆ ಹೇಗೆ ?

ಅಕಾಲಿಕ ಮಳೆಯಿಂದಾಗಿ ಈ ಬಾರಿ ಬೀಜದ ಗೆಡ್ಡೆ ದೊರೆಯುವುದು ಸ್ವಲ್ಪ ವಿಳಂಬವಾಗಿದೆ. 30ರಿಂದ 40 ಎಂ.ಎಂ. ಗಾತ್ರದ ಯಾವುದೇ ರೋಗಗಳಿಲ್ಲದ ಗೆಡ್ಡೆಯ ಪಾಕೆಟ್‌ ಒಂದಕ್ಕೆ ₹ 800ರಿಂದ ₹ 2,000 ಬೆಲೆ ಇದ್ದು, ತಂದ ನಂತರ ಬಿಸಿಲಿಗೆ ಒಣಗಿಸಬೇಕು. ಡಿಸೆಂಬರ್‌ ತಿಂಗಳಲ್ಲಿ ಗೆಡ್ಡೆ ನಾಟಿ ಮಾಡಬೇಕು. ಹದ ಮಾಡಿದ ಭೂಮಿಯಲ್ಲಿನ ಉಬ್ಬುಗಳಲ್ಲಿ ಈರುಳ್ಳಿ ಗೆಡ್ಡೆಗಳನ್ನು 5 ಸೆ.ಮೀ. ಅಂತರದಲ್ಲಿ 2 ಸೆ.ಮೀ ಆಳದವರೆಗೆ ಬಿತ್ತನೆ ಮಾಡಿ ಅದರ ಮೇಲೆ ಸ್ವಲ್ಪ ಓರೆಯಾಗಿ ಮಣ್ಣು ಮುಚ್ಚಿ ಕಾಲಕಾಲಕ್ಕೆ ಔಷಧ ಗೊಬ್ಬರ ಹಾಕುತ್ತಿರಬೇಕು. ಆಗ ಉತ್ಕೃಷ್ಟವಾದ ಬೀಜ ತೆಗೆಯಬಹುದು ಎಂದು ರೈತರು ಮಾಹಿತಿ ನೀಡಿದ್ದಾರೆ.

**

ಕಳೆದ ಬಾರಿ 2,500 ಹೆಕ್ಟೇರ್ ಈರುಳ್ಳಿ ಬಿತ್ತನೆಯಾಗಿತ್ತು. ಈ ಬಾರಿ ಉತ್ತಮ ಮಳೆಯಾಗಿದ್ದು, ಭೂಮಿಯಲ್ಲಿ ತೇವಾಂಶವಿದೆ. ಜೊತೆಗೆ ಕಳೆದ ಬಾರಿ ಈರುಳ್ಳಿಗೆ ಉತ್ತಮ ಬೆಲೆ ಸಿಕ್ಕಿತ್ತು. ಹಾಗಾಗಿ ತಾಲ್ಲೂಕಿನಾದ್ಯಂತ 2,800 ಹೆಕ್ಟೇರ್ ಬಿತ್ತನೆ ಆಗುವ ನಿರೀಕ್ಷೆಯಿದೆ. ಮಂಜುನಾಥ್, ತೋಟಗಾರಿಕೆ ಹಿರಿಯ ನಿರ್ದೇಶಕ

ಈರುಳ್ಳಿ ಬೀಜದ ಸಸಿಗಳಿಗೆ ಈ ಬಾರಿ ರೋಗಬಾಧೆ ಇಲ್ಲ. ವಾತಾವರಣವೂ ಉತ್ತಮವಾಗಿದೆ. ಆದ್ದರಿಂದ ಇಳುವರಿ ಚೆನ್ನಾಗಿದೆ. ಬಹಳಷ್ಟು ರೈತರು ಈರುಳ್ಳಿ ಬೀಜ ಮಾಡದಿರುವುದರಿಂದ ಈ ಬಾರಿ ಹೆಚ್ಚು ಲಾಭ ಪಡೆಯಬಹುದು.