ಗಿರಿನಗರದ ಶ್ರೀರಾಮಾಶ್ರಮದಲ್ಲಿ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ಗೋಸ್ವರ್ಗ ಚಾತುರ್ಮಾಸ್ಯ ; ಶ್ರೀಕರಾರ್ಚಿತ ಶ್ರೀರಾಮದೇವರಿಗೆ ಸಾಮ್ರಾಜ್ಯ ಪಟ್ಟಾಭಿಷೇಕ – ಕಹಳೆ ನ್ಯೂಸ್
ರಾಮಪಟ್ಟಾಭಿಷೇಕದ ಮೂಲಕ ತ್ರೇತಾಯುಗವನ್ನು ಮರಳಿ ನೆನಪಿಸುವ ಕಾರ್ಯ ಮಾಡಲಾಗುತ್ತದೆ. ಶ್ರೀರಾಮಪಟ್ಟಾಭಿಷೇಕದ ನೈಜ ಸ್ವಾಧ, ಆನಂದ ಸಿಗಬೇಕಾದರೆ ಹಿಂದಿನ ರಾಮಾಯಣದ ಅಧ್ಯಯನ ಮಾಡಬೇಕು. ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ರಾಮನ ರಾಜತ್ವವನ್ನು ಪ್ರತಿಯೊಬ್ಬರೂ ಅಂಗೀಕರಿಸಿದ್ದೀರಿ ಎಂದು ರಾಮಚಂದ್ರಾಪುರ ಮಠದ ಪರಮಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.
ಅವರು ಬುಧವಾರ ಗಿರಿನಗರದ ಶ್ರೀರಾಮಾಶ್ರಮದಲ್ಲಿ ಗೋಸ್ವರ್ಗ ಚಾತುರ್ಮಾಸ್ಯ ಶುಭಸಂದರ್ಭದಲ್ಲಿ ಶ್ರೀಕರಾರ್ಚಿತ ಶ್ರೀರಾಮದೇವರಿಗೆ ಸಾಮ್ರಾಜ್ಯ ಪಟ್ಟಾಭಿಷೇಕ ಸೇವೆಯ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಹದಿನಾಲ್ಕು ವರ್ಷದ ವನವಾಸ ಮಾಡಿ ಜಗತ್ತಿಗೆ ಸೇತು ನಿರ್ಮಿಸಿ, ಲೋಕ ಕಂಠಕರನ್ನು ಮರ್ಧನ ಮಾಡಿದ ಬಳಿಕ ಶ್ರೀರಾಮನಿಗೆ ಪಟ್ಟಾಭಿಷೇಕವಾಗಿದೆ. ಜಗತ್ತಿನ ಕಲ್ಯಾಣ ಕಾರ್ಯಗಳನ್ನು ಮಾಡಿದ ಬಳಿಕ ಪಟ್ಟವನ್ನು ಏರಿದ್ದು. ಮಹಾನ್ ವ್ಯಕ್ತಿಗಳ ಬದುಕಿನ ಸನ್ನಿವೇಶಗಳ ಮೂಲಕವೇ ನೆನಪು ಸದಾ ಉಳಿದುಕೊಳ್ಳುತ್ತದೆ. ರಾಮನ ವೈಭವಕ್ಕೆ ಸಾಟಿಯಾದುದು ಬೇರೊಂದಿಲ್ಲ. ೫೩೭ದಿನಕ್ಕೆ ಒಂದು ಬಾರಿ ಅಗತ್ಸ್ಯ ಪೂಜಿತವಾದ ಶಂಕರಾಚಾರ್ಯ ಪ್ರಭಕ್ತರಾಗಿರತಕ್ಕಂತಹ ಅನೇಕ ಮಹಾತ್ಮರಿಂದ ಸಂಪೂಜಿತವಾಗಿರತಕ್ಕಂತಹ ಶ್ರೀರಾಮ ಸೀತೆಯವರಿಗೆ ಪಟ್ಟಾಭಿಷೇಕವಾಗುತ್ತದೆ ಎಂದು ತಿಳಿಸಿದರು.
ವಿಶಿಷ್ಠವಾಗಿ ಅಲಂಕೃತವಾದ ಸಿಂಹಾಸನದಲ್ಲಿ ಪಟ್ಟಾಭಿಷಿಕ್ತನಾದ ಶ್ರೀಕರಾರ್ಚಿತ ಶ್ರೀರಾಮದೇವರು ಹಾಗೂ ಸೀತಾಮಾತೆಗೆ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ನವರತ್ನಾಭಿಷೇಕ, ಸುವರ್ಣಾಭಿಷೇಕ ರಜತಾಭಿಷೇಕ ಮಾಡಿದರು. ವಿಶೇಷ ಸೇವೆ, ಪಟ್ಟಕಾಣಿಕೆಯಾಗಿ ಶ್ರೀಮಠದ ಶಿಷ್ಯಭಕ್ತರು ನವರತ್ನ, ಆಭರಣಗಳು ಸೇರಿ ೭೫ಕ್ಕೂ ಹೆಚ್ಚು ವಿವಿಧ ಸುವಸ್ತುಗಳು ಹಾಗೂ ಕಾಣಿಕೆಗಳನ್ನು ಸೇವಾರೂಪದಲ್ಲಿ ಶ್ರೀರಾಮದೇವರಿಗೆ ಸಮರ್ಪಿಸಿದರು. ಪಟ್ಟಾಭಿಷೇಕದ ಸಂದರ್ಭದಲ್ಲಿ ಸಂಗೀತ ಸೇವೆ, ನೃತ್ಯ ಸೇವೆ, ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ ಮಂತ್ರಗಳ ಘೋಷ ನೆರವೇರಿತು.