ಅಕ್ರಮವಾಗಿ ಮಕ್ಕಳ ಫೋಟೋ ಕ್ಲಿಕ್..! ಶಾಲಾ ಶಿಕ್ಷಕ ವೃಂದದ ತೇಜೋವಧೆಗೆ ಪ್ಲಾನ್..! ಪ್ರಕರಣ ದಾಖಲು –ಕಹಳೆ ನ್ಯೂಸ್
ಮಕ್ಕಳ ಪೊಟೋವನ್ನು ಅಕ್ರಮವಾಗಿ ತೆಗೆದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಶಾಲಾ ಶಿಕ್ಷಕ ವೃಂದದ ತೇಜೋವಧೆಗೆ ಯತ್ನಿಸಿದ ಘಟನೆ ಉಪ್ಪಿನಂಗಡಿಯ ಶಾಲೆಯೊಂದರಲ್ಲಿ ನಡೆದಿದೆ.
ಮಾರ್ಚ್ 01 ರಂದು ನಡೆದ ರಾಜ್ಯ ಸರಕಾರಿ ನೌಕರರ ಮುಷ್ಕರದ ವೇಳೆ ಶಾಲಾ ಶಿಕ್ಷಕರು ಭಾಗಿಯಾಗುತ್ತಿರುವುದರಿಂದ ಶಾಲೆಗೆ ಮಕ್ಕಳನ್ನು ಹಾಜರಾಗಬೇಡಿ ಎಂದು ತಿಳಿಸಿದ್ದಾರೆ. ಆದ್ರೂ ಪೋಷಕರಾದ ಮೊಯ್ದಿನ್ ಕುಟ್ಟಿ, ಉಮ್ಮರ್, ಫಾರೂಕ್ ಜಿಂದಗಿಯವರು ಕೆಲವು ಮಕ್ಕಳ ಪೋಷಕರ ಮನವೊಲಿಸಿ ಅವರ ಮಕ್ಕಳನ್ನು ಶಾಲೆಗೆ ಬರುವಂತೆ ಮಾಡಿರುವುದಲ್ಲದೆ, ಆ ಮಕ್ಕಳ ಜೊತೆ ಬೇರೆ ಶಾಲಾ ಮಕ್ಕಳನ್ನು ಉದ್ದೇಶಪೂರ್ವಕವಾಗಿ ನಿಲ್ಲಿಸಿ ಮಕ್ಕಳ ಅಕ್ರಮ ಪೊಟೋ ವಿಡಿಯೋ ತೆಗೆದಿದ್ದಾರೆ.
ಅಲ್ಲದೇ, ತೆಗೆದ ವಿಡಿಯೋ- ಪೊಟೋಗಳನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸಮಾಜದಲ್ಲಿ ಗೌರವಾನ್ವಿತ ಶಿಕ್ಷಕರ ವಿರುದ್ಧ ನಿಂದನಾತ್ಮಕ ಸಂದೇಶವನ್ನು ಪ್ರಕಟನೆ ಮಾಡುತ್ತಿದ್ದು, ಶಿಕ್ಷಕರನ್ನು ಅವಮಾನಿಸುತ್ತಿದ್ದಾರೆ. ಅಷ್ಟೇ ಮಾತ್ರವಲ್ಲದೇ, ಶಾಲಾ ಮಕ್ಕಳ ಪೊಟೋ ಹಾಗೂ ವಿಡಿಯೋವನ್ನು ಅನುಮತಿ ಇಲ್ಲದೆ ತೆಗೆಯುವುದು ಕಾನೂನು ಬಾಹಿರವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಪೊಟೋಗಳನ್ನು ಹಾಕಿ ಶಿಕ್ಷಕರನ್ನು ನಿಂದಿಸಿ ಅವಮಾನಿಸಿರುವ ಕೃತ್ಯವನ್ನು ಕಾನೂನು ಕ್ರಮಕ್ಕೆ ಒಳಪಡಿಸಬೇಕೆಂದು, ಅಗ್ರಹಿಸಿ ಶಾಲಾ ಮುಖ್ಯ ಶಿಕ್ಷಕ ಹನುಮಂತಯ್ಯ ಮತ್ತು ಐವರು ಸಹ ಶಿಕ್ಷಕರು, ಶಾಲಾ ಎಸ್ಡಿಎಂಸಿ ಅಧ್ಯಕ್ಷರು ಸಹಿ ಹಾಕಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ.