ಮೈಸೂರು: ‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಬಹುಮತ ಗಳಿಸಲಿದೆ’ ಎಂದು ಆ ಪಕ್ಷದ ಶಾಸಕ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜನರು ಬಿಜೆಪಿಯ ಜೊತೆಗಿದ್ದಾರೆ. ವಿಜಯ ಸಂಕಲ್ಪ ಯಾತ್ರೆಗೆ ನಿರೀಕ್ಷೆಗೂ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಬಿಜೆಪಿಯಿಂದ ಮಾತ್ರ ನಮ್ಮ ಅಭಿವೃದ್ಧಿ ಎನ್ನುವುದು ಎಲ್ಲರಿಗೂ ಗೊತ್ತಾಗಿದೆ’ ಎಂದರು.‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಹಾಗೂ ಹಿಂದುಳಿದ ವರ್ಗದವರ ನಿರೀಕ್ಷೆಗಳಿಗೆ ತಕ್ಕಂತೆ ನಮ್ಮ ಸರ್ಕಾರಗಳು ಕೆಲಸ ಮಾಡಿದ್ದರಿಂದ ಅವರೆಲ್ಲರೂ ನಮ್ಮೊಂದಿಗಿದ್ದಾರೆ.
ಸಚಿವ ಸಂಪುಟದಲ್ಲೂ ಆ ವರ್ಗದವರಿಗೆ ಆದ್ಯತೆ ನೀಡಲಾಗಿದೆ. ಈ ಸರ್ಕಾರದಿಂದ ಅನುಕೂಲವಾಗಿದೆ ಎಂದು ಈ ಸಮಾಜದ ಮಠಾಧೀಶರು ಹಾಗೂ ಮುಖಂಡರೆಲ್ಲರೂ ಹೇಳುತ್ತಿದ್ದಾರೆ. ಇದೆಲ್ಲವೂ ಚುನಾವಣೆಯಲ್ಲಿ ಸಹಾಯಕ್ಕೆ ಬರಲಿದೆ. ನಮ್ಮ ಸರ್ಕಾರ ಬಂದ ಮೇಲೆ, ಪರಿಶಿಷ್ಟರು ಹಾಗೂ ಹಿಂದುಳಿದ ವರ್ಗದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಆ ಸಮಾಜಗಳಿಗೆ ಬೇಕಾದ ಮತ್ತಷ್ಟು ಅಭಿವೃದ್ಧಿ ಕೆಲಸವನ್ನು ಮಾಡಿಕೊಡಲಾಗುವುದು’ ಎಂದು ಭರವಸೆ ನೀಡಿದರು.‘ವಿವಿಧ ಸಮಾಜದವರು ಮೀಸಲಾತಿಗೆ ಸಂಬಂಧಿಸಿದಂತೆ ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಕುಲಶಾಸ್ತ್ರೀಯ ಅಧ್ಯಯನ ನಡೆಸಲಾಗುತ್ತಿದೆ’ ಎಂದರು.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮಾತನಾಡಿ, ‘ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರದ ಅವಧಿಯಲ್ಲಿ ಮಾಡಿದ ಕೆಲಸಗಳ ರಿಪೋರ್ಟ್ ಕಾರ್ಡ್ ಅನ್ನು ಜನರ ಮುಂದಿಡುತ್ತಿದ್ದೇವೆ. ನಾವು ಕೇವಲ ಘೋಷಣೆ–ಭರವಸೆ ಮೇಲೆ ಚುನಾವಣೆ ಮಾಡುವುದಿಲ್ಲ. ಮಾಡಿರುವ ಕೆಲಸಗಳನ್ನು ತಿಳಿಸಿ ಮತ ಕೇಳುತ್ತಿದ್ದೇವೆ’ ಎಂದು ತಿಳಿಸಿದರು.‘ಪೂರ್ವನಿಯೋಜಿತ ಕಾರ್ಯಕ್ರಮ ಇದ್ದಿದ್ದರಿಂದ ಸಚಿವ ವಿ.ಸೋಮಣ್ಣ ಚಾಮರಾಜನಗರದ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಅವರಿಗೆ ಬೇರೆ ಜವಾಬ್ದಾರಿ ಕೊಡಲಾಗಿದ್ದು, ಅದನ್ನು ನಿರ್ವಹಿಸುತ್ತಿದ್ದಾರೆ.
ಅಸಮಾಧಾನದ ಪ್ರಶ್ನೆಯೇ ಇಲ್ಲ’ ಎಂದು ಕೆ.ಎಸ್.ಈಶ್ವರಪ್ಪ ಹಾಗೂ ಡಿ.ವಿ.ಸದಾನಂದಗೌಡ ಸಮರ್ಥಿಸಿಕೊಂಡರು.‘ಘೋಷಣೆ ಮಾಡುವುದರಲ್ಲಿ, ಪಟಾಕಿ ಹೊಡೆಯುವುದರಲ್ಲಿ ಸಿದ್ದರಾಮಯ್ಯ ಎತ್ತಿದ ಕೈ’ ಎಂದು ಈಶ್ವರಪ್ಪ ಟೀಕಿಸಿದರು.‘ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆದರೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಕುಟುಂಬದವರು ಜೈಲಿಗೆ ಹೋಗಬಹುದೇ ಹೊರತು ಬಿಜೆಪಿಯವರು ಹೋಗುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ರಾಜೇಂದ್ರ, ನಗರ ಘಟಕದ ಅಧ್ಯಕ್ಷ ಟಿ.ಎಸ್.ಶ್ರೀವತ್ಸ, ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಳಾ ಸೋಮಶೇಖರ್, ಪದಾಧಿಕಾರಿಗಳಾದ ದತ್ತಾತ್ರೇಯ, ಮೈ.ವಿ. ರವಿಶಂಕರ್, ಕಾಪು ಸಿದ್ದಲಿಂಗಸ್ವಾಮಿ, ಡಾ.ವಸಂತಕುಮಾರ್ ಇದ್ದರು.