ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವನ್ನು ಸುಬ್ರಹ್ಮಣ್ಯ ಮಠಕ್ಕೆ ಒಪ್ಪಿಸಿ ಪ್ರಮೋದ್ ಮುತಾಲಿಕ್ ಆಗ್ರಹ – ಕಹಳೆ ನ್ಯೂಸ್
ಗೋಕರ್ಣ ಮಹಾಬಲೇಶ್ವರ ದೇವಸ್ಥಾನವನ್ನು ರಾಜ್ಯ ಸರ್ಕಾರ ಸುಪರ್ದಿಗೆ ತೆಗೆದುಕೊಳ್ಳುವ ಪ್ರಯತ್ನ ನಡೆಸುತ್ತಿದ್ದರೆ, ಇತ್ತ ಧಾರ್ಮಿಕ ಪ್ರಸಿದ್ಧ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವನ್ನು ಸುಬ್ರಹ್ಮಣ್ಯ ಮಠಕ್ಕೆ ಒಪ್ಪಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.
ಪುರಾಣ ಪ್ರಸಿದ್ಧ ತೀರ್ಥಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಪುರಾತನ ದಾಖಲೆಗಳ ಪ್ರಕಾರ ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠಕ್ಕೆ
ಸೇರಬೇಕು. ಆದ್ದರಿಂದ ಈ ದೇವಸ್ಥಾನವನ್ನು ಮಠದ ವಶಕ್ಕೆ ಒಪ್ಪಿಸಬೇಕು. ಈ ನಿಟ್ಟಿನಲ್ಲಿ ಸುಬ್ರಹ್ಮಣ್ಯ ಸ್ವಾಮೀಜಿ ಅವರೊಂದಿಗೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಹಾಗೂ ಸಚಿವರನ್ನು ಭೇಟಿ ಮಾಡಿ ದಾಖಲೆಯನ್ನು ಸಲ್ಲಿಸಲಾಗುವುದು ಎಂದು ಶ್ರೀರಾಮಸೇನೆ ಸಂಸ್ಥಾಪಕ
ಪ್ರಮೋದ್ ಮುತಾಲಿಕ್ ಮಂಗಳೂರಿನಲ್ಲಿ ಹೇಳಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದಾಖಲೆಗಳನ್ನು ಮುಂದಿರಿಸಿ ಸುದ್ದಿಗೋಷ್ಠಿಯಲ್ಲಿ
ಮಾತನಾಡಿದ ಅವರು, ಈಗಾಗಲೇ ಗೋಕರ್ಣ ದೇವಸ್ಥಾನವನ್ನುರಾಮಚಂದ್ರಾಪುರ ಮಠದಿಂದ ವಶಕ್ಕೆ ತೆಗೆದುಕೊಳ್ಳಲು ಸರ್ಕಾರ ಮುಂದಾಗಿದೆ.
ಈ ಬಗ್ಗೆ ಮಠ ಸುಪ್ರೀಂ ಕೋರ್ಟ್‍ನಲ್ಲಿ ಪ್ರಶ್ನಿಸುತ್ತಿದೆ. ಗೋಕರ್ಣ ಕೂಡ ರಾಮಚಂದ್ರಾಪುರ ಮಠಕ್ಕೆ ಸೇರಿದ ದೇವಸ್ಥಾನ. ಅದೇ ರೀತಿ ಇಲ್ಲಿ ಕುಕ್ಕೆ
ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಮಠ ನಡುವೆ ಅವಿನಾಭಾವ ಸಂಬಂಧ ಇದೆ. ಇದನ್ನು ಹಾಳುಗೆಡವಲು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಭಕ್ತರ ಹಿತರಕ್ಷಣಾ
ಸಮಿತಿ ಹೆಸರಿನಲ್ಲಿ ಕೆಲವರು ಪ್ರಯತ್ನ ನಡೆಸುತ್ತಿದ್ದಾರೆ. ಅಲ್ಲದೆ ಭಕ್ತರಲ್ಲೂ ಗೊಂದಲ ಸೃಷ್ಟಿಸುವ ಹುನ್ನಾರ ನಡೆಸಲಾಗುತ್ತಿದೆ. ಈ ಹಿಂದೆ ದೇವಸ್ಥಾನ ಮತ್ತು
ಮಠ ಜೊತೆಯಲ್ಲಿ ಜೋಡುಪಲ್ಲಕಿ ಉತ್ಸವಗಳನ್ನು ನಡೆಸುತ್ತಿದ್ದ ಬಗ್ಗೆ ದಾಖಲೆಗಳು ಹೇಳುತ್ತವೆ. ಈಗ ಸ್ಥಗಿತಗೊಂಡಿರುವ ಜೋಡುಪಲ್ಲಕಿ ಉತ್ಸವ
ಮತ್ತೆ ಮುಂದುವರಿಯಬೇಕು ಎಂದರು.
ದತ್ತಿ ಇಲಾಖೆ ಸ್ವಾಧೀನ ಬಗ್ಗೆ ದಾಖಲೆಯೇ ಇಲ್ಲ : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ 1886ರಿಂದ ಸುಬ್ರಹ್ಮಣ್ಯ ಮಠದ ಆಧೀನದಲ್ಲೇ
ಇತ್ತು. ಈ ಬಗ್ಗೆ ಬ್ರಿಟಿಷ್ ಅಧಿಕಾರಿಯೊಬ್ಬರು ಜರ್ನಿ ಟು ಕೂರ್ಗ್ ಮಲಬಾರ್ ಎಂಬ
ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. 1889ರಲ್ಲಿ ಮದ್ರಾಸ್ ಹೈಕೋರ್ಟ್ ನೀಡಿದ
ವ್ಯಾಜ್ಯವೊಂದರ ತೀರ್ಪಿನಲ್ಲಿ ಕೂಡ ಮಠ ಅಧೀನದ ದೇವಸ್ಥಾನ ಎಂದು
ಉಲ್ಲೇಖಿಸಿತ್ತು. ಸರ್ವೆ ನಂಬರು 82/1, 82/3 ಹಾಗೂ 82/11ರಲ್ಲಿ ದೇವಸ್ಥಾನ,
ಆವರಣ, ಪೂಜೆ ನಡೆಯುವ ಸ್ಥಳ ಎಲ್ಲವೂ ಮಠದ ಸೊತ್ತು ಎಂದು
ಉಲ್ಲೇಖಿಸಲಾಗಿದೆ. ಆದರೆ ದೇವಸ್ಥಾನ ಸರ್ಕಾರದ ವಶಕ್ಕೆ ಬಂದ ಬಗ್ಗೆ
ಯಾವುದೇ ದಾಖಲೆ ನಮ್ಮಲ್ಲಿ ಇಲ್ಲ ಎಂದು ಧಾರ್ಮಿಕ ದತ್ತಿ ಇಲಾಖೆಯೇ ಲಿಖಿತವಾಗಿ
ತಿಳಿಸಿದೆ ಎಂದರು ಮುತಾಲಿಕ್.
ಅಷ್ಟಮಂಗಲದಲ್ಲಿ ಕಂಡುಬಂದದ್ದು : 2007ರಲ್ಲಿ ದೇವಸ್ಥಾನದಲ್ಲಿ ನಡೆಸಿದ ಅಷ್ಟಮಂಗಲ ಪ್ರಶ್ನೆಯಲ್ಲಿ
ದೇವಸ್ಥಾನದಲ್ಲಿ ನಡೆಯುವ ಧಾರ್ಮಿಕ ಕ್ರಿಯೆಗಳಲ್ಲಿ ಅಪಚಾರವಾಗಿದೆ ಎಂದು
ಹೇಳಲಾಗಿದೆ. ಮಠದ ಸ್ವಾಮೀಜಿ ಅವರಲ್ಲಿ ಕ್ಷಮೆ ಕೇಳಿ ನಂತರ ವಿವಿಧ ಧಾರ್ಮಿಕ
ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಹೇಳಲಾಗಿದೆ. ಈ ಎಲ್ಲ
ಸಂಗತಿಗಳನ್ನು ದೇವಸ್ಥಾನದ ಆಡಳಿತ ಮಂಡಳಿಯು ಅಷ್ಟಮಂಗಲ ಪ್ರಶ್ನೆ
ಪಟ್ಟಿ ಪುಸ್ತಕದಲ್ಲಿ ಉಲ್ಲೇಖಿಸಿದೆ. 1899ರಲ್ಲಿ ಮಠಾಧಿಪತಿಯೊಬ್ಬರ ನೇತೃತ್ವದಲ್ಲಿ
ಟ್ರಸ್ಟಿಗಳನ್ನು ನೇಮಿಸಿರುವ ವಿಚಾರವೂ ದಾಖಲೆಗಳಲ್ಲಿ ಇದೆ. ಆದ್ದರಿಂದ
ದೇವಸ್ಥಾನವನ್ನು ಮಠದ ವಶಕ್ಕೆ ಬಿಟ್ಟುಕೊಡಬೇಕು ಎಂದು ಮುತಾಲಿಕ್
ಆಗ್ರಹಿಸಿದರು.
ಸರ್ಪ ಸಂಸ್ಕಾರ ಮಠದಲ್ಲೂ ಮಾಡಬಹುದು : ಸರ್ಪ ಸಂಸ್ಕಾರ ಹಾಗೂ ಅದಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಕೇವಲ
ದೇವಸ್ಥಾನ ಮಾತ್ರವಲ್ಲ ಮಠದಲ್ಲಿಯೂ ಮಾಡಬಹುದು. ಅದು ಆಯಾ
ಭಕ್ತರ ಅನುಕೂಲಕ್ಕೆ ಬಿಟ್ಟ ವಿಚಾರ. ದೇವಸ್ಥಾನದಲ್ಲಿ 400 ರು.ಗೆ
ಸರ್ಪಸಂಸ್ಕಾರ ಸೇವೆ ನೆರವೇರಿಸುತ್ತಾರೆ. ಮಠದಲ್ಲಿ 6 ಸಾವಿರ ರು.ವರೆಗೆ
ವಸೂಲಿ ಮಾಡುತ್ತಾರೆ ಎಂಬ ಆರೋಪ ಕೇಳಿಬಂದಿದೆ. ವಾಸ್ತವದಲ್ಲಿ ಸರ್ಪಸಂಸ್ಕಾರ
ಎನ್ನುವುದು ಸಾಮೂಹಿಕವಾಗಿ ಮಾಡುವ ಧಾರ್ಮಿಕ ಕ್ರಿಯೆ ಅಲ್ಲ. ಅದು
ಪ್ರಾಯಶ್ಚಿತ್ತಕ್ಕಾಗಿ ವ್ಯಕ್ತಿಗತವಾಗಿ ಮಾಡುವ ಕಾರ್ಯಕ್ರಮ. ಸಾಮೂಹಿಕವಾಗಿ
ಸರ್ಪಸಂಸ್ಕಾರಕ್ಕೆ ಶಾಸ್ತ್ರಗಳಲ್ಲೂ ಸಹಮತ ಇಲ್ಲ. ಸಾಮೂಹಿಕವಾಗಿ ಕನಿಷ್ಠ
ನೂರು ಮಂದಿಯನ್ನು ಸೇರಿಸಿದರೂ ಮೊತ್ತ ಲಕ್ಷ ರು. ದಾಟುವುದಿಲ್ಲವೇ?
ವ್ಯಕ್ತಿಗತವಾಗಿಯಾದರೆ ದಿನದಲ್ಲಿ ಐದಾರು ಮಂದಿಗಿಂತ ಹೆಚ್ಚಿಗೆ ನೆರವೇರಿಸಲು
ಸಾಧ್ಯವಾಗುವುದಿಲ್ಲ. ಹಾಗಿರುವಾಗ ಮಠದಲ್ಲಿ ಬೇಕಾಬಿಟ್ಟಿ ವಸೂಲಿ ಮಾಡುತ್ತಾರೆ
ಎಂಬ ಆರೋಪದಲ್ಲಿ ಹುರುಳಿಲ್ಲ. ಒಂದು ವೇಳೆ ಆರೋಪ ಇದ್ದರೆ ನೇರವಾಗಿ ದೂರು
ನೀಡಲು ಭಕ್ತರಿಗೆ ಅವಕಾಶ ಇದೆ ಎಂದು ಮುತಾಲಿಕ್ ಹೇಳಿದರು.
ಶ್ರೀರಾಮಸೇನೆ ಮುಖಂಡರಾದ ಆನಂದ ಶೆಟ್ಟಿ ಅಡ್ಯಾರ್, ಜೀವನ್ ನೀರುಮಾರ್ಗ,
ಹರೀಶ್ ಅಮ್ಟಾಡಿ, ಹರೀಶ್ ಶೆಟ್ಟಿ ಇದ್ದರು.
ದೇವಸ್ಥಾನ ಆದಾಯ ಲೂಟಿ ? :
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕೋಟಿಗಟ್ಟಲೆ ಆದಾಯವನ್ನು ಲೂಟಿ
ಮಾಡಲಾಗುತ್ತಿದೆ ಎಂದು ಪ್ರಮೋದ್ ಮುತಾಲಿಕ್ ಆರೋಪಿಸಿದರು. ದೇವಸ್ಥಾನದಲ್ಲಿ
ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ದೇವಸ್ಥಾನದಿಂದ
ಬೆಳಗಾವಿಯ ಅಥಣಿಯ ಸಂಸ್ಥೆಯೊಂದಕ್ಕೆ 2 ಲಕ್ಷ ರು.ವರೆಗೆ ಮೊತ್ತ
ಪಾವತಿಯಾಗುತ್ತಿದೆ. ಈ ಎಲ್ಲ ವಿಚಾರಗಳ ಬಗ್ಗೆ ಲೋಕಾಯುಕ್ತ ಹಾಗೂ ದತ್ತಿ
ಇಲಾಖೆ ಅಧಿಕಾರಿಗಳಿಂದ ತನಿಖೆ ನಡೆಯಬೇಕು ಎಂದು ಮುತಾಲಿಕ್ ಆಗ್ರಹಿಸಿದರು.