ಧರ್ಮಸಾಮ್ರಾಜ್ಯ ಸ್ಥಾಪನೆಗಾಗಿ ಸೆ.03ರಂದು ಶ್ರೀ ರಾಮ ಕ್ಷೇತ್ರ ಕನ್ಯಾಡಿಯಲ್ಲಿ ಮೇಳೈಸಲಿದೆ ಐತಿಹಾಸಿಕ ಧರ್ಮ ಸಂಸದ್ – ಕಹಳೆ ನ್ಯೂಸ್
ಬೆಳ್ತಂಗಡಿ, ಸೆ02 : ಧರ್ಮಸಾಮ್ರಾಜ್ಯ ಸ್ಥಾಪನೆಗಾಗಿ ದಕ್ಷಿಣದ ಅಯೋಧ್ಯೆ ಎಂದೇ ಖ್ಯಾತಿ ಪಡೆದಿರುವ ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರ ಶ್ರೀ ರಾಮ ಕ್ಷೇತ್ರದಲ್ಲಿ ಸೆ03ರಂದು ಧರ್ಮ ಸಂಸದ್ ಮೇಳೈಸಲಿದೆ.
ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದಲ್ಲಿ ನಡೆಯಲಿರುವ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕ ದಶಮಾನೋತ್ಸವ ಹಾಗೂ ರಾಷ್ಟ್ರೀಯ ಧರ್ಮಸಂಸದ್ ಕಾರ್ಯಕ್ರಮವನ್ನು ರಾಜ್ಯದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಉದ್ಟಾಟಿಸಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದಾರೆ.
2018 ರ ಧರ್ಮ ಸಂಸದ್ ಸಂತ ಅತಿಥಿಗಳ ಸ್ವಾಗತಕ್ಕೆ ಸಜ್ಜಾಗಿದ್ದು, ಉಜಿರೆಯಿಂದ ಕನ್ಯಾಡಿ ವರೆಗೂ ಸ್ವಾಗತ ಫಲಕಗಳು, ಬಂಟಿಂಗ್ಸ್‌ಗಳು, ಸ್ವಾಗತ ಕಮಾನುಗಳು ರಾರಾಜಿಸುತ್ತಿದೆ. ಮಾತ್ರವಲ್ಲ ಬೆಳ್ತಂಗಡಿ ತಾಲೂಕಿನ ಉಜಿರೆ ಎಂಬ ಪುಟ್ಟ ಊರು ತಳಿರು ತೋರಣಗಳಿಂದ ಅಲಂಕೃತಗೊಂಡು ಭಕ್ತರನ್ನು ಕೈ ಬೀಸಿ ಕರೆಯುತ್ತಿವೆ.
ಧರ್ಮಸಂಸದ್ – 2018 ಕಾರ್ಯಕ್ರಮದ ಜೊತೆಗೆ, ರಾಮಕ್ಷೇತ್ರದ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕದ ದಶಮಾನೋತ್ಸವ ಆಚರಣೆಯ ಸಂಭ್ರಮ-ಸಡಗರವೂ ಸೇರಿಕೊಂಡಿದೆ. ರಾಮಕ್ಷೇತ್ರದ ಆವರಣದಲ್ಲಿ ಮುಖ್ಯ ವೇದಿಕೆ ಸಿದ್ಧಗೊಂಡಿದ್ದು ಹದಿನೈದು ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಮುಖ್ಯ ವೇದಿಕೆಯಲ್ಲಿ 108 ಮಹಾಮಂಡಲಾಧೀಶರು, ಸಂತರು ಹಾಗೂ ಸಚಿವರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಮುನ್ನೂರು ಮಂದಿ ಗಣ್ಯರಿಗೆ ಆಸನಕ್ಕಾಗಿ ಪ್ರತ್ಯೇಕ ವೇದಿಕೆ ಸಿದ್ಧವಾಗಿದೆ. ಅನ್ನಛತ್ರದ ಎದುರಿನ ಮೈದಾನ, ಕನ್ಯಾಡಿ ಶಾಲಾ ವಠಾರದಲ್ಲಿ, ರಾಮಕ್ಷೇತ್ರದ ಅಂಗಣದಲ್ಲಿ ಭೋಜನ ವ್ಯವಸ್ಥೆಯನ್ನು ಮಾಡಲಾಗಿದೆ.
ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವೆಡೇಕರ್ ಭಾಗವಹಿಸಲಿದ್ದಾರೆ ಎಂದು ಸಂಸದ ಹಾಗೂ ಕಾರ್ಯಕ್ರಮ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.