ಬೆಂಗಳೂರು: ತವರು ಮನೆಯಿಂದ ದುಬಾರಿ ವೆಚ್ಚದ ರ‍್ಯಾಡೋ ವಾಚ್ ತರಲಿಲ್ಲ ಎಂಬ ಕಾರಣಕ್ಕೆ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಆರ್.ಟಿ ನಗರದಲ್ಲಿ ನಡೆದಿದೆ. ವಜೀರ್ ಅಹಮದ್ ಎಂಬಾತ ತನ್ನ ಪತ್ನಿಯ ಬಳಿ ತವರು ಮನೆಯಿಂದ ದುಬಾರಿ ವೆಚ್ಚದ ರ‍್ಯಾಡೋ ವಾಚ್ ತರುವಂತೆ ತಿಳಿದಿಸಿದ್ದ. ಆದ್ರೆ ಆಕೆ ವಾಚ್ ತರದಿದ್ದ ಕಾರಣ ಪತ್ನಿ ಮುಖಕ್ಕೆ ಕೈಯಿಂದ ಗುದ್ದಿದ್ದಾನೆ. ನಂತರ ಆಕೆಯನ್ನ ಮಧ್ಯರಾತ್ರಿ ನಡುರಸ್ತೆಯಲ್ಲಿ ಬಿಟ್ಟು ಹೋಗಿದ್ದಾನೆ ಎನ್ನಲಾಗಿದೆ.
ವಜೀರ್ ಅಹಮದ್ ೩ ವರ್ಷಗಳ ಹಿಂದೆ ದುಬೈನಲ್ಲಿ ಕೆಲಸಕ್ಕೆ ಸೇರುತ್ತೇನೆಂದು ವಂಚಿಸಿ ಆರೋಪಿ ಸಂತ್ರಸ್ಥೆಯನ್ನ ಮದುವೆಯಾಗಿದ್ದ. ನಂತರ ಯಾವುದೇ ಕೆಲಸಕ್ಕೆ ಸೇರದೇ ಪ್ರತಿ ಹಬ್ಬದಂದು ತವರು ಮನೆಗೆ ಹೋಗಿ ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಅಲ್ಲದೇ ವಜೀರ್ ನಾಲ್ಕೈದು ಮದುವೆಯಾಗಿದ್ದಾನೆ ಎಂಬ ಆರೋಪವಿದೆ. ಈ ಬಗ್ಗೆ ಪತ್ನಿ ಪ್ರಶ್ನಿಸಿದರೆ ಆಕೆ ಮೇಲೆ ಹಲ್ಲೆ ಮಾಡಿ ಮನೆಯಿಂದ ಹೊರ ಹಾಕುತ್ತಿದ್ದ ಎಂದು ಪತ್ನಿ ತಿಳಿಸಿದ್ದಾಳೆ.
ಸದ್ಯ ವಜೀರ್ ಹಾಗೂ ಕುಟುಂಬಸ್ಥರ ವಿರುದ್ಧ ಆರ್.ಟಿ.ನಗರದ ಪೊಲೀಸ್ ಠಾಣೆಯಲ್ಲಿ ಸಂತ್ರಸ್ಥ ಪತ್ನಿ ದೂರು ದಾಖಲಿಸಿದ್ದಾರೆ. ವರದಕ್ಷಿಣೆ ಕಿರುಕುಳ, ಜೀವ ಬೆದರಿಕೆ, ಮಾರಣಾಂತಿಕ ಹಲ್ಲೆಯಡಿ ಕೇಸ್ ದಾಖಲಾಗಿದೆ.