Recent Posts

Sunday, January 19, 2025
ಸುದ್ದಿ

ಹುಟ್ಟುವುದಕ್ಕೂ – ಅವತರಿಸುವುದಕ್ಕೂ ವ್ಯತ್ಯಾಸವಿದೆ ; ಕೃಷ್ಣಕಥಾದಲ್ಲಿ ರಾಘವೇಶ್ವರ ಶ್ರೀ ಅಭಿಮತ – ಕಹಳೆ ನ್ಯೂಸ್

ಭೂಮಿಯಲ್ಲಿ ಹುಟ್ಟುವುದಕ್ಕೂ , ಅವತರಿಸುವುದಕ್ಕೂ ವ್ಯತ್ಯಾಸವಿದೆ. ಭಗವಂತ  ಉದ್ದೇಶವನ್ನಿಟ್ಟುಕೊಂಡು ಭೂಮಿಗೆ ಮನುಷ್ಯರೂಪದಲ್ಲಿ ಇಳಿದು ಬರುವುದು ಅವತಾರವಾಗಿದೆ. ಕೃಷ್ಣಪರಮಾತ್ಮ ಧರ್ಮಗ್ಲಾನಿಯನ್ನು ತಡೆಗಟ್ಟಲು ಅವತರಿಸಿದ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.

ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರಮಠದ ಶಾಖಾಮಠದಲ್ಲಿ ಶ್ರೀಕೃಷ್ಣಾಷ್ಟಮಿಯ ಪ್ರಯುಕ್ತ ನಡೆಯುತ್ತಿರುವ ‘ಕೃಷ್ಣಾಕಥಾ’ ವಿಶಿಷ್ಟ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಶ್ರೀಕೃಷ್ಣನ ಜನನ ಸಂಧರ್ಭದ ಕಥಾಪ್ರವಚನವನ್ನು ಮಾಡಿದ ಶ್ರೀಗಳು, ತ್ರೇತಾಯುಗದಲ್ಲಿ ಶ್ರೀರಾಮ 12 ನೇ ತಿಂಗಳಲ್ಲಿ  ಕೌಸಲ್ಯೆಯ ಉದರದಿಂದ ಜನಿಸಿದರೆ, ದ್ವಾಪರದಲ್ಲಿ ಶ್ರೀಕೃಷ್ಣ 8 ನೇ ತಿಂಗಳಲ್ಲಿ ಧರೆಗವತರಿಸಿದ. ಆಗುತ್ತಿದ್ದ ಧರ್ಮಗ್ಲಾನಿಯನ್ನು ತಡೆಗಟ್ಟಲು ಭಗವಂತ ಅವಸರವಾಗಿ ಅವತರಿಸಿದನೇನೋ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ಪ್ರವಚನ – ಗಾಯನ – ಚಿತ್ರ – ರೂಪಕ -ವಾದನಗಳಿಂದ ಕೂಡಿದ ಈ ವಿಶಿಷ್ಟಕಾರ್ಯಕ್ರಮದಲ್ಲಿ ಶ್ರೀಗಳ ಪ್ರವಚನದ ಜೊತೆಜೊತೆಗೆ, ಕಡತೋಕ ಶ್ರೀಪಾದ್ ಭಟ್, ಶಂಕರಿಮೂರ್ತಿ ಬಾಳಿಲ, ಸಾಕೇತ್ ಶರ್ಮ, ದೀಪಿಕಾ ಭಟ್, ಪೂಜಾ ಕೊರಿಕ್ಕಾರ್,  ಪ್ರಿಯಾ ಕೊರಿಕ್ಕಾರ್ ಹಾಗೂ ರಘುನಂದನ್ ಬೇರ್ಕಡವು ಸಂಗೀತದ ಸಾಥ್ ನೀಡಿದರೆ, ಪ್ರಸಿದ್ಧ ಕಲಾವಿದ ನೀರ್ನಳ್ಳಿ ಗಣಪತಿಯವರು ಪ್ರಸಂಗಕ್ಕೆ ತಕ್ಕ ಚಿತ್ರವನ್ನು ಬಿಡಿಸಿ ಜನರ ಗಮನಸೆಳೆದರು. ಸೂರಿ ಉಪಾಧ್ಯ ತಬಲ ವಾದನದಲ್ಲಿ ಹಾಗೂ ಕೊರ್ಗಿ ಶಂಕರನಾರಾಯಣ ಉಪಾಧ್ಯ ಹಾಗೂ ತಂಡ ‘ಕೃಷ್ಣಜನನ’ದ ರೂಪಕವನ್ನು ನಡೆಸಿ ಶ್ರೀಕೃಷ್ಣನ ಆರಾಧನೆಯನ್ನು ವಿಶೇಷವಾಗಿ ನಡೆಸಲಾಯಿತು. ಅಲಕಾ ಪಟೇಲ್ ಇಂದಿನ  ಕೃಷ್ಣಾಕಥಾದ ಪ್ರಾಯೋಜಕತ್ವವಹಿಸಿದ್ದು, ಶ್ರೀಗಳಿಂದ ಆಶೀರ್ವಾದ ಪಡೆದರು.
ಇದಕ್ಕೂ ಮೊದಲು, ಬೆಳಗ್ಗೆ ಮಕ್ಕಳಿಗೆ ಕೃಷ್ಣ – ರಾಧೆ ವೇಷದ ಸ್ಪರ್ಧೆ,  ಶ್ರೀಕೃಷ್ಣನ ಚಿತ್ರ ಬಿಡಿಸುವ ಸ್ಪರ್ಧೆ, ಬಾಳೆಗೊನೆಯಿಂದ ಹಣ್ಣು ಕೀಳುವ ಸ್ಪರ್ಧೆ, ಮಾತೆಯರಿಗೆ ದೇಶಿ ಗೋವಿನ ಮೊಸರು ಕಡೆಯುವ ಸ್ಪರ್ಧೆ ಹಾಗೂ ಮೊಸರು ಕುಡಿಕೆ ಒಡೆಯುವುದು, ಹಗ್ಗ ಜಗ್ಗಾಟ ಮುಂತಾದವುಗಳ ಮೂಲಕ ಶ್ರೀಕೃಷ್ಣನ ಜನ್ಮೋತ್ಸವವನ್ನು ಆಚರಿಸಲಾಯಿತು. ಸಂಜೆ ಜಯಲಕ್ಷ್ಮಿ ಹಾಗೂ ಸಂಗಡಿಗರಿಂದ ಕರ್ನಾಟಕ ಸಂಗೀತ ಕಾರ್ಯಕ್ರಮ ನಡೆಯಿತು.
ಮಧ್ಯ ರಾತ್ರಿ ಶ್ರೀಕೃಷ್ಣ ಜನನೋತ್ಸವ: ರಾತ್ರಿ  ಶ್ರೀಕೃಷ್ಣ ಜನ್ಮದ ಸಮಯಕ್ಕೆ ಸರಿಯಾಗಿ ಧಾರ್ಮಿಕ ವಿಧಿವಿಧಾನಗಳೊಂದಿಗೆ  ಜನ್ಮೋತ್ಸವವನ್ನು ವಿಜ್ರೂಂಭಣೆಯೊಂದಿಗೆ ಆಚರಿಸಲಾಯಿತು, ಧಾರ್ಮಿಕ ವಿಧಿಯೊಂದಿಗೆ ಅಲಂಕರಿಸಿದ ತೊಟ್ಟಿಲಿನಲ್ಲಿ ಶ್ರೀಕೃಷ್ಣನ ಮೂರ್ತಿಯನ್ನಿಟ್ಟು ಪೂಜಿಸಲಾಯಿತು. ಮಾತೆಯರು ತೊಟ್ಟಿಲನ್ನು ತೂಗಿ ಸಂಭಮಿಸಿದರು.
 
*ಸೆ. 08 ವರೆಗೆ ಪ್ರತಿದಿನ ಸಂಜೆ ಶ್ರೀಕೃಷ್ಣಕಥಾ* :
ಪ್ರಸಿದ್ಧ ಶ್ರೀರಾಮಕಥಾ ಮಾದರಿಯಲ್ಲಿ ಪ್ರವಚನ – ಗಾಯನ – ವಾದನ – ಚಿತ್ರ – ರೂಪಕಗಳ ಸಂಯೋಜನೆಯಲ್ಲಿ,  ಮನೋರಂಜನೆಯೊಂದಿಗೆ ಶ್ರೀಕೃಷ್ಣನ ತತ್ವಗಳನ್ನು ಜನಮಾನಸಕ್ಕೆ ಬಿತ್ತರಿಸುವ ವಿಶಿಷ್ಟ ಕಾರ್ಯಕ್ರಮ “ಕೃಷ್ಣಕಥಾ”ವನ್ನು ಪೂಜ್ಯ ಶ್ರೀಗಳು ನಡೆಸಿಕೊಡಲಿದ್ದು, ಖ್ಯಾತ ಕಲಾವಿದರುಗಳು ಭಾಗವಹಿಸಲಿದ್ದಾರೆ.
ಕಲಾಸಕ್ತರು ಹಾಗೂ ಆಸ್ತಿಕ ಭಕ್ತಜನರು ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.
 ಸೆ. 08 ವರೆಗೆ ಪ್ರತಿದಿನ : ಸಂಜೆ 06.00 – 09.00
 ಸ್ಥಳ : ಶ್ರೀರಾಮಚಂದ್ರಾಪುರಮಠ, ಗಿರಿನಗರ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು