Monday, November 25, 2024
ಸುದ್ದಿ

5 ಮತ್ತು 8 ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್ – ಕಹಳೆ ನ್ಯೂಸ್

ಬೆಂಗಳೂರು : ರಾಜ್ಯದ ಶಾಲೆಗಳಲ್ಲಿ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸುವ ವಿವಾದಕ್ಕೆ ಅಂತ್ಯ ಹಾಡಲು ಹೈಕೋರ್ಟ್ ನಿರ್ಧರಿಸಿದ್ದು, 5 ಮತ್ತು 8 ನೇ ತರಗತಿ ಪಬ್ಲಿಕ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಅನುಮತಿ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಾರ್ಚ್ 27 ರಿಂದ ರಾಜ್ಯದಲ್ಲಿ ಬೋರ್ಡ್ ಪರೀಕ್ಷೆ ನಡೆಸಲಾಗುತ್ತದೆ. ಬೋರ್ಡ್ ಎಕ್ಸಾಂ ನಡೆಸಲು ಶಿಕ್ಷಣ ಕಾಯ್ದೆಯಡಿ ನಿರ್ಬಂಧವಿಲ್ಲ ಎಂದು ಪರೀಕ್ಷೆಗಳನ್ನು ನಡೆಸಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿರುವ ವಿಭಾಗೀಯ ನ್ಯಾಯಪೀಠ ಕೆಲವು ಷರತ್ತುಗಳನ್ನು ಹಾಕಿ, ಅದರಂತೆ ಪರೀಕ್ಷೆ ನಡೆಸಲು ಸೂಚಿಸಿದೆ. ಜೊತೆಗೆ ಈ ಹಿಂದೆ ಸರ್ಕಾರದ ಆದೇಶಕ್ಕೆ ತಡೆ ನೀಡಿದ್ದ ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ತಡೆ ನೀಡಿದೆ.

ಬೋರ್ಡ್ ಪರೀಕ್ಷೆ ನಡೆಸುವ ಸುತ್ತೋಲೆ ರದ್ದುಪಡಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿತ್ತು. ನ್ಯಾಯಮೂರ್ತಿ ಜಿ. ನರೇಂದರ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ಅರ್ಜಿ ವಿಚಾರಣೆ ನಡೆಸಿತು. ಬುಧವಾರವೂ ವಿಚಾರಣೆ ಮುಂದುವರಿದ ಬಳಿಕ ನ್ಯಾಯಾಲಯ ಪರೀಕ್ಷೆಗೆ ಅನುಮತಿ ನೀಡಿದೆ.

ಬೋರ್ಡ್ ಪರೀಕ್ಷೆ ನಡೆಸಲು ಹಲವು ಷರತ್ತುಗಳು

  • ಮಾರ್ಚ್ 27 ರಿಂದ ಎರಡು ತರಗತಿಗಳಿಗೆ ಪರೀಕ್ಷೆ ನಡೆಸಬೇಕು
  • ಕೂಡಲೇ ಬೋರ್ಡ್ ಪರೀಕ್ಷಾ ವೇಳಾಪಟ್ಟಿಯನ್ನು ಸಿದ್ಧಪಡಿಸಿ
  • ಪಠ್ಯಕ್ರಮದಲ್ಲಿ ಉಲ್ಲೇಖಿಸಿರುವುದನ್ನು ಬಿಟ್ಟು ಬೇರೆ ಪ್ರಶ್ನೆಗಳನ್ನು ಕೇಳಬಾರದು
  • ಪರೀಕ್ಷೆಯಲ್ಲಿ ಯಾವ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸುವಂತಿಲ್ಲ
  • ಪರೀಕ್ಷೆಯ ಫಲಿತಾಂಶವನ್ನು ಸಾರ್ವಜನಿಕವಾಗಿ ಪ್ರಕಟಿಸುವಂತಿಲ್ಲ.

ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ 5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದ ಮೌಲ್ಯಮಾಪನಕ್ಕೆ ಬದಲಾಗಿ ರಾಜ್ಯ ಮಟ್ಟದ ಬೋರ್ಡ್ ಪರೀಕ್ಷೆ ನಡೆಸಲು ತೀರ್ಮಾನಿಸಿ ರಾಜ್ಯ ಸರ್ಕಾರವು 2022ರ ಡಿಸೆಂಬರ್ 12, 13 ಮತ್ತು 2023ರ ಜನವರಿ 4 ರಂದು ಸುತ್ತೋಲೆ ಹೊರಡಿಸಿತ್ತು. ಇದನ್ನು ವಿರೋಧಿಸಿ ಪೋಷಕರ ಸಂಘಟನೆ ಹೈಕೋರ್ಟ್ ಮೊರೆ ಹೋಗಿತ್ತು. ಪೋಷಕರ ಮನವಿಗೆ ಸಮ್ಮತಿಸಿದ್ದ ನ್ಯಾಯಾಲಯ ಸರ್ಕಾರದ ಆದೇಶಕ್ಕೆ ತಡೆ ನೀಡಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿದ್ದು, ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡುವಂತೆ ಮನವಿ ಮಾಡಿತ್ತು.

ಈ ಸಂಬಂಧ ಮಂಗಳವಾರ ವಿಚಾರಣೆ ನಡೆಸಿದ ಹೈಕೋರ್ಟ್ ಸುತ್ತೋಲೆ ರದ್ದುಪಡಿಸಿದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿ ವಿಚಾರಣೆ ಬುಧವಾರಕ್ಕೆ ಮುಂದೂಡಿತ್ತು. ಪ್ರಶ್ನೆ ಪತ್ರಿಕೆಯಲ್ಲಿ ಪಠ್ಯಕ್ರಮದಿಂದ ಹೊರತಾದ ಪ್ರಶ್ನೆಗಳಿರುವುದಿಲ್ಲ ಎಂಬ ಬಗ್ಗೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪ್ರಮಾಣ ಪತ್ರ ಸಲ್ಲಿಸಲು ಸೂಚನೆ ನೀಡಿತ್ತು. ಬುಧವರಾ ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ನಡೆಸಿ ಬೋರ್ಡ್ ಪರೀಕ್ಷೆ ನಡೆಸಲು ಷರತ್ತು ವಿಧಿಸಿ ಅನುಮತಿ ನೀಡಿದೆ.