Friday, November 22, 2024
ಸುದ್ದಿ

ಕಸ್ತೂರಿರಂಗನ್ ವರದಿ ಜಾರಿಗೆ 6 ತಿಂಗಳು ಅವಕಾಶ – ಕಹಳೆ ನ್ಯೂಸ್

ಕೊಚ್ಚಿ ಹಾಗೂ ಕೊಡಗಿನಲ್ಲಿ ಸಂಭವಿಸಿರುವ ಪ್ರಾಕೃತಿಕ ವಿಕೋಪಗಳು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಮೇಲೆಯೂ ಪರಿಣಾಮ ಬೀರಿದಂತಿದೆ.
ವಿಳಂಬಗೊಳ್ಳುತ್ತಿರುವ ಕಸ್ತೂರಿರಂಗನ್ ವರದಿ ಅನುಷ್ಠಾನ ಪ್ರಕ್ರಿಯೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ನ್ಯಾಯಾಧಿಕರಣ, ಇನ್ನು 6 ತಿಂಗಳೊಳಗೆ ಈ ವರದಿ ಜಾರಿ ಮಾಡುವಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಸೂಚನೆ ನೀಡಿದೆ. ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮಪ್ರದೇಶಗಳಲ್ಲಿ ಇನ್ನಷ್ಟು ಬದಲಾವಣೆ ಮಾಡುವುದು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಲಿರುವುದರಿಂದ ಅಂತಹ ಯಾವುದೇ ಪ್ರಕ್ರಿಯೆ ಕೈಗೊಳ್ಳಬಾರದು ಎಂದು ನಿರ್ದೇಶನ ನೀಡಿದೆ.


2017ರ ಫೆ.27ರಂದು ಕಸ್ತೂರಿರಂಗನ್ ವರದಿ ಅನ್ವಯ ಪರಿಸರ ಸಚಿವಾಲಯ ಎರಡನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿ ರಾಜ್ಯಗಳಿಂದ ಅಂತಿಮ ಶಿಫಾರಸು ಕೇಳಿತ್ತು. ಅಧಿಸೂಚನೆ ಅನ್ವಯ 56,825 ಚದರ ಕಿ.ಮೀ ಪರಿಸರ ಸೂಕ್ಷ್ಮ ವಲಯ ಘೋಷಿಸಲಾಗಿದೆ. ಇದರಲ್ಲಿ ಯಾವುದೇ ರಿಯಾಯಿತಿ ತೋರಿಸದೆ ಅಂತಿಮ ಅಧಿಸೂಚನೆ ಹೊರಡಿಸಬೇಕು ಎಂಬ ನಿರ್ದೇಶನವನ್ನು ಹಸಿರು ಪೀಠ ನೀಡಿದೆ. ಗೋವಾ ಫೌಂಡೇಶನ್ ಹಾಕಿದ್ದ ಅರ್ಜಿಯ ವಿಚಾರಣೆ ನಡೆಸಿದ ಪೀಠ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯಲ್, ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಇಳಿಕೆ ಮಾಡುವುದಾದರೆ ತಮ್ಮ ಗಮನಕ್ಕೆ ತರಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಳಂಬ ಬೇಡ:  ಕಸ್ತೂರಿರಂಗನ್ ವರದಿ ಅನುಷ್ಠಾನಕ್ಕೆ ಸಂಬಂಧಿಸಿ ತಮ್ಮ ನಿಲುವುಗಳನ್ನು ಕರ್ನಾಟಕ, ಗೋವಾ, ಗುಜರಾತ್ ಇನ್ನೂ ಸಲ್ಲಿಸದ ಕಾರಣ ಪರಿಸರ ಸಚಿವಾಲಯಕ್ಕೆ ಈ ಬಗ್ಗೆ ಖಚಿತ ನಿಲುವು ಪಡೆಯುವುದಕ್ಕೆ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ವಿಳಂಬವಾಗಿದೆ. ರಾಜ್ಯಗಳ ಈ ವಿಳಂಬ ಧೋರಣೆ ಪಶ್ಚಿಮಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ ಸಂರಕ್ಷಣೆಗೆ ಪೂರಕವಾಗದು. ಆದಷ್ಟೂ ಬೇಗನೆ ಅಂತಿಮ ಅಧಿಸೂಚನೆ ಹೊರಡಿಸಬೇಕು, 6 ತಿಂಗಳು ಕಾಲಾವಕಾಶ ಎಂದು ಎನ್‌ಜಿಟಿ ಹೇಳಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಸಾಧ್ಯವೇ ?:  ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ ಎಷ್ಟರ ಮಟ್ಟಿಗೆ ಅಧಿಕಾರ ಇದೆ ಎನ್ನುವುದು ಚರ್ಚಿತ ವಿಚಾರ. ಅದಕ್ಕೆ ಸಾಂವಿಧಾನಿಕ ಬಲ ಇಲ್ಲ ಎನ್ನುವ ವಾದವಿದ್ದರೆ, ಇನ್ನೊಂದೆಡೆ ತನಗೆ ಸಾಕಷ್ಟು ಅಧಿಕಾರ ಇದೆ, ಅದನ್ನು ಕಡೆಗಣಿಸುವಂತಿಲ್ಲ ಎಂಬ ತೀರ್ಪನ್ನು ಸ್ವತಃ ಎನ್‌ಜಿಟಿಯೇ ಕೆಲ ವರ್ಷಗಳ ಹಿಂದೆ ನೀಡಿದೆ. ಸದ್ಯ ಎನ್‌ಜಿಟಿ ನೀಡಿರುವ ನಿರ್ದೇಶನವನ್ನು ಎಷ್ಟು ಗಂಭೀರವಾಗಿ ಪರಿಗಣಿಸುತ್ತದೆ ಎನ್ನುವುದು ಸಂದೇಹಾಸ್ಪದ ವಿಚಾರ ಎನ್ನುತ್ತಾರೆ ತಜ್ಞರು. ಇನ್ನೊಂದೆಡೆ ಕೇರಳ ಹಾಗೂ ಕೊಡಗಿನಲ್ಲಿ ನಡೆದಿರುವ ಭೂಕುಸಿತ, ಪ್ರವಾಹ, ಅತಿವೃಷ್ಟಿಯಂತಹ ಪ್ರಾಕೃತಿಕ ವಿಕೋಪದ ನಿದರ್ಶನ ಕೇಂದ್ರ ಸರ್ಕಾರದ ಕಣ್ಣ ಮುಂದಿದೆ. ಹಾಗಾಗಿ ಕಸ್ತೂರಿರಂಗನ್ ವರದಿ ಜಾರಿ ಸಾಧ್ಯತೆಯೂ ಇಲ್ಲದಿಲ್ಲ ಎನ್ನುತ್ತಾರೆ ಪರಿಸರ ತಜ್ಞರು.

ಕಸ್ತೂರಿರಂಗನ್ ವರದಿ ಅಷ್ಟೇನೂ ಜನರಿಗೆ ತೊಂದರೆ ತರುವಂತಿಲ್ಲ, ಅದರ ಬಗ್ಗೆ ವಿನಾಕಾರಣ ಹುಯಿಲೆಬ್ಬಿಸಲಾಗಿದೆ. ಪ್ರೊ.ಗಾಡ್ಗೀಳ್ ವರದಿಯಿಲ್ಲದಿದ್ದರೂ ಕಸ್ತೂರಿರಂಗನ್ ವರದಿಯಾದರೂ ಅನುಷ್ಠಾನ ಮಾಡುವುದಾದರೆ ಇದು ಸಕಾಲ. ಇನ್ನು ಸ್ವಲ್ಪ ವರ್ಷ ಕಳೆದರೆ ಕೇರಳ ಹಾಗೂ ಕೊಡಗಿನ ವಿಕೋಪದ ನೆನಪು ಮಾಸಬಹುದು, ಆಗ ವರದಿ ಅನುಷ್ಠಾನ ಕಷ್ಟ.
                                                                – ನಿರೇನ್ ಜೈನ್, ಪರಿಸರ ತಜ್ಞ