ಅಭಿಮಾನಿಗಳ ದೇವರು, ದೊಡ್ಡನೆಯ ಕುಡಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ಹುಟ್ಟಿದ ದಿನವಿಂದು. ಇಹಲೋಕ ಸೇರಿದ ಪುನೀತ್ ರಾಜ್ಕುಮಾರ್ ಅವರ 48ನೇ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಪ್ರೀತಿಯಂದ ತಮ್ಮದೇ ಶೈಲಿಯಲ್ಲಿ ವಿಶ್ ಮಾಡ್ತಾ ಇದ್ದಾರೆ. ಹಲವು ಕಾರ್ಯಕ್ರಮಗಳನ್ನ ಆಯೋಜನೆ ಮಾಡಿದ್ದಾರೆ. ಇತ್ತ ತಮ್ಮನ ಹುಟ್ಟಿಹಬ್ಬಕ್ಕೆ ಶಿವ ರಾಜ್ಕುಮಾರ್ ಭಾವುಕರಾಗಿ ವಿಶ್ ಮಾಡಿದ್ದಾರೆ.
‘‘ನೀನು ಹುಟ್ಟಿದಾಗ ನಮ್ಮ ಮನೆಯಲ್ಲಿ ಉಲ್ಲಾಸ ಉಕ್ಕಿ ಹರಿಯುತ್ತಿತ್ತು. ನಿನ್ನ ಕಣ್ಣಲ್ಲಿದ್ದ ಹೊಳಪು ನೀನು ಪವರ್ ಸ್ಟಾರ್ ಆಗೋದನ್ನ ಅವಾಗ್ಲೇ ಹೇಳ್ತಾ ಇತ್ತು. ನೀನು ನಕ್ಕರೆ ಎಲ್ರು ನಗ್ತಾ ಇದ್ರು, ನೀನು ಕುಣಿದರೆ ಎಲ್ಲರೂ ರೋಮಾಂಚನದಿಂದ ನೋಡ್ತಾ ಇದ್ರು, ಮನೆಗೆ ಬಂದ ಅತಿಥಿ ನೆಂಟರುಗಳಿಗೆಲ್ಲ ನೀನೇ ಬೇಕು. ಅಂತಹ ಪುಟ್ಟ ಅಪ್ಪು ಮಿಂಚಿನಂತೆ ತೆರೆಯ ಮೇಲೆ ಬಂದು ಹೆಮ್ಮರವಾಗಿ ಕೋಟ್ಯಾಂತರ ಜನರಿಗೆ ನೆರಳಾಗಿದ್ದನ್ನು ಹತ್ತಿರದಿಂದ ನೋಡಿದ ನಾನೇ ಪುನೀತ‘‘.
‘‘ನಿನ್ನನ್ನು ಎತ್ತಿ ಆಡಿಸಿದ ಅಣ್ಣನಾಗಿ, ನಿನ್ನ ಜೊತೆ ಕೂಡಿ ಆಡಿದ ಸ್ನೇಹಿತನಾಗಿ, ನಿನ್ನ ಕೆಲಸಗಳನ್ನು ಮೆಚ್ಚಿ ಅಪ್ಪಿಕೊಂಡ ಕನ್ನಡಿಗನಾಗಿ, ಹಬ್ಬ ಯಾವ್ದೇ ಆಗಿದ್ರೂ ನಿನ್ನ ಹೆಸರಲ್ಲಿ ಪಟಾಕಿ ಹಚ್ಚೋ ಅಭಿಮಾನಿಗಳಲ್ಲಿ ಒಬ್ಬನಾಗಿ ಹೇಳ್ತಾ ಇದ್ದೀನಿ- ನೀನು ಹುಟ್ಟಿದ್ದೇ ಒಂದು ಉತ್ಸವ, ನೀನು ಬೆಳೆದಿದ್ದು ಇತಿಹಾಸ, ನೀನು ಜೀವನದ ಒಂದು ದಂತಕಥೆ, ನಿನ್ನ ನೆನಪುಗಳು ಎಂದಿಗೂ ಅಮರ! ಹುಟ್ಟು ಹಬ್ಬದ ಶುಭಾಶಯಗಳು ಅಪ್ಪು! ಎಂದು ಬರೆದುಕೊಂಡಿದ್ದಾರೆ.