ಬುದ್ಧಿಜೀವಿಗಳಿಂದ ಮೋದಿ ಹತ್ಯೆ ಸಂಚು ; ಬಂಧಿತ ಐವರ ಬಳಿ ದೊರೆತ ಸಾಕ್ಷಿಯಲ್ಲೇನಿದೆ? – ಕಹಳೆ Supper Exclusive ನ್ಯೂಸ್
ಮುಂಬೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಂಧಿತರಾಗಿರುವ ಐವರ ವಿರುದ್ಧ ಸ್ಪಷ್ಟ ಪುರಾವೆಗಳು ದೊರೆತಿವೆ ಎಂದು ವರದಿಯಾಗಿದೆ.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿಂದು ಮಾಹಿತಿ ನೀಡಿರುವ ಮಹಾರಾಷ್ಟ್ರ ಹೆಚ್ಚುವರಿ ಮಹಾ ನಿರ್ದೇಶಕ ಪರಂ ಬಿರ್ ಸಿಂಗ್, ಬಂಧಿತ ಐವರು ಹೋರಾಟಗಾರರು ನಿಷೇಧಿದ ನಕ್ಸಲ್ ಸಂಘಟನೆಗಳೊಂದಿಗೆ ನಂಟು ಹೊಂದಿರುವುದು ಸ್ಪಷ್ಟವಾದ ನಂತರವೇ ನಾವು ವಿವಿಧ ನಗರಗಳಲ್ಲಿ ದಾಳಿ ನಡೆಸಿ ಕ್ರಮ ತೆಗೆದುಕೊಂಡಿದ್ದೇವೆ ಎಂದಿದ್ದಾರೆ.
ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲೇ ಮೋದಿ ರಾಜ್ ಅಂತ್ಯಗೊಳಿಸುವ ವಿಚಾರ ರೋನಾ ವಿಲ್ಸನ್ ಹಾಗೂ ಸಿಪಿಐ ಮಾವೋ ನಾಯಕನ ನಡುವೆ ನಡೆದಿರುವುದು ಇ ಮೇಲ್ ಸಂಭಾಷಣೆಯಲ್ಲಿ ದೊರಕಿದೆ. ಅಲ್ಲದೇ, ಗ್ರೆನೇಡ್ ಲಾಂಚರ್ ಖರೀದಿಗಾಗಿ ಹಣವನ್ನೂ ಸಹ ಕೇಳಿರುವುದು ಉಲ್ಲೇಖವಾಗಿದೆ ಎಂದವರು ತಿಳಿಸಿದ್ದಾರೆ.
ಮೋದಿ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ನವದೆಹಲಿ, ಹೈದರಾಬಾದ್ ಸೇರಿದಂತೆ ದೇಶದ 10 ಹೋರಾಟಗಾರರ ಮನೆ ಮೇಲೆ ದಾಳಿ ನಡೆಸಿದ್ದ ಪುಣೆ ಪೊಲೀಸರು, ಕ್ರಾಂತಿಕಾರಿ ಬರಹಗಾರ ವರವರ ರಾವ್ ಸೇರಿದಂತೆ ಐವರು ಹೋರಾಟಗಾರರನ್ನು ಬಂಧಿಸಿತ್ತು. ಆನಂತರ ಸುಪ್ರೀಂ ಕೋರ್ಟ್ ಆದೇಶದಂತೆ ಅವರನ್ನೆಲ್ಲಾ ಗೃಹ ಬಂಧನದಲ್ಲಿ ಇರಿಸಲಾಗಿದೆ.
ಈ ಐವರ ಬಂಧನದ ಹಿನ್ನೆಲೆಯಲ್ಲಿ ದೇಶದಾದ್ಯಂತ ಮಾನವ ಹಕ್ಕು ಹೋರಾಟಗಾರರ ಬಂಧನವನ್ನು ಪ್ರತಿಪಕ್ಷಗಳು ಹಾಗೂ ಹೋರಾಟಗಾರರ ಸಹೋದ್ಯೋಗಿಗಳು ತೀವ್ರವಾಗಿ ಖಂಡಿಸಿದ್ದರು.
ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಪೊಲೀಸರು, ನಕ್ಸಲರು ದೊಡ್ಡ ಸಂಚು ರೂಪಿಸಿದ್ದು, ಅದಕ್ಕೆ ಬಂಧಿತ ಹೋರಾಟಗಾರರು ಸಹಾಯ ಮಾಡುತ್ತಿರುವುದು ನಮ್ಮ ತನಿಖೆಯಿಂದ ಬಹಿರಂಗವಾಗಿದೆ ಎಂದಿದ್ದಾರೆ.