ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ನಲ್ಲಿ ಖಲಿಸ್ತಾನಿ ಪ್ರತಿಭಟನಾಕಾರರು ಭಾರತೀಯ ಧ್ವಜವನ್ನು ಕೆಳಗಿಳಿಸಿದ್ದಾರೆ. ಇದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಬ್ರಿಟಿಷ್ ಸರ್ಕಾರದ “ಉದಾಸೀನತೆ”ಯೇ ಕಾರಣ ಎಂದು ಆರೋಪಿಸಿದೆ. ಈ ಸಂಬಂಧ ಕೇಂದ್ರ ಸರ್ಕಾರ, ಬ್ರಿಟಿಷ್ ಡೆಪ್ಯೂಟಿ ಹೈ ಕಮಿಷನರ್ ಕ್ರಿಸ್ಟಿನಾ ಸ್ಕಾಟ್ ಅವರನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಕರೆಸಿ ವಿಚಾರಣೆ ನಡೆಸಿದೆ.
ವಾರಿಸ್ ಪಂಜಾಬ್ ಡಿ ಗುಂಪಿನ ಮೇಲೆ ಪಂಜಾಬ್‌ನಲ್ಲಿ ಭದ್ರತಾ ಪಡೆಗಳ ದಮನದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿತ್ತು. ಈ ವೇಳೆ ಪ್ರತಿಭಟನಾಕಾರರು, ಖಲಿಸ್ತಾನಿ ಘೋಷಣೆಗಳನ್ನು ಕೂಗಿದ್ದಲ್ಲದೇ ಹೈಕಮಿಷನ್ ಕಚೇರಿ ಪ್ರವೇಶಕ್ಕೂ ಪ್ರಯತ್ನಿಸಿದರು ಅದು ಸಫಲವಾಗಲಿಲ್ಲ. ಬಳಿಕ ಒಬ್ಬ ಸಿಖ್ ವ್ಯಕ್ತಿ ರಸ್ತೆಯಿಂದ ನೇರವಾಗಿ ಭಾರತೀಯ ಹೈಕಮಿಷನ್ ಕಚೇರಿಯ ಬಾಲ್ಕನಿಗೆ ಏರಿದರು. ಭಾರತದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿದ್ದಾನೆ.
ಈ ವಿಚಾರವಾಗಿ ಕೇಮದ್ರ ಸರ್ಕಾರವು, ದೆಹಲಿಯಲ್ಲಿರುವ ಬ್ರಿಟಿಷ್ ಹೈಕಮಿಷನ್‌ನ ಉಪ ಮುಖ್ಯಸ್ಥರನ್ನು ಕರೆಸಿ ತನ್ನ ಕಠಿಣ ನಿಲುವಿನ ಬಗ್ಗೆ ಎಚ್ಚರಿಸಿದೆ. ದೆಹಲಿಯ ಹಿರಿಯ ಬ್ರಿಟಿಷ್ ರಾಜತಾಂತ್ರಿಕರನ್ನು ಕರೆಸಿಕೊಂಡು ಮಾತುಕತೆ ನಡೆಸಿದೆ.
ಧ್ವಜವನ್ನು ಕೆಳಗಿಳಿಸಿರುವ ಘಟನೆ ಕುರಿತು ದೆಹಲಿಯಲ್ಲಿರುವ ಹೈಕಮಿಷನ್‌ನ ಅಧಿಕಾರಿಯನ್ನು ಎಂಇಎಗೆ ಕರೆಸಲಾಗಿದೆ. ಪ್ರತಿಭಟನಾಕಾರರಿಗೆ ಹೈಕಮಿಷನ್ ಆವರಣ ಪ್ರವೇಶಿಸಲು ಅವಕಾಶ ಮಾಡಿಕೊಟ್ಟ ಭದ್ರತಾ ಲೋಪದ ಕುರಿತು ವಿವರಣೆ ಕೇಳಲಾಗಿದೆ. ಭಾರತೀಯ ರಾಜತಾಂತ್ರಿಕರ ಭದ್ರತೆಗೆ ಬ್ರಿಟಿಷ್ ಸರ್ಕಾರದ ಉದಾಸೀನತೆ ಸ್ವೀಕಾರಾರ್ಹವಲ್ಲ ಎಂದು ಭಾರತ ಅಸಮಧಾನ ಹೊರ ಹಾಕಿದೆ.