Friday, September 20, 2024
ಸುದ್ದಿ

ಬೆಳ್ತಂಗಡಿಯಲ್ಲಿ ಕೇಸರಿ ಧ್ವಜ ಸುಟ್ಟ ಪ್ರಕರಣ ; ಹಿಂದುಗಳ ಪರವಾಗಿ ಶಾಸಕನಾಗಿ ನಾನಿದ್ದೇನೆ ಶಾಸಕ ಹರೀಶ್ ಪೂಂಜ – ಕಹಳೆ ನ್ಯೂಸ್

ಬೆಳ್ತಂಗಡಿ, ಸೆ 6 : ಆಗಸ್ಟ್ 28 ರಂದು ಬೆಳ್ತಂಗಡಿ ಮಿನಿ ವಿಧಾನ ಸೌಧದ ಅವರಣದಲ್ಲಿ ದಲಿತ ಸಂಘರ್ಷ ಸಮಿತಿಯವರು ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಕೇಸರಿ ಧ್ವಜ ಸುಟ್ಟ ಪ್ರಕರಣವನ್ನು ಖಂಡಿಸಿ ಬೆಳ್ತಂಗಡಿಯಲ್ಲಿ, ಸೆ. 6 ರ ಗುರುವಾರ ಹಿಂದೂ ಜಾಗೃತಿ ಸಭೆ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭ ಮಾತನಾಡಿದ ಶಾಸಕ ಹರೀಶ್ ಪೂಂಜ, ಇಲ್ಲಿ ಕೆಲ ದಿನಗಳ ಹಿಂದೆ ನಡೆದ ಕೇಸರಿ ಧ್ವಜಕ್ಕೆ ಬೆಂಕಿ ಹಚ್ಚಿದ ಕಾರ್ಯ ಹಿಂದೆ ಕಾಂಗ್ರೇಸ್‌ ಇದೆ ಎಂಬುದು ಸಾಬೀತಾಗಿದೆ. ಅಷ್ಟೇ ಅಲ್ಲದೆ ಮಾಜಿ ಶಾಸಕರು, ಜಿ.ಪಂ.ಸದಸ್ಯರೂ ಇದರ ಹಿಂದೆ ಇರುವುದು ತಿಳಿದುಬಂದಿದೆ. ಲೋಕಸಭೆ ಹಾಗೂ ಪಟ್ಟಣ ಪಂಚಾಯತ್ ಚುನಾವಣೆಗಳು ಬರುತ್ತಿರುವ ಹಿನ್ನಲೆಯಲ್ಲಿ ಹಿಂದು ಭಾವನೆಗಳಿಗೆ ಧಕ್ಕೆ ತಂದು ತಮ್ಮ ಓಟಿನ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಈ ರೀತಿಯ ಕೆಲಸ ಇನ್ನು ಮುಂದೆ ನಡೆಯದು. ಹಿಂದುಗಳ ಪರವಾಗಿ ಶಾಸಕನಾಗಿ ಬೆಳ್ತಂಗಡಿಯಲ್ಲಿ ನಾನು ಇದ್ದೇನೆ ಎಂದು ಗುಡುಗಿದರು.

ಜಾಹೀರಾತು

ಕೆಲ ಹಿಂದೆ ಯಾರು ಇಲ್ಲಿ ಪ್ರತಿಭಟನೆ ಮಾಡಿದ್ದಾರೋ ಅಂಥವರು ಓಟು ಬಂದಾಗ ಕಾಂಗ್ರೇಸ್‌ನ ಹಿಂದೆ ಹೋಗಿದ್ದಾರೆ. ಅಂಥವರ ಅಗತ್ಯ ನಮಗಿಲ್ಲ. ಚುನಾವಣೆ ಬಂದಾಗ ಕಾಂಗ್ರೇಸ್, ಚಂದಾ ಕೇಳುವಾಗ ಹಿಂದುತ್ವ, ಕೇಸರಿ ನೆನಪಾಗುತ್ತದೆ. ನಾಚಿಕೆಯಾಗಬೇಕು ಅವರಿಗೆ. ದ.ಕ. ಜಿಲ್ಲೆಯ ಜನತೆಗೆ ಹಿಂದುತ್ವ ಕಲಿಸಲು ಯಾರೂ ಬರಬೇಕಾಗಿಲ್ಲ. ಕಾಂಗ್ರೇಸ್‌ನ್ನು ಬೆಂಬಲಿಸುವ ಹಿಂದುಗಳ ಅಗತ್ಯವೇ ನಮಗಿಲ್ಲ ಎಂದು ವಾಗ್ದಾಳಿ ನಡೆಸಿದರು

ಇದೇ ಸಂದರ್ಭ ಮಾತನಾಡಿದ, ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ| ಚಿ.ನಾ. ರಾಮು ಅಂಬೇಡ್ಕರ್ ಹೆಸರಲ್ಲಿ ರೋಲ್‌ಕಾಲ್‌ ಗೂಂಡಾಗಿರಿಯನ್ನು ಬೆಳೆಸುತ್ತಾ ಹಿಂದೂ ಸಮಾಜದಲ್ಲಿ ಅರಾಜಕತೆ, ಕಂದಕ ಸೃಷ್ಟಿಸುವುದನ್ನು ನಿಲ್ಲಿಸಿ ಎಂದು ಎಚ್ಚರಿಸಿದರು. ಅಖಂಡತೆಯ ಪರಿಕಲ್ಪನೆಯನ್ನು ನಾಶ ಮಾಡಿರುವ ಕಾಂಗ್ರೆಸ್ ಪಕ್ಷವು ಓಟ್ ಬ್ಯಾಂಕ್‌ ರಾಜಕಾರಣವನ್ನು ಈಗಲೂ ಮುಂದುವರಿಸುತ್ತಿರುವುದು ದುರಾದೃಷ್ಟಕರ. ದೇಶ ಮಾರಾಟವಾದರೂ ಸರಿ, ಜಾತಿಯ ಹೆಸರಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದಾರೆ.ಅಂಬೇಡ್ಕರ್ ಹೆಸರಲ್ಲಿ ಅಮಾಯಕ ಸಮಾಜವನ್ನುಎತ್ತಿಕಟ್ಟುವ ಕಾರ್ಯ ನಿರಂತರ ಮಾಡುತ್ತಾ ಬರುತ್ತಿದ್ದಾರೆ. ಸಂವಿಧಾನವನ್ನು ಆರ್‌ಎಸ್‌ಎಸ್‌ನವರು ಸುಟ್ಟರು ಎಂದು ಅಪಪ್ರಚಾರ ಮಾಡುತ್ತಾ ದಾರಿ ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೀಸಲಾತಿ ಎಂಬುದು ನಿರಂತರವಲ್ಲಾ ಎಂಬುದನ್ನುಅಂಬೇಡ್ಕರ್‌ ಸ್ಪಷ್ಟವಾಗಿ ಹೇಳಿದ್ದರು. ಮೀಸಲಾತಿಯನ್ನು ದುರುಪಯೋಗಪಡಿಸಿಕೊಂಡು ಶ್ರೀಮಂತರಾದ ವರ್ಗವೊಂದು ನಿರ್ಮಾಣವಾಗಿದೆ. ಅವರು ಮುಂದೆ ಮೀಸಲಾತಿ ಬಿಟ್ಟುಕೊಡಬೇಕು. ವಾಸ್ತವಿಕವಾಗ ಮೀಸಲಾತಿ ಶೋಷಿತರನ್ನು ಇನ್ನೂ ಅಸಹಾಯಕರನ್ನಾಗಿ ಮಾಡುತ್ತಿದೆ. ಮೀಸಲಾತಿ ಎಂದರೆ ಹಂಚಿಕೊಂಡು ಬಾಳವುದು ಎಂಬುದು ಅಂಬೇಡ್ಕರ್‌ ಅವರ ಆಶಯವಾಗಿತ್ತು, ಆರ್ಥಿಕ ಸಾಮಾಜಿಕ ಮೀಸಲಾತಿ ಆಗಬೇಕು. ಬಲಿತ ದಲಿತರೇ ಬಡದಲಿತರನ್ನು ತುಳಿಯುತ್ತಿರುವುದು ವಿಪರ್ಯಾಸ. ಸಂವಿಧಾನ, ಭಗವದ್ಗೀತೆ, ಭಗವಾಧ್ವಜ ಗೌರವಕ್ಕೆಅರ್ಹವಾದ ವಿಚಾರಗಳಾಗಿವೆ. ದಲಿತೋದ್ದಾರದ ಗುತ್ತಿಗೆ ತೆಗೆದುಕೊಂಡ ಕೆಲ ದಲಿತ ಹೋರಾಟಗಾರರು ಬಡದಲಿತರನ್ನು ಬಲಿಕೊಡುತ್ತಿದ್ದಾರೆ. ಅವರನ್ನು ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ಆಗಬೇಕು ಎಂದು ವಿಶ್ಲೇಷಿಸಿದರು.

ಕಳೆದ ನಾಲ್ಕೂವರೆ ವರ್ಷಗಳಿಂದ ಮೋದಿ ಸರಕಾರ ಅಸಮಾನತೆಯನ್ನು ಹೋಗಲಾಡಿಸಲು ಶ್ರಮ ವಹಿಸಿದೆ. ಮುಸಲ್ಮಾನ ಹೆಣ್ಣು ಮಕ್ಕಳಿಗೆ ನ್ಯಾಯಕೊಡಿಸುವ ಕಾರ್ಯ ಬಿಜೆಪಿ ಮಾಡಿದೆ. ಭಾರತಕ್ಕಾಗಿ ಮುಸ್ಲಿಂರೂ ತ್ಯಾಗ ಮಾಡಿದ್ದಾರೆ. ಅವರ ಮಧ್ಯೆ ಮೀರ್‌ಸಾದಿಕ್‌ನಂತ ದ್ರೋಹಿಗಳೂ ಇರುವುದು ದುರಂತ ಎಂದು ವಿಷಾದಿಸಿದರು.ಬಿಜೆಪಿ ಮುಖಂಡ ಫಟಾಪಟ್ ಶ್ರೀನಿವಾಸ್‌ ಅವರು, ಕಾಂಗ್ರೇಸ್‌ ಇತಿಹಾಸದಲ್ಲಿ ಅಂಬೇಡ್ಕರ್‌ಗೆ ಅನೇಕ ಬಾರಿ ಅನ್ಯಾಯ ಮಾಡಿದೆ. ಅದೇ ರೀತಿ ಕಾಂಗ್ರೇಸ್‌ ಇಂದೂ ಕೂಡ ದಲಿತರನ್ನು ಬಳಸಿ ಬಿಸಾಕುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ ಎಂದರು.

ಈ ಸಂದರ್ಭ ಬಜರಂಗದಳ ಮುಖಂಡ ಮುರಳಿಕೃಷ್ಣ ಹಸಂತ್ತಡ್ಕ, ವಿ.ಹಿಂ.ಪ. ಜಿಲ್ಲಾಧ್ಯಕ್ಷ ಡಾ| ಕೃಷ್ಣ ಪ್ರಸನ್ನ, ಜಿಲ್ಲಾ ಉಪಾಧ್ಯಕ್ಷ ಭಾಸ್ಕರ ಧರ್ಮಸ್ಥಳ ಉಪಸ್ಥಿತರಿದ್ದರು. ವಿ.ಹಿಂ.ಪದ ಬೆಳ್ತಂಗಡಿ ಪ್ರಖಂಡ ಅಧ್ಯಕ್ಷ ಸುಬ್ರಹ್ಮಣಕುಮಾರ್‌ ಅಗರ್ತ ಸ್ವಾಗತಿಸಿ, ಪ್ರಸ್ತಾವಿಸಿದರು. ಕಾರ್ಯದರ್ಶಿ ನವೀನ್ ನೆರಿಯ ಕಾರ್ಯಕ್ರಮ ನಿರ್ವಹಿಸಿದರು. ವೇಣೂರು ಪ್ರಖಂಡ ಅಧ್ಯಕ್ಷ ಶಶಾಂಕ ಭಟ್ ಮನವಿ ವಾಚಿಸಿದರು. ಬಳಿಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.