Monday, January 20, 2025
ದಕ್ಷಿಣ ಕನ್ನಡರಾಜಕೀಯರಾಜ್ಯಸುದ್ದಿಸುಳ್ಯ

Special Report | ಸತತ 6 ಬಾರಿ ವಿಧಾನಸಭೆ ಪ್ರವೇಶಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಬಿಜೆಪಿ ಶಾಸಕ ಸುಳ್ಯದ ಎಸ್ ಅಂಗಾರ – ಕಹಳೆ ನ್ಯೂಸ್

ಮಂಗಳೂರು: ಸೋಲಿಲ್ಲದ ಸರದಾರ, ಸುಳ್ಯದ ಬಂಗಾರ ಎಂದೇ ಪ್ರಸಿದ್ಧಿ ಪಡೆದಿರುವವರು ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಸುಳ್ಯ (Sulya) ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಅಂಗಾರ. ಸತತ 6 ಬಾರಿ ವಿಧಾನಸಭೆ ಪ್ರವೇಶಿಸಿದ ದ.ಕ. ಜಿಲ್ಲೆಯ ಏಕೈಕ ಬಿಜೆಪಿ ಶಾಸಕ (BJP MLA) ಎಂಬ ಹೆಗ್ಗಳಿಕೆ ಪಡೆದುಕೊಂಡಿರುವವರು ಕೂಡ ಇವರೇ. ಈ ಸಲ ಹಿರಿತನದ ನೆಲೆಯಲ್ಲಿ, ಪಕ್ಷ ನಿಷ್ಠ ಮತ್ತು ಆರ್‌ಎಸ್‌ಎಸ್ ಹಿನ್ನೆಲೆ ಇರುವ ನಿಟ್ಟಿನಲ್ಲಿ ಸಚಿವ ಸ್ಥಾನ ನೀಡಲಾಗಿದೆ. ಈ ಮೂಲಕ ಸುಳ್ಯ ಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿಗೆ ಸಚಿವ ಪಟ್ಟ ಅಲಂಕರಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹೇಳಿ ಕೇಳಿ ಸುಳ್ಯ ಬಿಜೆಪಿಯ ಭದ್ರಕೋಟೆ. ಬಹುಜನ ಸಮಾಜವೇ ಹೆಚ್ಚಿರುವ ಸುಳ್ಯ ಮೊದಲ ವಿಧಾನಸಭಾ ಚುನಾವಣೆಯಿಂದಲೂ ರಾಜ್ಯದ ಏಕೈಕ ದಲಿತ ಮೀಸಲು ಕ್ಷೇತ್ರ. ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಹಲವು ಬಾರಿಯಾದರೂ ಸುಳ್ಯದ ಮೀಸಲಾತಿ ಮಾತ್ರ ಬದಲಾಗಿಲ್ಲ. 1972ರಿಂದ ಇಲ್ಲಿ ಪರಿಶಿಷ್ಟ ಜಾತಿಯವರಿಗೆ ಮಾತ್ರ ಸ್ಪರ್ಧೆಗೆ ಅವಕಾಶ ಇದೆ. 1994ರಿಂದ ಸುಳ್ಯ ಕ್ಷೇತ್ರವನ್ನು ಆಳುತ್ತಿರುವ ಬಿಜೆಪಿ ಪಕ್ಷಕ್ಕೆ ಎಸ್ ಅಂಗಾರ (S Angara) ಒಬ್ಬರೇ ನಾಯಕ. 1994, 1999, 2004, 2008, 2013, 2018 ಹೀಗೆ ಸತತ 6 ಚುನಾವಣೆಗಳಲ್ಲಿ ಬಿಜೆಪಿಯ ಸಚಿವ ಅಂಗಾರ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇನ್ನು 2013ರಲ್ಲಿ ದಕ್ಷಿಣ ಕನ್ನಡದ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಸೋತಾಗ ಗೆದ್ದ ಏಕೈಕ ವ್ಯಕ್ತಿ ಎಂದರೆ ಅದು ಅಂಗಾರ. ಜಿಲ್ಲೆಯಲ್ಲಿ ಬಿಜೆಪಿಯ ಮಾನ ಉಳಿಸಿದ್ದು ಕೂಡ ಇವರೇ. ಅದಕ್ಕೆ ಅಂಗಾರ ಯಾವತ್ತೂ ಸುಳ್ಯದ ಬಂಗಾರ ಎಂಬ ಮಾತಿದೆ.

ಸುಳ್ಯ ತಾಲೂಕು ನೆಲ್ಲೂರು ಕೆಮ್ರಾಜೆ ಗ್ರಾಮದ ದಾಸನಕಜೆ ಚನಿಯ ಮತ್ತು ಹುಕ್ರು ಅವರ ಮಗನಾಗಿ ಜುಲೈ 1, 1964 ರಲ್ಲಿ ಜನಿಸಿದ ಅಂಗಾರ ಅವರು ಕಡುಬಡತನದಲ್ಲಿ ಬಾಲ್ಯವನ್ನು ಕಳೆದರು. ಹೀಗಾಗಿ ಪ್ರೌಢಶಾಲೆಯವರೆಗೆ ಶಿಕ್ಷಣ ಪಡೆಯಲಷ್ಟೇ ಸಾಧ್ಯವಾಯ್ತು. ಶಾಲಾ ದಿನಗಳಲ್ಲೇ ನಾಯಕತ್ವದ ಗುಣ ಹೊಂದಿದ್ದ ಅಂಗಾರ ಅವರು ಓದಿನ ಜತೆಗೆ ಕೂಲಿ ಕೆಲಸವನ್ನು ಕೂಡ ಮಾಡುತ್ತಿದ್ದರು. ಅದರ ಜತೆಗೆ ಹೋರಾಟದ ಮನೋಭಾವ, ಪ್ರಾಮಾಣಿಕತೆ ಕೂಡ ಅವರಲ್ಲಿ ಇತ್ತು.

ಬಡತನ, ಕೂಲಿ ಕೆಲಸ ವಿದ್ಯಾಭ್ಯಾಸದ ನಡುವೆ ಅಂಗಾರರಿಗೆ ಸಮಾಜ ಸೇವೆ ಮಾಡುವ ತುಡಿತ ಇತ್ತು. ಆ ತುಡಿತವೇ ಮುಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಸೇರಲು ಪ್ರೇರಣೆಯಾಯ್ತು. ಇವರಲ್ಲಿದ್ದ ಕ್ರಿಯಾಶೀಲತೆಯನ್ನು ಗುರುತಿಸಿ ತಳೂರು ಚಂದ್ರಶೇಖರ ಸೂಕ್ತ ಪ್ರೋತ್ಸಾಹ ನೀಡಿದರು. ಸಂಘದ ಎಲ್ಲಾ ಶಿಸ್ತು,ಸಂಯಮವನ್ನು ಅಳವಡಿಸಿಕೊಂಡ ಅಂಗಾರ ರಾಜಕೀಯ ಕ್ಷೇತ್ರಕ್ಕೆ ಕಾಲಿಡಲು ಹೆಚ್ಚು ಒತ್ತು ನೀಡಿದವರು ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ. ಆರ್‌ಎಸ್‌ಎಸ್ ಕಾರ್ಯಕರ್ತರಾಗಿದ್ದ ಅಂಗಾರ ಅವರು 1979ರಲ್ಲಿ ಬಿಜೆಪಿ ಕಾರ್ಯಕರ್ತರಾಗಿ ನಿಯೋಜನೆಯಾದರು. ಬಳಿಕ ತಾಲೂಕು ಕಾರ್ಯದರ್ಶಿಯಾಗಿ, ಜಿಲ್ಲಾ ಮತ್ತು ರಾಜ್ಯ ಸಮಿತಿಯ ಸದಸ್ಯರಾಗಿಯೂ ಕರ್ತವ್ಯ ನಿರ್ವಹಿಸಿದರು. ಅಂಗಾರ ಬಿಜೆಪಿಯಲ್ಲಿ ಸಕ್ರೀಯ ಸದಸ್ಯರಾಗಿ, ನಿಷ್ಠಾವಂತರಾಗಿ ಇರುವುದನ್ನು ಗುರುತಿಸಿದ ಹಿರಿಯರು 1989ರಲ್ಲಿ ಚುನಾವಣಾ ಕಣಕ್ಕಿಳಿಸಿದರು. ಪ್ರಪ್ರಥಮ ಬಾರಿ ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದ ಅಂಗಾರ ಕಾಂಗ್ರೆಸ್ ಅಭ್ಯರ್ಥಿ ಕೆ ಕುಶಲ ಅವರ ಎದುರು ಅಲ್ಪ ಮತಗಳಿಂದ ಸೋಲು ಕಂಡರು.

1989ರ ಚುನಾವಣೆಯ ಸೋಲನ್ನೇ ಸೋಪಾನ ಎಂದೆನಿಸಿಕೊಂಡ ಅಂಗಾರ ಮತ್ತೆ 1994ರ ವಿಧಾನಸಭೆ ಚುನಾವಣೆಯಲ್ಲಿ ಅದೇ ಕಾಂಗ್ರೆಸ್ ಅಭ್ಯರ್ಥಿ ಕುಶಲ ಅವರ ಎದುರು ಸ್ಪರ್ಧಿಸಿ ಗೆಲುವು ಕಂಡರು. ಈ ಮೂಲಕ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಅಂದಿನಿಂದ ಇಂದಿನವರೆಗೆ ಗೆಲ್ಲುತ್ತಲೇ ಬಂದಿರುವ ಅಂಗಾರ ಸೋಲಿಲ್ಲದ ಸರದಾರ ಮಾತ್ರವಲ್ಲ ಸುಳ್ಯದ ಬಂಗಾರ ಎನಿಸಿಕೊಂಡರು.

ರಾಜಕೀಯ ಜೀವನ, ಸಮಾಜ ಸೇವೆಯ ನಡುವೆಯೇ 1997 ರ ಜೂನ್ 11 ರಂದು ಉಡುಪಿಯ ಕೋಟೆ ಗ್ರಾಮದ ವೇದಾವತಿ ಎಂಬವರನ್ನು ವರಿಸಿದರು. ದಂಪತಿಗೆ ಪೂಜಾಶ್ರಿ ಮತ್ತು ಗೌತಮ್ ಎಂಬ ಮಕ್ಕಳಿದ್ದಾರೆ. ಸಿಗುವ ಸ್ವಲ್ಪ ಸಮಯವನ್ನು ಕುಟುಂಬದ ಜತೆ ಕಳೆಯುತ್ತಾರೆ.

ಉನ್ನತ ಸ್ಥಾನದಲ್ಲಿ ಇದ್ದರೂ ಇಂದಿಗೂ ಮನೆಯ ಕೃಷಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಮಾನ್ಯ ರೈತನಂತೆ ಬದುಕುತ್ತಿರುವ ಅಂಗಾರರದ್ದು ಸರಳ ಜೀವನ, ವಿಧಾನಸೌಧಕ್ಕೆ ಕೆಲವೊಮ್ಮೆ ಬಸ್‌ನಲ್ಲೇ ಹೋಗಿ ಬರುತ್ತಾರೆ. ಶಾಸಕರ ಭವನದಲ್ಲಿ ತಾವೇ ಅಡುಗೆ ಮಾಡಿ ಊಟ ಮಾಡುತ್ತಾರೆ. ಇದು ಅವರ ಸಜ್ಜನಿಕೆ ಮತ್ತು ಸರಳತೆ. 

ಅಂಗಾರದ್ದು ಮಾತು ಕಡಿಮೆ ಕೆಲಸ ಜಾಸ್ತಿ. ಸುಳ್ಯ ವಿಧಾನಸಭಾ ಕ್ಷೇತ್ರವು ಬಹುತೇಕ ಕಾಡು, ನದಿ ಬೆಟ್ಟಗಳಿಂದ ಕೂಡಿದ ಹಳ್ಳಿಗಾಡು ಪ್ರದೇಶ. ತೀರಾ ಹಿಂದುಳಿದಿದ್ದ ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದು ಸುಲಭದ ಮಾತಾಗಿರಲಿಲ್ಲ. ಅಂಗಾರ ಶಾಸಕರಾದ ಬಳಿಕ ಸುಳ್ಯವು ಬಹಳಷ್ಟು ಅಭಿವೃದ್ಧಿ ಕಂಡಿದೆ. ಪ್ರಾರಂಭದಲ್ಲಿ ಅಭಿವೃದ್ಧಿ ಮಂದಗತಿಯಲ್ಲಿ ಇದ್ದರೂ ಬಳಿಕ ಶಿಕ್ಷಣ, ಸಾಂಸ್ಕೃತಿಕ ಮಾತ್ರವಲ್ಲ ವ್ಯಾಪಾರ, ವಾಣಿಜ್ಯ, ರಸ್ತೆಗಳು ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣುತ್ತಿದೆ.

ಸತತ 6 ಬಾರಿ ವಿಧಾನಸಭೆ ಪ್ರವೇಶಿಸಿದ ದ.ಕ. ಜಿಲ್ಲೆಯ ಏಕೈಕ ಬಿಜೆಪಿ ಶಾಸಕ ಎನಿಸಿಕೊಂಡಿರುವ ಅಂಗಾರ ಅವರು ಈ ಹಿಂದೆ 2006ರಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ ಇದ್ದಾಗ 2008ರಲ್ಲಿ ಬಿಎಸ್‌ವೈ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಸಚಿವ ಸ್ಥಾನದ ಆಕಾಂಕ್ಷಿಯಾಗಿರಲಿಲ್ಲ ಆದರೆ ಸಂಭಾವ್ಯರ ಪಟ್ಟಿಯಲ್ಲಿ ಇವರ ಹೆಸರಿತ್ತು. 2011ರಲ್ಲಿ ಡಿವಿ ಸದಾನಂದ ಗೌಡ ರಾಜ್ಯದ ಮುಖ್ಯಮಂತ್ರಿಯಾದಾಗ ಅಂಗಾರ ಅವರಿಗೆ ಮಂತ್ರಿ ಸ್ಥಾನ ಸಿಕ್ಕೇ ಸಿಗುತ್ತೆ ಎಂದು ಸುಳ್ಯದ ಜನ ಭಾವಿಸಿದ್ದರು. ಏಕೆಂದರೆ ಡಿವಿ ಸದಾನಂದ ಗೌಡ ಅವರು ಸುಳ್ಯದವರು. ಎರಡು ಬಾರಿ ವಿಧಾಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಂಗಾರ ಅವರಿಗೆ ಮತ ಹಾಕಿದವರು. 

1957ರಲ್ಲಿ ವಿಧಾನಸಭೆ ಚುನಾವಣೆ ಶುರುವಾದಾಗ ಸುಳ್ಯ ವಿಧಾನಸಭೆ ಕ್ಷೇತ್ರ ಎಂದು ಪ್ರತ್ಯೇಕ ಕ್ಷೇತ್ರ ಇರಲಿಲ್ಲ. ಆಗ ಪುತ್ತೂರು ವಿಧಾನಸಭೆ ಕ್ಷೇತ್ರದೊಂದಿಗೆ ದ್ವಿಸದಸ್ಯ ಕ್ಷೇತ್ರವಾಗಿ ಸುಳ್ಯ ಇತ್ತು. 1962ರಲ್ಲಿ ಪುತ್ತೂರು ವಿಧಾನಸಭೆ ಕ್ಷೇತ್ರದ ದ್ವಿಸದಸ್ಯತ್ವ ರದ್ದಾದಾಗ ಸುಳ್ಯ ವಿಧಾನಸಭೆ ಕ್ಷೇತ್ರವನ್ನು ಹುಟ್ಟುಹಾಕಲಾಯ್ತು, ಮಾತ್ರವಲ್ಲ ಸುಳ್ಯವನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲು ಕ್ಷೇತ್ರವನ್ನಾಗಿ ಚುನಾವಣೆ ಆಯೋಗ ಘೋಷಣೆ ಮಾಡಿತ್ತು. ಅಂದಿನಿಂದ ಇಂದಿನವರೆಗೂ ಸುಳ್ಯ ಮೀಸಲು ಕ್ಷೇತ್ರವಾಗಿಯೇ ಉಳಿದಿದೆ.