Recent Posts

Sunday, January 19, 2025
ಸುದ್ದಿ

ಕರಾವಳಿ ಕ್ರೈಸ್ತರ ವಿಶೇಷ ಹಬ್ಬ ‘ಮೊಂತಿ ಫೆಸ್ತ್’: ಏನೆಲ್ಲಾ ವಿಶೇಷತೆಗಳಿವೆ ಗೊತ್ತಾ? – ಕಹಳೆ ನ್ಯೂಸ್

ಮಂಗಳೂರು, ಸೆಪ್ಟೆಂಬರ್. 08: ಕರಾವಳಿ ಕರ್ನಾಟಕದ ಕೊಂಕಣಿ ಕೆಥೋಲಿಕ್ ಕ್ರೈಸ್ತ ಬಾಂಧವರಿಗೆ ಸೆಪ್ಟೆಂಬರ್.8 ವಿಶೇಷ ದಿನ. ಅತ್ಯಂತ ಶ್ರದ್ಧೆಯ ಹಬ್ಬವಾದ ತೆನೆ ಹಬ್ಬ ಅಥವಾ ಯೇಸು ಕ್ರಿಸ್ತರ ತಾಯಿ ಮೇರಿ ಅವರ ಜನ್ಮದಿನ . ಈ ದಿನವನ್ನು ಕರಾವಳಿಯ ಜಿಲ್ಲೆಗಳಲ್ಲಿ ಕ್ರೈಸ್ತ ಬಾಂಧವರು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಲಾಗುತ್ತದೆ. ಈ ಹಬ್ಬ ಹೆಚ್ಚಾಗಿ ಸೆಪ್ಟೆಂಬರ್ ತಿಂಗಳಲ್ಲಿ ಬರುತ್ತದೆ. ಅಷ್ಟೇ ಅಲ್ಲ ಇಂತಹ ಸಮಯದಲ್ಲಿ ಪ್ರಕೃತಿಯು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ಬೆಳೆಗಳು ಹುಲುಸಾಗಿ ಬೆಳೆದು, ನಳನಳಿಸಿ ಕೊಯ್ಲಿಗೆ ಸಿದ್ಧವಾಗಿರುತ್ತದೆ. ಪ್ರಕೃತಿಯ ಈ ಕೊಡುಗೆಗಾಗಿ ಕೃತಜ್ಞತೆ ಸಲ್ಲಿಸುವ ವಿವಿಧ ಆಚರಣೆಗಳು ಕರಾವಳಿಯಲ್ಲಿ ನಡೆಯುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದರ ಭಾಗವಾಗಿಯೇ ಕ್ರೈಸ್ತರು ಮೊಂತಿ ಫೆಸ್ತ್ ಅಥವಾ ತೆನೆಹಬ್ಬ ಆಚರಿಸುತ್ತಾರೆ. ಕರಾವಳಿಯ ಕ್ರೈಸ್ತರು ಹೆಚ್ಚಿನವರು ಕೃಷಿಯನ್ನೇ ಜೀವನಾಧರವಾಗಿ ನಂಬಿದವರು. ಶ್ರಮಜೀವಿಗಳು. ಪ್ರಕೃತಿಯಿಂದ ಪಡೆದ ಕೊಡುಗೆಗೆ ಕೃತಜ್ಞತೆಯೊಂದಿಗೆ ಪೂಜೆ ಸಲ್ಲಿಸುವ ಪದ್ಧತಿ ತಲತಲಾಂತರಗಳಿಂದ ಇಲ್ಲಿ ನಡೆದು ಬಂದಿದೆ. ಯೇಸು ಕ್ರಿಸ್ತರ ತಾಯಿ ಮೇರಿ ಮಾತೆಯ ಜನ್ಮ ದಿನ ಸೆಪ್ಟಂಬರ್ 8 ಆಗಿದ್ದು, ಮೇರಿ ಮಾತೆ ದೇವ ಮಾತೆಯಾಗಿದ್ದು, ಪವಾಡಗಳನ್ನು ಸೃಷ್ಟಿಸುತ್ತಾರೆ ಮತ್ತು ಭಕ್ತಾಧಿಗಳ ಬೇಡಿಕೆಗಳನ್ನು ಈಡೇರಿಸುತ್ತಾರೆ ಎನ್ನುವುದು ಕೆಥೋಲಿಕರ ನಂಬಿಕೆ. ದೇವ ಮಾತೆಯ ಜನ್ಮ ದಿನ ಎಂಬ ಹಿನ್ನೆಲೆಯಲ್ಲಿ ಈ ತೆನೆ ಹಬ್ಬಕ್ಕೆ ಧಾರ್ಮಿಕ ಲೇಪ ಕೊಡಲಾಗಿದೆ. ಇನ್ನು ಬೆಳೆ ಹಬ್ಬ ಆಗಿರುವುದರಿಂದ ಇದು ಸಾಂಸ್ಕತಿಕ ಆಚರಣೆಯೂ ಆಗಿದೆ. ಹೀಗೆ ಮೇರಿ ಮಾತೆಯ ಜನ್ಮ ದಿನಾಚರಣೆಯ ಜತೆಗೆ ಬೆಳೆ ಹಬ್ಬವನ್ನೂ ಥಳಕು ಹಾಕಿಕೊಂಡು ಮೊಂತಿ ಫೆಸ್ತ್ ಆಚರಿಸಲಾಗುತದೆ. ಚಿತ್ರಗಳು : ಕೊಡಗಿನಲ್ಲಿ ಸರಳವಾಗಿ ಕೈಲ್ ಮೂರ್ತ ಹಬ್ಬ ಆಚರಣೆ ಇನ್ನು ಮೊಂತಿ ಫೆಸ್ಟ್ ಹೇಗೆ ಆರಂಭವಾಯಿತು ? ಯಾರು ಆರಂಭಿಸಿದರು ? ಯಾವಾಗ? ಹೇಗಾಯಿತು ಎನ್ನುವ ಕುರಿತು ನಿರ್ಧಿಷ್ಟವಾಗಿ ತಿಳಿಸುವ ದಾಖಲೆಗಳು ಲಭ್ಯವಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಬ್ಬದ ಪ್ರತೀತಿ ಇದರ ಹುಟ್ಟು ಮತ್ತು ಹಿನ್ನಲೆಯ ಬಗ್ಗೆ ಬೇರೆ ಬೇರೆ ಉಲ್ಲೇಖಗಳು ಕಂಡು ಬರುತ್ತವೆ. ಮಂಗಳೂರು ಹೊರ ಹೊಲಯದ ಬಂಟ್ವಾಳ ತಾಲೂಕಿನ ಫರಂಗಿಪೇಟೆಯಲ್ಲಿ 250 ವರ್ಷಗಳ ಹಿಂದೆ ಮೊಂತಿ ಫೆಸ್ತ್ ಆಚರಣೆ ಆರಂಭವಾಯಿತು ಎನ್ನುವುದು ಒಂದು ಉಲ್ಲೇಖ. ಸಂತ ಫ್ರಾನ್ಸಿಸ್ ಅಸಿಸಿ ಅವರಿಗೆ ಸಮರ್ಪಿಸಿದ ಮಠವೊಂದು ಇಲ್ಲಿ ಸ್ಥಾಪನೆಯಾಯಿತು. ನೇತ್ರಾವತಿ ನದಿಯ ಉತ್ತರ ದಿಕ್ಕಿನಲ್ಲಿ ಬೆಟ್ಟದ ಮೇಲಿರುವ ಈ ಪುರಾತನ ಸ್ಥಳಕ್ಕೆ ಮೊಂತೆ ಮರಿಯಾನೊ ಅಥವಾ ಮೌಂಟ್ ಅಫ್ ಮೇರಿ ಎಂದು ಹೆಸರಿಸಲಾಗಿತ್ತು. ಗೋವಾದಿಂದ ಬಂದ ಕಥೋಲಿಕ್ ಧರ್ಮಗುರು ಫಾದರ್ ಜೋಕಿಂ ಮಿರಾಂದಾ ಅವರು ಸ್ಥಳೀಯ ಚರ್ಚ್ ನ ವಾರ್ಷಿಕ ಹಬ್ಬದ ಜತೆಗೆ ಮೇರಿ ಮಾತೆಯ ಜನ್ಮ ದಿನವನ್ನು ಪ್ರಥಮ ಬಾರಿಗೆ ಆಚರಿಸಿದರು ಎನ್ನುವುದು ಪ್ರತೀತಿ.

ಮೊಂತೆ ಪದದಿಂದ ಮೊಂತಿ ಬಂತು. ವರ್ಷ ಕಳೆದಂತೆ ಈ ಆಚರಣೆ ಮಂದುವರಿಯುತ್ತಾ ಕ್ರಮೇಣ ಮೊಂತಿ ಫೆಸ್ತ್ ಆಯಿತು ಎನ್ನುವುದು ಹಿರಿಯರ ಅಭಿಪ್ರಾಯ. ಇನ್ನೊಂದು ಅಭಿಪ್ರಾಯದ ಪ್ರಕಾರ ಹಿಂದೂಗಳು ಚೌತಿ ಹಬ್ಬ ಆಚರಣೆಯ ಸಂದರ್ಭದಲ್ಲಿ ಪ್ರಕೃತಿ ಮತ್ತ ಹೊಸ ಬೆಳೆಗೆ ಆದ್ಯತೆ ನೀಡುತ್ತಿದ್ದು, ಇದರ ಸ್ಫೂರ್ತಿ ಪಡೆದು ಕರಾವಳಿಯ ಕೆಥೋಲಿಕ್ ಕ್ರೈಸ್ತ ಪೂರ್ವಜರು ಸೆಪ್ಟಂಬರ್ 8 ರಂದು ಮೇರಿ ಮಾತೆಯ ಜನ್ಮ ದಿನದಂದೆದೇ ತೆನೆ ಹಬ್ಬವನ್ನು ಆಚರಿಸಲು ಆರಂಭಿಸಿದರು ಎನ್ನಲಾಗಿದೆ. ಕರಾವಳಿಯ ಕೆಥೋಲಿಕರು ಎಲ್ಲಿಯೇ ವಾಸಿಸುತ್ತಿದ್ದರೂ, ಅಲ್ಲೆಲ್ಲಾ ಈ ತೆನೆ ಹಬ್ಬವನ್ನು ಆಚರಿಸುತ್ತಾರೆ. ಮುಂಬಯಿ ಮತ್ತಿತರ ನಗರಗಳಲ್ಲಿ, ಕೊಲ್ಲಿ ರಾಷ್ಟ್ರಗಳಲ್ಲಿ , ಇಂಗ್ಲೆಂಡ್, ಅಮೇರಿಕಾ, ಕೆನಡಾಗಳಲ್ಲೂ ಇದನ್ನು ಆಚರಣೆ ಮಾಡಲಾಗುತ್ತದೆ. ಆಚರಣೆ ಈ ಹಿನ್ನಲೆಯಲ್ಲಿ ಬಂತು ಭಾರತದಿಂದ ವಿಮಾನ ಮೂಲಕ ಕೊಂಡೊಯ್ಯುವ ಹೊಸ ಭತ್ತದ ತೆನೆಗಳನ್ನು ಆಶೀರ್ವಚನ ಮಾಡಿ ಮನೆಗೆ ಒಯ್ದು, ಭಕ್ತಿ , ಶ್ರದ್ಧೆಯಿಂದ ಭೋಜನ ಸೇವಿಸುತ್ತಾರೆ. ತುಳು ನಾಡಿನಲ್ಲಿ ಯಾವುದೇ ಹೊಸ ಬೆಳೆಯ ಫಸಲು ಬಂದಾಗ ಅವರ ಪ್ರಥಮ ಫಲವನ್ನು ದೇವರಿಗೆ, ದೈವಗಳಿಗೆ ಅರ್ಪಿಸಿ ಶುಭಾಶೀರ್ವಾದಗಳಿಗಾಗಿ ಪ್ರಾಥನೆ ಸಲ್ಲಿಸುವುದು ಆನಾದಿ ಕಾಲದಿಂದಲೂ ಬೆಳೆದು ಬಂದ ಸಂಪ್ರದಾಯ. ಮೊಂತೆ ಹಬ್ಬದ ಆಚರಣೆ ಕೂಡ ಈ ಹಿನ್ನಲೆಯಲ್ಲಿಯೇ ಬಂದಿದೆ.

 

ಸಾಮೂಹಿಕ ಆಚರಣೆ ಕರಾವಳಿಯ ಎಲ್ಲಾ ಚರ್ಚ್ ಗಳಲ್ಲಿ 9 ದಿನ ಮುಂಚಿತವಾಗಿ ಅಂದರೆ ಆಗಸ್ಟ್ 30 ರಿಂದ ವಿಶೇಷವಾಗಿ ನೊವೇನಾ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ಮೊಂತಿ ಅಥವಾ ತೆನೆ ಹಬ್ಬದ ಆಚರಣೆ ಆರಂಭವಾಗುತ್ತದೆ. 9 ದಿನಗಳ ಕಾಲ ನಡೆಯುವ ನೊವೇನಾ ಪ್ರಾರ್ಥನೆಯಲ್ಲಿ ವಿಶೇಷವಾಗಿ ಚಿಕ್ಕ ಮಕ್ಕಳು ಪ್ರತಿದಿನ ಹೂವುಗಳನ್ನು ಕೊಂಡೊಯ್ದು ಮೇರಿ ಮಾತೆಗೆ ಸಮರ್ಪಿಸಿ ,ಗೀತೆಗಳನ್ನು ಹಾಡುವ ಮೂಲಕ ಸ್ತುತಿಸುತಾರೆ. ಕೊನೆಯ ದಿನ ಅಂದರೆ ಸೆಪ್ಟೆಂಬರ್ 8 ರಂದು ಹಬ್ಬದ ಸಂಭ್ರಮವನ್ನು ಸಾಮೂಹಿಕವಾಗಿ ಆಚರಿಸುತ್ತಾರೆ. ಅಂದು ಹೊಸ ಭತ್ತದ ತೆನೆಗಳನ್ನು ಚರ್ಚ್ ಗೆ ಕೊಂಡೊಯ್ದು ಆಶೀರ್ವಚನ ಮಾಡಿ, ಮೇರಿ ಮಾತೆಗೆ ಪುಷ್ಪಾರ್ಚನೆ ನಡೆಯುತ್ತೆದ. ಬಳಿಕ ಸಂಭ್ರಮದ ಬಲಿ ಪೂಜೆ ನೆರವೇರುತ್ತದೆ. ಈ ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಆಶೀರ್ವದಿಸಿದ ಭತ್ತದ ತೆನೆಗಳನ್ನು ಪ್ರತಿ ಕುಟುಂಬಕ್ಕೆ ವಿತರಿಸಲಾಗುತ್ತದೆ. ಹೂವು ಕೊಂಡು ಹೋದ ಮಕ್ಕಳಿಗೆ ಸಿಹಿ ತಿಂಡಿಯನ್ನು ಹಾಗೂ ಕಬ್ಬನ್ನು ಹಂಚಲಾಗುತ್ತದೆ. ಮಕ್ಕಳಿಗೆ ವಿತರಿಸಿದ ಬಳಿಕ ಕಬ್ಬು ಉಳಿಕೆಯಾದರೆ ಅದನ್ನು ಹಿರಿಯರಿಗೂ ಹಂಚಲಾಗುತ್ತದೆ. ಆ ನಂತರದ ಸಂಭ್ರಮ ಮನೆಗಳಲ್ಲಿ ನಡೆಯುತ್ತದೆ. ಒಟ್ಟಾಗಿ ಕುಳಿತು ಊಟ ಮಾಡ್ತಾರೆ ಮನೆಗೆ ತೆರಳಿದ ಬಳಿಕ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಬಳಿಕ ಆಶೀರ್ವದಿಸಿದ ಭತ್ತದ ಕಾಳಿನ ಅಕ್ಕಿಯನ್ನು ಕುಟ್ಟಿ ಪುಡಿ ಮಾಡಿ ಹಾಲು, ತೆಂಗಿನ ಹಾಲು ಪಾಯಸದಲ್ಲಿ ಹಾಕಿ ಮಿಶ್ರಣ ಮಾಡಿ ಅದನ್ನು ಕುಟುಂಬದ ಹಿರಿಯರೆನಿಸಿದವರು ಎಲ್ಲಾ ಮನೆ ಮಂದಿಗೆ ಬಡಿಸುತ್ತಾರೆ. ಭೋಜನದ ವೇಳೆ ಅದನ್ನು ಪ್ರಥಮವಾಗಿ ಸೇವಿಸುತ್ತಾರೆ. ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಕುಳಿತು ಈ ದಿನ ಊಟ ಮಾಡುತ್ತಾರೆ. ಕೌಟುಂಬಿಕ ಮೌಲ್ಯಗಳು ಕುಸಿಯುತ್ತಿರುವ ಅಧುನಿಕ ಕಾಲದಲ್ಲಿ ಇಂತಹ ಆಚರಣೆಗಳಿಗೆ ಹೆಚ್ಚಿನ ಅರ್ಥವಿದೆ. ಸಂಬಂಧಗಳನ್ನು ಬೆಸೆದು ಅಥವಾ ಮತ್ತೊಮ್ಮೆ ಬಲಪಡಿಸಿ ಕುಟುಂಬದ ಹಾಗೂ ಸಮುದಾಯದ ಐಕ್ಯವನ್ನು ಕಾಯ್ದುಕೊಂಡು ಹೋಗುವ ಒಂದು ಪ್ರಯತ್ನ ಈ ಹಬ್ಬದ ಮೂಲಕ ನಡೆಯುತ್ತದೆ.

ಸಸ್ಯಾಹಾರಿ ಭೋಜನ : ತೆನೆ ಹಬ್ಬದ ಪ್ರಯುಕ್ತ ಇಂದು ಕ್ರೈಸ್ತರಿಗೆ ಸಸ್ಯಾಹಾರಿ ಭೋಜನ. ಈ ದಿನದ ವಿಶೇಷವೇ ಸಸ್ಯಹಾರ ಭೋಜನ. ಕ್ರೈಸ್ತರ ಪ್ರತಿ ಮನೆಯಲ್ಲಿ ಇಂದು ಕನಿಷ್ಟ 3 ಅಥವಾ 5 ಅಥವಾ 7 ಬಗೆಯ ಸಸ್ಯಾಹಾರಿ ಖಾದ್ಯಗಳಾದರೂ ಇರಬೇಕಾಗುತ್ತದೆ. ಅದರಲ್ಲೂ ಕೆಸುವಿನ ದಂಟು, ಹರಿವೆ ದಂಟು, ಹೀರೆ, ಬೆಂಡೆಕಾಯಿಗೆ ಹೆಚ್ಚಿನ ಆದ್ಯತೆ. ಪಾಯಸ ಈ ಭೋಜನದ ಅವಿಭಾಜ್ಯ ಅಂಗ. ಕ್ರೈಸ್ತ ಬಾಂಧವರು ಇಂದು ಬಾಳೆ ಎಲೆಯಲ್ಲಿ ಊಟ ಮಾಡುವುದೂ ಇದರ ಇನ್ನೊಂದು ವೈಶಿಷ್ಟ್ಯ.