ರಾಷ್ಟ್ರೀಯ ಹೆದ್ದಾರಿ 66 ರ ಕೂಳೂರಿನಲ್ಲಿ ಹೊಸ ಸೇತುವೆ ನಿರ್ಮಾಣ ಸಂದರ್ಭ ಸ್ಥಳಾಂತರಗೊಂಡಿದ್ದ ಕೂಳೂರು ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಶಾಸಕರಾದ ಡಾ.ಭರತ್ ಶೆಟ್ಟಿ ವೈ ಶಂಕು ಸ್ಥಾಪನೆ ನೆರವೇರಿಸಿದರು.
ದೇವಸ್ಥಾನ ಸರಕಾರಿ ಭೂಮಿಯಲ್ಲಿದ್ದರೂ, ಸ್ಥಳಾಂತರದ ಸಂದರ್ಭ ಇದರ ಸಮಿತಿಯವರು ಶಾಸಕರಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಭೂಮಿ ದೊರಕಿಸುವಂತೆ ಮನವಿ ಮಾಡಿದ ಮೇರೆಗೆ ಬಂಗ್ರಕೂಳೂರು ರಸ್ತೆ ಬದಿ 55 ಸೆಂಟ್ ಸರಕಾರಿ ಜಾಗವನ್ನು ಮಾಡಿಕೊಟ್ಟಿದ್ದು, ಈ ಸಂದರ್ಭ ಸಮಿತಿ ವತಿಯಿಂದ ಶಾಸಕರನ್ನು ಸಮ್ಮಾನಿಸಲಾಯಿತು. ಮುಂದಿನ ದಿನಗಳಲ್ಲಿ ಅಯ್ಯಪ್ಪ ಮಾಲಾ ವೃತಧಾರಿಗಳಿಗೆ ಇಲ್ಲಿ ತಂಗಲು ಸಮುದಾಯ ಭವನದ ಭರವಸೆಯನ್ನು ಶಾಸಕರು ನೀಡಿದರು.
ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಮನಪಾ ಸದಸ್ಯ ಅನಿಲ್ ಕುಮಾರ್, ದೇವಸ್ಥಾನದ ಸಮಿತಿ,ಗೌರವಾಧ್ಯಕ್ಷ ಸುರೇಶಂದ್ರ ಶೆಟ್ಟಿ, ಪ್ರಮುಖರಾದ ಪ್ರಜ್ಞೇಶ್ ಶೆಟ್ಟಿ, ರಮೇಶ್ ಶೆಟ್ಟಿ, ದೇವಸ್ಥಾನದ ತಂತ್ರಿಗಳು, ಆಡಳಿತ ಸಮಿತಿಯವರು ಉಪಸ್ಥಿತರಿದ್ದರು