‘ನಿನಗೆ ದುಶ್ಚಟಗಳಿವೆ, ಹುಡುಗಿಯರ ಸಹವಾಸ ಜಾಸ್ತಿ, ಕೆಲವೇ ವರ್ಷಗಳಲ್ಲಿ ನೀನು ಸಾಯುತ್ತೀಯ’ ಭವಿಷ್ಯ ನುಡಿತ ಸ್ನೇಹಿತನನ್ನೇ ಕೊಲೆಗೈದ ಘಟನೆ ಬೆಂಗಳೂರಿನ ಗೋವಿಂದರಾಜನಗರದಲ್ಲಿ ನಡೆದಿದೆ.
ನರೇಶ್ ಎಂಬಾತ ಮದ್ಯದ ಅಮಲಿನಲ್ಲಿ ತನ್ನ ಸ್ನೇಹಿತನ ಕೈ ನೋಡಿ ಭವಿಷ್ಯ ಹೇಳುತ್ತ ಅಪಹಾಸ್ಯ ಮಾಡಿದ್ದು, ಇದರಿಂದ ರೊಚ್ಚಿಗೆದ್ದ ಮಾರಿಮುತ್ತು ಮಟ ಮಟ ಮಧ್ಯಾಹ್ನ ಬಾರ್ನಲ್ಲಿಯೇ ಕಲ್ಲಿನಿಂದ ಹೊಡೆದು ನರೇಶ್ನ್ನು ಹತ್ಯೆ ಮಾಡಿದ್ದಾನೆ.
ಮೃತ ನರೇಶ್ ಗಾರೆ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದು, ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆಗೆ ಗೋವಿಂದರಾಜನಗರದಲ್ಲಿ ವಾಸವಿದ್ದನು.
ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಯಾದ ಮಾರಿಮುತ್ತು ನನ್ನು ಗೋವಿಂದರಾಜನಗರ ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಆರೋಪಿ ಮಾರಿಮುತ್ತು ಹೆಚ್ಚು ಯಾರೊಂದಿಗೂ ಬೆರೆಯದ ವಿಚಿತ್ರ ಮನಸ್ಥಿತಿಯವನಾಗಿದ್ದ ಅನ್ನೋದು ಗೊತ್ತಾಗಿದೆ. ಹನ್ನೊಂದು ವರ್ಷದವನಿದ್ದಾಗಲೇ ವಿಜಯನಗರ ವ್ಯಾಪ್ತಿಯಲ್ಲಿ ಒಂದು ಹತ್ಯೆ ಮಾಡಿ ಸೆರೆವಾಸ ಅನುಭವಿಸಿ ಹೊರಬಂದಿದ್ದ ಎಂಬ ವಿಷಯ ತಿಳಿದಿದೆ.
ಇನ್ನೂ ಮೃತನ ಪತ್ನಿ ಮಹಾದೇವಿ ನೀಡಿದ ದೂರಿನ ಮೇರೆಗೆ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು ಜೈಲಿಗಟ್ಟಿದ್ದಾರೆ.