Friday, November 22, 2024
ಸುದ್ದಿ

ಸೆ‌. 13ರಿಂದ ಸೆ. 19ರ ವರೆಗೆ ಕಿಲ್ಲೆ ಮೈದಾನದಲ್ಲಿ ಸುಧಾಕರ್ ಶೆಟ್ಟಿ ಸಾರಥ್ಯದಲ್ಲಿ 61ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ; ಸಮಾರಂಭ ಉದ್ಘಾಟಿಸಲಿದ್ದಾರೆ ಶಾಸಕ ಸಂಜೀವ ಮಠಂದೂರು – ಕಹಳೆ ನ್ಯೂಸ್

ಪುತ್ತೂರು ಸೆ.9 : ಸೆಪ್ಟೆಂಬರ್ 13ರಿಂದ ಸೆಪ್ಟೆಂಬರ್ 19ರವರೆಗೆ 7 ದಿನಗಳ ಕಾಲ ಕಿಲ್ಲೆ ಮೈದಾನದಲ್ಲಿ 61ನೇ ವರ್ಷದ ಸಾರ್ವಜನಿಕ ಶ್ರೀ ಮಹಾಗಣಪತಿ ಉತ್ಸವ ನಡೆಯಲಿದೆ. 

ಈ ವರ್ಷ ಪ್ರಾಕೃತಿಕ ವಿಕೋಪ ಸಂಭವಿಸಿದ ಹಿನ್ನೆಲೆಯಲ್ಲಿ,61ನೇ ವರ್ಷದ ಈ  ಮಹಾಗಣೇಶೋತ್ಸವದಲ್ಲಿ ಖರ್ಚಿನ ಮಿತಿಯನ್ನು ಕಡಿಮೆ ಮಾಡಲಾಗಿದೆ. ಶೋಭಾಯಾತ್ರೆಯಲ್ಲಿ  ಉಳಿದ ಹಣದಲ್ಲಿ ಒಂದಷ್ಟು ಭಾಗವನ್ನು ಸಂತ್ರಸ್ತರ ನಿಧಿಗೆ ಕಳುಹಿಸಲಾಗುವುದು ಎಂದು ಕಿಲ್ಲೆ ಮೈದಾನದ ಸಾರ್ವಜನಿಕ ಶ್ರೀ ಮಹಾಗಣೇಶೋತ್ಸವದ ದೇವತಾ ಸಮಿತಿ ಅಧ್ಯಕ್ಷ ಎನ್.ಸುಧಾಕರ್ ಶೆಟ್ಟಿ ಕಹಳೆ ನ್ಯೂಸ್ ಗೆ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

“ಶೋಭಾಯಾತ್ರೆಯಲ್ಲಿ ವಿವಿಧ ಸ್ತಬ್ಧ ಚಿತ್ರಗಳ ಸಂಖ್ಯೆ ಕಡಿಮೆ ಮಾಡುವುದು ಸೇರಿದಂತೆ ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಉಳಿಕೆ ಹಣವನ್ನು ಸಂತ್ರಸ್ತರ ನಿಧಿಗೆ ನೀಡುವುದಾಗಿ” ಅವರು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು


ವಿಘ್ನೇಶ್ವರಾ ಪ್ರಾಕೃತಿಕ ವಿಕೋಪ ತಡೆಯಪ್ಪಾ…! ಸಕಲ ವಿಘ್ನ ನಿವಾರಿಸು ಎಂಬ ಸಂಕಲ್ಪದೊಂದಿಗೆ ಸೆ.17ರಂದು 1008 ಕಾಯಿ ಗಣಪತಿ ಹೋಮ :

ಕೊಡಗು, ಕೇರಳ, ಸೇರಿದಂತೆ ವಿವಿಧೆಡೆ ಸಂಭವಿಸಿದ ಪ್ರಾಕೃತಿಕ ವಿಕೋಪ ಭಯ ಹುಟ್ಟಿಸಿದೆ. ಮುಂದೆ ಪ್ರಾಕೃತಿಕ ವಿಕೋಪ ಆಗದಂತೆ ದೇವರು ಕರುಣೆ ತೋರಿಸಲಿ ಎಂದು ಈ ಬಾರಿ, ಜಿಲ್ಲೆಯ ಹಿರಿಯಣ್ಣನ ಸ್ಥಾನದಲ್ಲಿರುವ ಕಿಲ್ಲೆ ಮೈದಾನದ ಮಹಾಗಣಪತಿಗೆ ಸೆ.17ರಂದು 1008 ಕಾಯಿ ಗಣಪತಿ ಹೋಮ ಜರುಗಲಿದೆ. ಕಿಲ್ಲೆ ಮೈದಾನದ ಮಹಾಗಣಪತಿಯು ಕಾರಣೀಕ ದೇವನೆಂದು ಭಕ್ತರಿಂದ ಗೌರವಿಸಲ್ಪಡುತ್ತಿದ್ದಾನೆ. ಈ ಕಾರಣದಿಂದಲೇ ಇಲ್ಲಿ 7 ದಿನಗಳ ಕಾಲ ನಡೆಯುವ ಅನ್ನಸಂತರ್ಪಣೆಗೆ ವಸ್ತು ಮತ್ತು ಧನಸಹಾಯ ಭಕ್ತರಿಂದ ಸಲ್ಲಿಕೆಯಾಗುತ್ತದೆ. ಈತನ ಸನ್ನಿಧಿಯಲ್ಲಿ ಸಂಕಲ್ಪಿಸಿದ ಇಷ್ಠಾರ್ಥಗಳು ಮುಂದಿನ ವರ್ಷದ ಗಣೇಶೋತ್ಸವಕ್ಕೆ ಮೊದಲು ಈಡೇರುತ್ತವೆ ಎಂಬ ಪ್ರತೀತಿ ಕೂಡಾ ಇದೆ. ಈ ಕಾರಣದಿಂದ ಶ್ರೀ ಮಹಾಗಣಪತಿ ದೇವರಿಗೆ ಸಲ್ಲಿಸುವ ಯಾವುದೇ ವಿಶೇಷ ಸೇವೆಗಳು ಆತ ಪ್ರಸನ್ನನಾಗಲು ಕಾರಣವಾಗುತ್ತಿವೆ.ಹಾಗಾಗಿ  ವೇ ಮೂ. ಸುಬ್ರಹ್ಮಣ್ಯ ಹೊಳ್ಳರವರ ನೇತೃತ್ವದಲ್ಲಿ ಈ ವಿಶಿಷ್ಟ  ಗಣಪತಿ ಹೋಮ ಜರುಗಲಿದೆ. ಹೋಮಕ್ಕೆ ಅವಶ್ಯವಾದ ಕಬ್ಬು, ಬೆಲ್ಲ, ತುಪ್ಪ, ಬಾಳೆ ಹಣ್ಣು, ಹಲಸಿನ ಚೆಕ್ಕೆಗಳನ್ನು ಸಾರ್ವಜನಿಕರಿಂದ ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಲಾಗುವುದು ಎಂದು ದೇವತಾ ಸಮಿತಿ ಅಧ್ಯಕ್ಷ ಎನ್.ಸುಧಾಕರ್ ಶೆಟ್ಟಿ ತಿಳಿಸಿದ್ದಾರೆ .ಕಳೆದ ವರ್ಷ ಕಿಲ್ಲೆ ಮೈದಾನದ ಗಣಪನಿಗೆ ಮೂಡಪ್ಪ ಸೇವೆಯನ್ನು ವಿಶೇಷವಾಗಿ ಸಲ್ಲಿಸಲಾಗಿತ್ತು.


ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಗಲಿದೆ ಕಿಲ್ಲೆ ಮೈದಾನ :

ಸೆ.13ಕ್ಕೆ ಮಧ್ಯಾಹ್ನ ಸಮೃದ್ಧಿ ಮ್ಯೂಸಿಕಲ್ಸ್ ಪುತ್ತೂರು ಇವರಿಂದ ಭಕ್ತಿ ಭಾವ ಗೀತೆ, ಸಂಜೆ ಶ್ರೀ ಚಾಮುಂಡೇಶ್ವರಿ ಭಜನಾ ಸಂಘ, ಮೊಟ್ಟೆತ್ತಡ್ಕ ಪುತ್ತೂರು ಇವರಿಂದ ಭಜನೆ, ರಾತ್ರಿ ಕುದ್ಕಾಡಿ ವಿಶ್ವನಾಥ ರೈ ಮತ್ತು ವಿದುಷಿ ನಯನ ವಿ. ರೈ ಇವರ ಶಿಷ್ಯೆ ವೃಂದದವರಿಂದ ನೃತ್ಯ ಧಾರಾ ಕಾರ್ಯಕ್ರಮ. ಸೆ.14ಕ್ಕೆ ಬೆಳಿಗ್ಗೆ ವಿಶ್ವಕರ್ಮ ಮಹಿಳಾ ಮಂಡಳಿಯಿಂದ ಭಜನೆ, ಮಧ್ಯಾಹ್ನ ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದಿಂದ ತಾಳಮದ್ದಲೆ, ಸಂಜೆ ವಿನಾಯಕ ಸಂಗೀತ ಶಾಲೆಯಿಂದ ಭಜನೆ, ರಾತ್ರಿ ಕಲಾರಾಧನ ತಂಡ ಮಂಗಳೂರು ಇವರಿಂದ ಕಲಾ ವೈಭವ. ಸೆ.15ರಂದು ಉಮೇಶ್ ಕೃಷ್ಣನಗರ ಮತ್ತು ಬಳಗದವರಿಂದ ಸ್ಯಾಕ್ಸೋಫೋನ್ ವಾದನ, ರಾತ್ರಿ ನೇರಳಕಟ್ಟೆ ಶ್ರೀ ಪಾಂಚಜನ್ಯ ಯಕ್ಷಗಾನ ಕಲಾ ತಂಡದಿಂದ ದುಶ್ಯಾಸನ ರಕ್ತ ರಾತ್ರಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಸೆ.16ಕ್ಕೆ ಬೆಳಿಗ್ಗೆ ಸುಳ್ಯ ಆಲೆಟ್ಟಿ ಸದಾಶಿವ ಭಜನಾ ಸಂಘದಿಂದ ಭಜನೆ, ಮಧ್ಯಾಹ್ನ ಧೀ ಶಕ್ತಿ ಮಹಿಳಾ ಯಕ್ಷಗಾನ ಬಳಗದಿಂದ ತಾಳಮದ್ದಲೆ, ಸಂಜೆ ವಜ್ರ ಮಾತಾ ಮಹಿಳಾ ಭಜನಾ ಮಂಡಳಿಯಿಂದ ಭಜನೆ, ಸಂಜೆ ಪದ್ಮನಾಭ ಅರಿಯಡ್ಕ ಅವರಿಂದ ಸ್ಯಾಕ್ಸೋಪೋನ್ ವಾದನ, ರಾತ್ರಿ ಕಲಾಶ್ರಮ ಮಂಗಳೂರು ಇವರು ಅರ್ಪಿಸುವ ಭಾವಾ ರಂಗ ಸಂಗಮ ರಾಷ್ಟ್ರ ಭಕ್ತಿ ಜಾಗೃತಿ ಸಂಗೀತಾಧಾರಿತ ಕಾರ್ಯಕ್ರಮ, ಸೆ.17ಕ್ಕೆ ಬೆಳಿಗ್ಗೆ ವೀಣಾ ರಾಘವೇಂದ್ರ ಅವರ ಶಿಷ್ಯೆಯರಿಂದ ದಾಸರ ಪದಗಳು, ಮಧ್ಯಾಹ್ನ ದಾಮೋದರ್ ಪಿ.ಕೆ ಮತ್ತು ಬಳಗದವರಿಂದ ಸ್ಯಾಕ್ಸೋಫೋನ್ ವಾದನ, ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿಯಿಂದ ಭಜನೆ, ಸಂಜೆ ಪಿ.ಕೆ.ಗಣೇಶ್ ಬಳಗದಿಂದ ಸ್ಯಾಕ್ಸೋಫೋನ್ ವಾದನ,ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿಯಿಂದ ಭಜನೆ, ಸಂಜೆ ಪಿ.ಕೆ.ಗಣೇಶ್ ಬಳಗದಿಂದ ಸ್ಯಾಕ್ಸೋಫೋನ್ ವಾದನ, ರಾತ್ರಿ ಐಸಿರಿ ಕಲಾವಿದರು ಮಂಜೇಶ್ವರ ಇವರಿಂದ ಬಂಜಿಗ್ ಹಾಕೊಡ್ಚಿ ತುಳು ನಾಟಕ ಪ್ರದರ್ಶನಗೊಳ್ಳಲಿದೆ. ಸೆ.18ಕ್ಕೆ ವೈದೇಹಿ ಭಜನಾ ಮಂಡಳಿಯಿಂದ ಭಜನೆ, ಸಂಜೆ ವೈಷ್ಣವಿ ಮಹಿಳಾ ಭಜನಾ ಮಂಡಳಿಯಿಂದ ಭಜನೆ, ಸಂಜೆ ರಘುನಾಥ್ ಅರಿಯಡ್ಕ ಬಳಗದಿಂದ ಸ್ಯಾಕ್ಸೋಫೋನ್ ವಾದನ, ರಾತ್ರಿ ಶರ್ವಾಣಿ ಸ್ಕೂಲ್ ಆಫ್ ಡ್ಯಾನ್ಸ್ ಬೆಂಗಳೂರು ನಿರ್ದೇಶಕಿ ರಾಧಿಕಾ ಕಲ್ಲೂರಾಯ ಅವರ ತಂಡದಿಂದ ನೃತ್ಯ ವೈವಿಧ್ಯ ನರ್ತನ ಚತುರ್ ದರ್ಶನ ದಕ್ಷ ಯಜ್ಞ ಪ್ರದರ್ಶನಗೊಳ್ಳಲಿದೆ. ಸೆ.19ಕ್ಕೆ ಮಧ್ಯಾಹ್ನ ಸಾಂಸ್ಕೃತಿಕ ಕಲಾ ಕೇಂದ್ರ ಬೊಳುವಾರು ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ‌.

ಕಹಳೆ ನ್ಯೂಸ್ ಗೆ ಶ್ರೀ ಮಹಾಗಣೇಶೋತ್ಸವದ ದೇವತಾ ಸಮಿತಿ ಅಧ್ಯಕ್ಷ ಎನ್.ಸುಧಾಕರ್ ಶೆಟ್ಟಿ ಸಂಪೂರ್ಣ ಮಾಹಿತಿ ನೀಡಿದರು.