Saturday, November 23, 2024
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ರಾಜ್ಯದಲ್ಲಿಯೇ ಅತ್ಯಂತ ವಿಶಿಷ್ಟ ವಿನ್ಯಾಸ ಮತ್ತು ವಾಸ್ತುಶಿಲ್ಪದ ಧರ್ಮಸ್ಥಳ ಪೊಲೀಸ್ ಠಾಣೆ ಉದ್ಘಾಟಿಸಿದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ| ಡಿ.ವೀರೇಂದ್ರ ಹೆಗ್ಗಡೆ – ಕಹಳೆ ನ್ಯೂಸ್

ಬೆಳ್ತಂಗಡಿ : ದೇಶದಲ್ಲೇ ಅತ್ಯಂತ ಸ್ವತ್ಛ ಕ್ಷೇತ್ರ ಎಂಬ ಸ್ಥಾನಮಾನ ಧರ್ಮಸ್ಥಳಕ್ಕಿದೆ. ಕ್ಷೇತ್ರದ ರಕ್ಷಕರು ಧರ್ಮದೈವಗಳಾದರೆ ಕ್ಷೇತ್ರಕ್ಕೆ ಭರುವ ಭಕ್ತರನ್ನು ರಕ್ಷಿಸಿ ಅಧರ್ಮಕ್ಕೆ ಶಿಕ್ಷೆ ವಿಧಿಸಲು ಪೊಲೀಸ್‌ ಠಾಣೆ ಇರುತ್ತದೆ. ಧರ್ಮ ಸಂಸ್ಥಾಪನೆಗೆ ನಿರ್ಭೀತ ವಾತಾವರಣ ಸೃಷ್ಟಿಯಾದಲ್ಲಿ ಆ ದೇಶ ಸುಭಿಕ್ಷೆಯಿಂದಿರುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಅಭಿಪ್ರಾಯಪಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯ ಸರಕಾರ, ದ.ಕ. ಜಿಲ್ಲಾ ಪೊಲೀಸ್‌ ಘಟಕದ ವತಿಯಿಂದ 3.2 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಧರ್ಮಸ್ಥಳ ಪೊಲೀಸ್‌ ಠಾಣೆಯ ನೂತನ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಈ ಮೂಲಕ ಕ್ಷೇತ್ರದಲ್ಲಿ ಇನ್ನಷ್ಟು ಧರ್ಮ ರಕ್ಷಣೆಯಾಗುವಂತೆ ಶಾಸಕ ಹರೀಶ್‌ ಪೂಂಜ ಮಾಡಿದ್ದಾರೆ. ಅಪರಾಧಗಳು ಕಡಿಮೆಯಾಗಲಿ. ಅಣ್ಣಪ್ಪನ ಕೃಪೆಯೊಂದಿಗೆ ಪೊಲೀಸರು ಉತ್ತಮ ಸೇವೆ ನೀಡುವಂತಾಗಲಿ ಎಂದು ಡಾ| ಹೆಗ್ಗಡೆ ಹರಸಿದರು.

ಕಿಯೋನಿಕ್ಸ್‌ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ‌ ಮಾತನಾಡಿ, ಖಾವಿ, ಖಾಕಿ, ಖಾದಿ ಈ ಮೂರು ದೇಶದ ಪ್ರಜಾಪ್ರಭುತ್ವದ ಶಕ್ತಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಹರೀಶ್‌ ಪೂಂಜ ಮಾತನಾಡಿ, ಬೆಳ್ತಂಗಡಿ ತಾಲೂಕಿನಲ್ಲಿ ಪ್ರತಿಯೊಂದರಲ್ಲೂ ಅಚ್ಚುಕಟ್ಟು ಮೂಡಿಬರಲು ಧರ್ಮಾಧಿಕಾರಿಗಳೇ ಪ್ರೇರಣೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೃಹಸಚಿವರಾಗಿದ್ದಾಗ ಧರ್ಮಸ್ಥಳ ಠಾಣೆಗೆ ನೂತನ ಕಟ್ಟಡದ ಬೇಡಿಕೆ ಇರಿಸಿದ್ದೆವು. ಉತ್ತಮ ವಿನ್ಯಾಸ ರಚಿಸಿದಾಗ ಹೆಗ್ಗಡೆಯವರು ಇಷ್ಟಪಟ್ಟಿದ್ದರು. ಅದರಂತೆ ಇಂದು ರಾಜ್ಯದಲ್ಲಿ ಮೊದಲ ಖಾಸಗಿ ವಿನ್ಯಾಸದ ಪೊಲೀಸ್‌ ಠಾಣೆಯಾಗಿ ಇದು ಮೂಡಿಬಂದಿದೆ. ಇಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರು ಉತ್ತಮ ಜನಸೇವೆ ನೀಡುವ ಮೂಲಕ ರಾಜ್ಯ, ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಲಿ ಎಂದು ಹಾರೈಸಿದರು.

ಕನ್ಯಾಡಿ ಶ್ರೀ ರಾಮಕ್ಷೇತ್ರದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ವಿಧಾನ ಪರಿಷತ್‌ ಸದಸ್ಯ ಕೆ. ಪ್ರತಾಪಸಿಂಹ ನಾಯಕ, ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷೆ ಜಯಾ ಮೋನಪ್ಪ ಗೌಡ, ಬೆಳ್ತಂಗಡಿ ಠಾಣೆಯ ಪೊಲೀಸ್‌ ನಿರೀಕ್ಷಕ ಕೆ. ಸತ್ಯನಾರಾಯಣ, ಬೆಳ್ತಂಗಡಿ ವೃತ್ತ ನಿರೀಕ್ಷಕ ಶಿವಕುಮಾರ್‌, ಧರ್ಮಸ್ಥಳ ಠಾಣೆ ಎಸ್‌.ಐ. ಅನಿಲ್‌ ಕುಮಾರ್‌ ಉಪಸ್ಥಿತರಿದ್ದರು.

ದ.ಕ. ಎಸ್‌ಪಿ ಡಾ| ವಿಕ್ರಮ್‌ ಅಮಟೆ ಸ್ವಾಗತಿಸಿದರು. ಬಂಟ್ವಾಳ ಉಪವಿಭಾಗದ ಡಿವೈಎಸ್‌ಪಿ ಪ್ರತಾಪ ಸಿಂಗ್‌ ಥೋರಟ್‌ ವಂದಿಸಿದರು. ಧರ್ಮಸ್ಥಳ ಗ್ರಾ.ಪಂ. ಉಪಾಧ್ಯಕ್ಷ ಶ್ರೀನಿವಾಸ್‌ ರಾವ್‌ ಕಾರ್ಯಕ್ರಮ ನಿರ್ವಹಿಸಿದರು.