ರಾಜ್ಯ ವಿಧಾನಸಭಾ ಚುನಾವಣೆಗೆ ವೇಳಾಪಟ್ಟಿ ಪ್ರಕಟ: ಮೇ 10 ಮತದಾನ, ಮೇ 13 ಫಲಿತಾಂಶ – ಕಹಳೆ ನ್ಯೂಸ್
ನವದೆಹಲಿ : ಬಹುನಿರೀಕ್ಷಿತ ಕರ್ನಾಟಕ ವಿಧಾನಸಭಾ ಚುನಾವಣೆಗೆ ವೇಳಾಪಟ್ಟಿ ಪ್ರಕಟಗೊಂಡಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಹೊರಬರಲಿದೆ.
ನವದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್, ಕರ್ನಾಟಕ ವಿಧಾನಸಭೆಯ ವೇಳಾಪಟ್ಟಿಯನ್ನು ಪ್ರಕಟಿಸಿ, ಸಂಪೂರ್ಣ ವಿವರ ನೀಡಿದ್ದಾರೆ. ಇಂದಿನಿಂದಲೇ ರಾಜ್ಯಾದ್ಯಂತ ನೀತಿಸಂಹಿತೆ ಜಾರಿಗೆ ಬಂದಿದೆ.
ಕರ್ನಾಟಕ ವಿಧಾನಸಭಾ ಚುನಾವಣೆ ಒಟ್ಟು ಮತದಾರರು- 5,21,73,579 ಪುರುಷ ಮತದಾರರು-2,62,42,561 ಮಹಿಳಾ ಮತದಾರರು-2,59,26,319 ಮೊದಲ ಬಾರಿ ಮತದಾರರು-9,17,241 80 ವರ್ಷ ಮೇಲ್ಪಟ್ಟ ಮತದಾರರು- 12,15,763 ವಿಕಲಾಂಗ ಮತದಾರರು-5,55,073 ಒಟ್ಟು ಮತದಾನ ಕೇಂದ್ರ-58,282 ನಗರ ಪ್ರದೇಶ ಮತಗಟ್ಟೆಗಳು- 24,063 ಗ್ರಾಮೀಣ ಪ್ರದೇಶ ಮತಗಟ್ಟೆಗಳು-34,219 ಸೂಕ್ಷ್ಮ ಮತಗಟ್ಟೆಗಳು-12,000
ಒಟ್ಟು 58282 ಮತಗಟ್ಟೆಗಳನ್ನು ತೆರೆಯಲಾಗಿದೆ. ಈ ಪೈಕಿ 12,000 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆ ಎಂದು ಪರಿಗಣಿಸಲಾಗಿದೆ. 80 ವರ್ಷ ಮೇಲ್ಪಟ್ಟವರಿಗೆ ಮೊದಲ ಬಾರಿಗೆ ಮನೆಯಿಂದಲೇ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಅವರು ಮೊದಲೇ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ರಾಜೀವ್ ಕುಮಾರ್ ತಿಳಿಸಿದರು. ಏಪ್ರಿಲ್ 1ಕ್ಕೆ 18 ವರ್ಷ ಪೂರ್ಣಗೊಳ್ಳುವವರಿಗೂ ಈ ಬಾರಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮೊದಲ ಬಾರಿಗೆ ಈ ಬಾರಿ 9,17,241 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ ಎಂದು ಅವರು ತಿಳಿಸಿದರು.