ಮಂಗಳೂರು: ಭಾರತೀಯ ಜೈನ್ ಮಿಲನ್ ಮಂಗಳೂರು ಶಾಖೆಯ ಮಾರ್ಚ್ ತಿಂಗಳ ಮಾಸಿಕ ಸಭೆಯು ದಿನಾಂಕ 01.04.2023 ನೇ ಶನಿವಾರ ಸಂಜೆ ನಗರದ ಹೋಟೆಲ್ ಶ್ರೀನಿವಾಸ್ ಸಭಾಂಗಣದಲ್ಲಿ ವೀರ್ ಪ್ರಮೋದ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಜರುಗಿತು.
ಮಾಸಿಕ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಂಪನ್ಮೂಲ ವ್ಯಕ್ತಿಯಾಗಿ ಖ್ಯಾತ ಪತ್ರಿಕೋದ್ಯಮಿ ಶ್ರೀ ಸುದೇಶ್ ಜೈನ್ ಅವರು ವರ್ತಮಾನದಲ್ಲಿ ಪತ್ರಿಕೋದ್ಯಮದ ಸವಾಲಿನ ಬಗ್ಗೆ ವಿಚಾರಪೂರ್ಣ ವಿವರಗಳನ್ನು ನೀಡಿದರು.
ವೀರ ಕುವರ ಕೃತಾರ್ಥ್ ಜೈನ್ ಪ್ರಾರ್ಥನೆಯೊಂದಿಗೆ ಆರಂಭವಾದ ಸಭೆಯಲ್ಲಿ ಮಿಲನ್ ಅಧ್ಯಕ್ಷರಾದ ವೀರ್ ಪ್ರಮೋದ್ ಕುಮಾರ್ ಸ್ವಾಗತಿಸಿ ಕಳೆದೆರಡು ವರುಷಗಳ ಮಿಲನ್ ಚಟುವಟಿಕೆಗಳ ಸಿಂಹಾವಲೋಕನ ಮಾಡಿ ಸಹಕರಿಸಿದ ಎಲ್ಲಾ ಬಂಧುಗಳಿಗೆ ಕೃತಜ್ಞತೆ ಸಲ್ಲಿಸಿದರು. ಬಳಿಕ ವೀರ್ ಪುಷ್ಪರಾಜ್ ಅವರು ಅಗಲಿನ ದಿವ್ಯ ಚೇತನ ಶ್ರವಣಬೆಳಗೊಳ ಶ್ರೀಗಳಿಗೆ ವಿನಯಾಂಜಲಿ ಸಮರ್ಪಿಸಿದರು ಹಾಗೂ ಶ್ರೀಗಳ ಸದ್ಗತಿಗಾಗಿ ಮಿಲನ್ ಸದಸ್ಯರಿಂದ ಸಾಮೂಹಿಕ ಪಂಚಣಮೋಕಾರ ಮಂತ್ರ ಪಠಣೆ ನೆರವೇರಿಸಲಾಯಿತು. ಮಿಲನ್ ಕಾರ್ಯದರ್ಶಿಗಳಾದ ವೀರ್ ಮಹಾವೀರ್ ಪ್ರಸಾದ್ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಮುಂದಿನ 2023-24 ನೇ ಸಾಲಿನ ಅಧ್ಯಕ್ಷ ಪದವಿಯನ್ನಲಂಕರಿಸಲಿರುವ ವೀರ್ ರತ್ನಾಕರ್ ಜೈನ್ ಅವರನ್ನು ಮುಖ್ಯ ಅತಿಥಿಗಳು ಹೂ ಗುಚ್ಚ ನೀಡಿ ಗೌರವಿಸಿದರು. ವೀರಾಂಗನಾ ಅನಿತಾ ಸಂತೋಷ್ ಜೈನ್ ರವರು ಸದಸ್ಯರ ಹುಟ್ಟು ಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವದ ಗೌರವ ಕಾರ್ಯ ನೆರವೇರಿಸಿದರು. ವೀರ್ ಯಶೋಧರ ಜೈನ್ ರವರ ಶಾಂತಿಮಂತ್ರದೊಂದಿಗೆ ಸಂಪನ್ನವಾದ ಸಭೆಯಲ್ಲಿ ಮಿಲನ್ ಖಜಾಂಚಿಯಾದ ವೀರಾಂಗನಾ ಶಿಲ್ಪ ಸಂದೀಪ ಅವರ ಕಾರ್ಯಕ್ರಮ ನಿರೂಪಣೆ ಮಾಡಿ ವಂದನಾರ್ಪಣೆ ಮಾಡಿದರು.