ಉಡುಪಿ, ಸೆ 13 : ಜಿಲ್ಲೆಯಲ್ಲಿ ದಕ್ಷತೆಯ ಹಾಗೂ ನಿಷ್ಠಾವಂತ ಅಧಿಕಾರಿಯಾಗಿರುವ ಎಸ್ಪಿ ಲಕ್ಷ್ಮಣ್ ನಿಂಬರಗಿ ಅವರನ್ನು ಎತ್ತಂಗಡಿ ಮಾಡುವ ಹುನ್ನಾರ ನಡೆದಿದೆ ಎಂದು ತಿಳಿದು ಬಂದಿದೆ. ಸೆಪ್ಟೆಂಬರ್ 10ರಂದು ಕಾಂಗ್ರೆಸ್ ಕರೆ ನೀಡಿದ ಭಾರತ್ ಬಂದ್ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಉಡುಪಿಯಲ್ಲೂ ಪ್ರತಿಭಟನೆ ನಡೆಸಿದ್ದರು.ಪ್ರತಿಭಟನೆಯ ಸಂದರ್ಭದಲ್ಲಿ ಉಂಟಾದ ಘರ್ಷಣೆ ಹತ್ತಿಕ್ಕಲು ಎಸ್ಪಿ ನಿಂಬರಗಿ ಲಘು ಲಾಠಿಪ್ರಹಾರವನ್ನು ನಡೆಸಿದ್ದರು. ಇದೇ ಕಾರಣಕ್ಕಾಗಿ ನಾಯಕರು ಎಸ್ಪಿಯವರನ್ನು ಎತ್ತಂಗಡಿ ನಡೆಸಲು ಹುನ್ನಾರ ರೂಪಿಸಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ನಾಯಕರು ತಮ್ಮದೇ ಸಮ್ಮಿಶ್ರ ಸರಕಾರ ಹಾಗೂ ಗೃಹ ಸಚಿವರಿಗೆ ಒತ್ತಡ ಹೇರುವ ಮೂಲಕ ಎಸ್ಪಿಯವರನ್ನು ಎತ್ತಂಗಡಿ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಉಡುಪಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿ 9 ತಿಂಗಳು ಕಾನೂನು ಸುವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವ ಎಸ್ಪಿಯವರ ವಿರುದ್ಧ ಇದೀಗ ಅಪಪ್ರಚಾರ ಮಾಡಲಾಗುತ್ತಿದೆ. ಕಾಂಗ್ರೆಸ್‌ನ ಇಬ್ಬರು ಮಾಜಿ ಸಚಿವರು ಎಸ್ಪಿಯವರ ಎತ್ತಂಗಡಿಗೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.
ಉಡುಪಿಯಲ್ಲಿ ಲಾಠಿ ಚಾರ್ಜ್ ನಡೆಸಿರುವುದನ್ನೇ ದೊಡ್ಡ ವಿಚಾರವನ್ನಾಗಿ ಮಾಡಿಕೊಂಡಿರುವ ಮಾಜಿ ಸಚಿವರು, ಅಗತ್ಯವೆನಿಸಿದರೆ ಗೃಹ ಸಚಿವರಿಗೆ ದೂರು ನೀಡುವುದಾಗಿ ಹೇಳಿದ್ದರು. ಇದೀಗ ಮಾಜಿ ಸಚಿವ ವಿನಯಕುಮಾರ ಸೊರಕೆ ಅವರು ಪೊಲೀಸ್ ದೌರ್ಜನ್ಯ ನಡೆದಿದೆ ಎಂದೂ ಆರೋಪಿಸಿದ್ದಾರೆ. ಆ ಮೂಲಕ ಇಬ್ಬರು ಮಾಜಿ ಸಚಿವರು ದಕ್ಷ ಅಧಿಕಾರಿಯೊಬ್ಬರ ಕಾರ್ಯ ಧಕ್ಷತೆಗೆ ಅಡ್ಡಿಯಾಗತೊಡಗಿದ್ದಾರೆ.