ಕೃಷಿಕರಿಗೆ ಆಯುಧ ಠೇವಣಿ ವಿನಾಯಿತಿ : ಪ್ರಕರಣವಾರು ಪರಿಶೀಲಿಸಿ ಕ್ರಮಕ್ಕೆ ತೀರ್ಮಾನ – ಕಹಳೆ ನ್ಯೂಸ್
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಪ್ರಾಣಿಗಳಿಂದ ಬೆಳೆ ರಕ್ಷಣೆಗಾಗಿ ಆಯುಧ ಪರವಾನಿಗೆ ಪಡೆದ ಕೃಷಿಕರು ಠೇವಣಿಯಿಂದ ವಿನಾಯಿತಿ ಕೋರಿ ಸಲ್ಲಿಸಲಾಗುವ ಅರ್ಜಿಗಳನ್ನು ಪ್ರಕರಣವಾರು ಪರಿಶೀಲಿಸಿ ಕ್ರಮ ವಹಿಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ರವಿಕುಮಾರ್ ಎಂ.ಆರ್. ನೇತೃತ್ವದ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ತೀರ್ಮಾನಿಸಿದೆ.
ಶನಿವಾರ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆ ನಡೆದಿದ್ದು, ರೈತರ ಬೆಳೆಯ ಸಂರಕ್ಷಣೆಯ ಹಿತದೃಷ್ಟಿಯಿಂದ ವಿನಾಯಿತಿ ಕೋರಿ ಬರುವ ಅರ್ಜಿದಾರರ ಕೋರಿಯನ್ನು ಪ್ರಕರಣವಾರು ಪರಿಶೀಲಿಸಿ ಅಗತ್ಯತೆ ಹಾಗೂ ಅನಿವಾರ್ಯತೆಯ ಮೇರೆಗೆ ವಿನಾಯಿತಿ ನೀಡಲು ತೀರ್ಮಾನಿಸಲಾಯಿತು.
ಈ ಸಂಬಂಧ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದಲ್ಲಿ ತಂಡವನ್ನು ರಚಿಸಲಾಗಿದ್ದು, ಸಮಿತಿಯು ಅರ್ಜಿಗಳನ್ನು ಪರಿಶೀಲಿಸಿ ಒಂದು ದಿನದೊಳಗೆ ಜಿಲ್ಲಾ ಮಟ್ಟದ ಸಮಿತಿಗೆ ವರದಿ ಸಲ್ಲಿಸಬೇಕಿದೆ.
ತಾಲೂಕು ಮಟ್ಟದ ತಂಡದಲ್ಲಿ ಸ್ಥಳೀಯ ಪೊಲೀಸ್ ಉಪ ನಿರೀಕ್ಷಕರು, ಕೃಷಿ ಹಾಗೂ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರು ಸದಸ್ಯರಾಗಿದ್ದು, ವಲಯ ಅರಣ್ಯಾಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.
ಚುನಾವಣ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಬೆಳೆ ರಕ್ಷಣೆಗಾಗಿ ಮಂಜೂರು ಮಾಡಲಾಗಿರುವ ಎಲ್ಲಾ ರೀತಿಯ ಕೋವಿಗಳು ಸೇರಿದಂತೆ ಆಯುಧ ಪರವಾನಿಗೆದಾರರು ತಮ್ಮ ಆಯುಧಗಳನ್ನು ಎ. 24ರೊಳಗೆ ಠೇವಣಿ ಇರಿಸುವಂತೆ ಆದೇಶ ಹೊರಡಿಸಲಾಗಿತ್ತು. ಆದರೆ ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ ಮೊದಲಾದ ಕಡೆ ಕಾಡು ಪ್ರದೇಶಗಳಲ್ಲಿ ಕಾಡು ಪ್ರಾಣಿಗಳಿಂದ ಕೃಷಿ ನಾಶವಾಗುತ್ತಿರುವ ಬಗ್ಗೆ ರೈತರು ಅನುಭವಿಸುತ್ತಿರುವ ತೊಂದರೆ ಬಗ್ಗೆ ತಹಶೀಲ್ದಾರರು ಸಭೆಯಲ್ಲಿ ಜಿಲ್ಲಾಧಿಕಾರಿ ಗಮನ ಸೆಳೆದಿರುವ ಕುರಿತಂತೆ ಜಿಲ್ಲಾ ಮಟ್ಟದ ಸಮಿತಿ ಈ ತೀರ್ಮಾನ ಮಾಡಿದೆ.
ದ.ಕ. ಜಿಲ್ಲೆ ಅತಿ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಚುನಾವಣೆ ಸಂದರ್ಭ ಸಣ್ಣ ವಿಚಾರಗಳು ಕೂಡಾ ಸಂಘರ್ಷಕ್ಕೆ ಸಾಧ್ಯತೆಯ ಹಿನ್ನೆಲೆಯಲ್ಲಿ ಆತ್ಮರಕ್ಷಣೆಗಾಗಿ ಪರವಾನಿಗೆ ಪಡೆದವರು ತಮ್ಮ ಪರವಾನಿಗೆಯಲ್ಲಿ ಹೊಂದಿರುವ ಆಯುಧಗಳನ್ನು ಸಮೀಪದ ಪೊಲೀಸ್ ಠಾಣೆಯಲ್ಲಿ ಹಾಗೂ ಇತರ ಶಸ್ತ್ರಾಸ್ತ್ರಗಳನ್ನು ಹತ್ತಿರದ ನಮೂನೆ 8ರಲ್ಲಿ ಶಸ್ತ್ರಾಸ್ತ್ರಗಳನ್ನು ಠೇವಣಿ ಇಡುವ ಬಗ್ಗೆ ಪರವಾನಿಗೆಯನ್ನು ದೊಂದಿರುವ ಅಧಿಕೃತ ಕೋವಿ ಮದ್ದುಗುಂಡು ವ್ಯಾಪಾರಿಗಳಲ್ಲಿ ಎ. 24ರೊಳಗೆ ಠೇವಣಿ ಇರಿಸುವಂತೆ ಜಿಲ್ಲಾಧಿಕಾರಿ ಸೂಕ್ತ ಆದೇಶ ಹೊರಡಿಸಲು ಸಭೆಯಲ್ಲಿ ನಿರ್ಣಯಿಸಲಾಗಿದೆ.
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯನ್ನು ಹೊರತುಪಡಿಸಿ ಯಾವುದೇ ವ್ಯಕ್ತಿ ತಮ್ಮ ರಕ್ಷಣೆಗೆ ಆಯುಧದ ತೀರಾ ಅಗತ್ಯ ಇದ್ದಲ್ಲಿ ಎ. 20ರವರೆಗೆ ಸಂಬಂಧಪಟ್ಟ ಪೂರಕ ದಾಖಲೆಗಳೊಂದಿಗೆ ಪೊಲೀಸ್ ಅಧೀಕ್ಷಕರಿಗೆ ಅರ್ಜಿಯನ್ನು ಸಲ್ಲಿಸಿದರೆ, ಅವರಿಗೆ ಸಮಂಜಸವೆಂದು ಕಂಡು ಬಂದಲ್ಲಿ ವಿನಾಯಿತಿ ನೀಡುವ ಕುರಿತು ಅಗತ್ಯ ಕ್ರಮ ವಹಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಕುಮಾರ, ಪೊಲೀಸ್ ಅಧೀಕ್ಷಕ ಡಾ| ವಿಕ್ರಮ್ ಅಮಟೆ, ಬಂಟ್ವಾಳ ಪೊಲೀಸ್ ಉಪ ಅಧೀಕ್ಷಕ ಪ್ರತಾಪ್ ಸಿಂಗ್, ಪುತ್ತೂರು ಪೊಲೀಸ್ ಉಪ ಅಧೀಕ್ಷಕ ವೀರಯ್ಯ ಹಿರೇಮs. ಹಾಗೂ ತಹಶೀಲ್ದಾರರು ಉಪಸ್ಥಿತರಿದ್ದರು.