ಬೆಂಗಳೂರು: 2022-23ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಇಂದಿನಿಂದ ರಾಜ್ಯಾದ್ಯಂತ ಆರಂಭವಾಗಲಿದೆ.
ರಾಜ್ಯಾದ್ಯಂತ ಮಾರ್ಚ್ 09 ರಿಂದ 29ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆದಿದ್ದು, ಇಂದಿನಿಂದ 65 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಮೌಲ್ಯಮಾಪನ ಕಾರ್ಯ ನಡೆಯಲಿದೆ.
ಮೌಲ್ಯಮಾಪನ ಕಾರ್ಯಕ್ಕೆ 25 ಸಾವಿರ ಉಪನ್ಯಾಸಕರನ್ನು ನಿಯೋಜನೆ ಮಾಡಲಾಗಿದೆ. ಒಟ್ಟು ದ್ವಿತೀಯ ಪಿಯುಸಿಯಲ್ಲಿ 7.27 ಲಕ್ಷ ವಿದ್ಯಾರ್ಥಿಗಳು 37 ವಿಷಯಗಳಿಗೆ ಪರೀಕ್ಷೆ ಬರೆದಿದ್ದು, 45 ಲಕ್ಷ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯಲಿದೆ.
ದ್ವಿತೀಯ ಪಿಯುಸಿ ಫಲಿತಾಂಶವನ್ನು ಮೇ ಮೊದಲ ವಾರದಲ್ಲಿ ಪ್ರಕಟಿಸುವ ಉದ್ದೇಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಹೊಂದಿದೆ. ಆದರೆ ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ಉಪನ್ಯಾಸಕರು ಹಾಜರಾಗುವ ಸಾಧ್ಯತೆ ಇರುವುದರಿಂದ ದ್ವಿತೀಯ ಪಿಯುಸಿ ಫಲಿತಾಂಶ ವಿಳಂಬವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.